ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಭಾರಿ ಮಳೆ: ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು

Last Updated 30 ಆಗಸ್ಟ್ 2022, 21:07 IST
ಅಕ್ಷರ ಗಾತ್ರ

ಕೆ.ಆರ್.ಪುರ: ಭಾರಿ ಮಳೆಯಿಂದ ಮಹದೇವಪುರ ಕ್ಷೇತ್ರದ ನಲ್ಲೂರಹಳ್ಳಿಯ ಡಿಎನ್ಎ ಈಡನ್ ವ್ಯೂ ಅಪಾರ್ಟ್‌ಮೆಂಟ್‌ ಬಳಿ ರಾಜ ಕಾಲುವೆಯ ತಡೆಗೋಡೆ ಒಡೆದು ಹತ್ತಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದೆ.

ವೈಲ್ಡ್‌ಫೀಲ್ಡ್‌ನ ಶೀಲವಂತನ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ತಡೆಗೋಡೆ ಒಡೆದ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ.

ಕೆರೆಗೆ ಹರಿಯುವ ನೀರು ಗಾಲುವೆಯು ಮುಚ್ಚಿ ಹೋಗಿರುವುದ ರಿಂದ ಮಳೆ ನೀರು ರಭಸವಾಗಿ ಹರಿದು, ತಡೆಗೋಡೆ ಬಿದ್ದಿದೆ.

ನಲ್ಲೂರಹಳ್ಳಿಯ ವಿಕ್ಟೋರಿಯನ್ ವ್ಯೂ ಬಡಾವಣೆ, ಡಿಎನ್ಎ ಅಪಾರ್ಟ್‌ಮೆಂಟ್‌, ಜೈ ಅಪಾರ್ಟ್‌ಮೆಂಟ್‌, ಸಂಜೀವಿನಿ ಅಪಾರ್ಟ್‌ಮೆಂಟ್‌, ಬೋರ್‌ವೆಲ್‌ ರಸ್ತೆಯ ಎಸ್ಎಸ್ ಫೆಸಿಲಿಟಿ ಹೋಮ್ಸ್ ಮತ್ತು ಶ್ರೀನಿವಾಸ್ ಅಪಾರ್ಟ್‌ಮೆಂಟ್‌ಗಳಲ್ಲಿ 4ರಿಂದ 5 ಅಡಿಗಳಷ್ಟು ಮಳೆನೀರು ನಿಂತು ಸಂಪೂರ್ಣವಾಗಿ ಜಲಾವೃತವಾಗಿದ್ದವು.

ಅಪಾರ್ಟ್‌ ಮೆಂಟ್‌ ನಿವಾಸಿ ಗಳು ನೀರಿನಿಂದ ಮುಳುಗಿರುವ ವಾಹನ ಗಳನ್ನು ಹೊರತೆಗೆಯಲು ಹರ ಸಾಹಸ ಪಟ್ಟರು.

ಈ ಸಮಸ್ಯೆ ಆಗುತ್ತಿರುವುದು ಮೊದಲೇನಲ್ಲ. ಪ್ರತಿಸಾರಿ ಮಳೆ ಬಂದಾಗಲೂ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಅಧಿಕಾರಿಗಳು ಸಮಸ್ಯೆ ಉಂಟಾದಾಗ ಮಾತ್ರ ಪರಿಹಾರ ನೀಡು ತ್ತಾರೆ. ಶಾಶ್ವತ ಪರಿಹಾರ ನೀಡದೆ ಹಾಗೆ ಬೀಡುತ್ತಾರೆ ಎಂದು ನಿವಾಸಿ ಪ್ರದೀಪ್ ದೂರಿದರು.

ಶಾಸಕರ ಭೇಟಿ, ಪರಿಶೀಲನೆ: ಮಳೆ ಯಿಂದಾಗಿ ಜಲಾವೃತವಾಗಿರುವ ಸ್ಥಳಕ್ಕೆ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ, ಪರಿಶೀಲಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ, ಬಿಬಿಎಂಪಿ ಜಂಟಿ ಆಯುಕ್ತ ವೆಂಕಚಲಪತಿ, ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ, ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಲತಿ, ಸಂತೋಷ್, ಜಯಶಂಕರ್ ರೆಡ್ಡಿ, ರಾಜೇಶ್ ಇದ್ದರು.

ಬ್ರೂಕ್‌ಫೀಲ್ಡ್‌: ಕಾರ್ಮಿಕರ ಗುಡಿಸಲುಗಳು ಜಲಾವೃತ
ಬೆಂಗಳೂರು:
ಧಾರಾಕಾರ ಮಳೆಯಿಂದ ದೊಡ್ಡನೆಕ್ಕುಂದಿ ಬಳಿ ಬ್ರೂಕ್‌ಫೀಲ್ಡ್‌ನಲ್ಲಿ ಕಾರ್ಮಿಕರ ಗುಡಿಸಲುಗಳು ಸಂಪೂರ್ಣ ಜಲಾವೃತಗೊಂಡಿವೆ.

ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ವಿವಿಧೆಡೆ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರವೂ ಸೇರಿ 80ಕ್ಕೂ ಹೆಚ್ಚು ಗುಡಿಸಲುಗಳು ಇವೆ.

‘ರಾಜಕಾಲುವೆ ಮತ್ತು ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಹೊರಹಾಕಿದ ನೀರು ಕಾರ್ಮಿಕರ ಟೆಂಟ್‌ಗಳಿಗೆ ಸೋಮವಾರ ಮಧ್ಯರಾತ್ರಿ ನುಗ್ಗಿತು. ಸುರಿವ ಮಳೆಯಲ್ಲೇ ಗುಡಿಸಲುಗಳನ್ನು ಬಿಟ್ಟು ಹೊರ ಬಂದೆವು. ಮಕ್ಕಳನ್ನು ದೇವಸ್ಥಾನದಲ್ಲಿ ಮಲಗಿಸಿದ್ದೇವೆ. ದಿನಸಿ ಸೇರಿ ಎಲ್ಲಾ ಪದಾರ್ಥಗಳು ನೀರು ಪಾಲಾಗಿವೆ’ ಎಂದು ನಿವಾಸಿ ಭೀಮೇಶ್ ತಿಳಿಸಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ತುಂಬಿಕೊಂಡಿದ್ದ ನೀರನ್ನು ಮೋಟಾರ್‌ ಬಳಸಿ ನಮ್ಮ ಗುಡಿಸಲುಗಳ ಕಡೆಗೆ ಪಂಪ್ ಮಾಡಲಾಯಿತು. ಆದ್ದರಿಂದ ಸಮಸ್ಯೆ ಆಗಿದೆ. ಮಕ್ಕಳು ಜ್ವರದಿಂದ ಬಳಲುತ್ತಿವೆ. ದಿನಸಿ ನೀರು ಪಾಲಾಗಿರುವುದರಿಂದ ಊಟಕ್ಕೂ ಸಮಸ್ಯೆ ಎದುರಾಗಿದೆ’ ಎಂದರು.

‘ಬಿಬಿಎಂಪಿಯಲ್ಲೇ ಪೌರಕಾರ್ಮಿಕರಾಗಿ ಕೆಲಸ ಮಾಡುವ ನಾವು ತೊಂದರೆಗೆ ಸಿಲುಕಿದ್ದರೂ ಪಾಲಿಕೆ ಯಿಂದ ಯಾವುದೇ ನೆರವು ಸಿಕ್ಕಿಲ್ಲ. ಅಧಿಕಾರಿಗಳು ಬಂದು ನೋಡಿಕೊಂಡು ಹೋದರೂ ಊಟದ ವ್ಯವಸ್ಥೆಯನ್ನು ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT