ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹ್ಯಾಕಾಶ ತಲುಪಿದ ವೀಕ್ಷಣಾ ಕುತೂಹಲ: ಇಸ್ರೋ ಮಾಜಿ ಅಧ್ಯಕ್ಷ

ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ ಕುಮಾರ್
Last Updated 20 ಜುಲೈ 2022, 19:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಸುತ್ತಲೂ ನಡೆಯುವ ಘಟನೆಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ಸಾಗಿದ ಫಲವಾಗಿ ಇಂದು ಮನುಷ್ಯ ಚಂದ್ರನ ಅಂಗಳಕ್ಕೂ ಕಾಲಿಡಲು ಸಾಧ್ಯವಾಗಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ ಕುಮಾರ್ ಬಣ್ಣಿಸಿದರು.

ಜವಾಹರ್‌ಲಾಲ್‌ ನೆಹರು ತಾರಾಲಯ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಚಂದ್ರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘400ರಿಂದ 700 ಮೀಟರ್‌ ದೂರದಲ್ಲಿನ ನಮ್ಮ ಸುತ್ತಮುತ್ತಲ ವಿದ್ಯಮಾನಗಳು ದೃಷ್ಟಿಗೆ ನಿಲುಕುತ್ತವೆ. ಚಿಕ್ಕ ದೃಷ್ಟಿಗೆ ಹಲವು ಸಂಗತಿಗಳು ಗೋಚರಿಸಿವೆ. ನೋಟ ವಿಸ್ತರಿಸಲು ಉಪಕರಣಗಳ ಮೊರೆಹೋದ ಫಲವಾಗಿ ಆಕಾಶ ಕಾಯಗಳನ್ನೂ ವೀಕ್ಷಿಸಲು ಸಾಧ್ಯವಾಯಿತು. ವೇಗವಾಗಿ ಸಾಗಲು ಕುದುರೆ ಬಳಸಿದ್ದ ನಾವು ಇಂದು ರಾಕೆಟ್‌ ಮೂಲಕ ಬಾಹ್ಯಾಕಾಶವನ್ನೂ ಮುಟ್ಟಿದ್ದೇವೆ. ಚಂದ್ರನ ಅಂಗಳದಲ್ಲಿ ಮನುಷ್ಯ ಹೆಜ್ಜೆ ಇಟ್ಟಿದ್ದು ಬಾಹ್ಯಾಕಾಶದ ಅನನ್ಯ ಕ್ಷಣ. 1969ರ ಆ ದಿನದ ನೆನಪಿಗಾಗಿ ಈ ವರ್ಷದಿಂದ ಅಂತರರಾಷ್ಟ್ರೀಯ ಚಂದ್ರ ದಿನ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೃತಕ ಬುದ್ಧಿಮತ್ತೆ ಇಂದಿನ ಮಹತ್ವದ ಮೈಲುಗಲ್ಲು. ತನ್ನಂತೆ ಯೋಚಿಸುವ, ಯೋಜನೆ ರೂಪಿಸುವ ರೋಬೋಗಳನ್ನು ಸೃಷ್ಟಿಸಿರುವುದು ಭವಿಷ್ಯದಲ್ಲಿ ಅನ್ಯಗ್ರಹಗಳಲ್ಲೂ ವಾಸಿಸುವ ಕನಸಿಗೆ ಮತ್ತಷ್ಟು ರೆಕ್ಕೆ ಮೂಡಿಸಿದೆ. ಮುಂದಿನ 100 ವರ್ಷಗಳ ಅವಧಿಯಲ್ಲಿ ಕನಸು ನನಸಾಗಬಹುದು. ವಿಶ್ವದ ಜನಸಂಖ್ಯೆ ಹೆಚ್ಚಳ, ಆಹಾರೋತ್ಪಾದನೆಯ ಸಮಸ್ಯೆಗಳಿಗೂ ಪರಿಹಾರ ದೊರಕಬಹುದು’ ಎಂದು ಆಶಿಸಿದರು.

‘ಚಟುವಟಿಕೆಗಳಲ್ಲಿ ಚಂದ್ರ’ ಕುರಿತು ತಾರಾಲಯದ ಅಧಿಕಾರಿ ಬಿ.ಆರ್.ಲಕ್ಷ್ಮಿ, ‘ಚಂದ್ರನ ಅಂಗಳದಲ್ಲಿ’ ವಿಷಯ ಕುರಿತು ಎಚ್.ಆರ್.ಮಧುಸೂದನ್‌, ‘ಚಂದ್ರನೊಂದಿಗೆ ಒಂದು ಪಯಣ’ ಕುರಿತು ಡಾ.ತೀರ್ಥ ಪ್ರತಿಮ್‌ ದಾಸ್‌ ಉಪನ್ಯಾಸ ನೀಡಿದರು.ಇಸ್ರೋ ವಿಜ್ಞಾನ ಕಾರ್ಯಕ್ರಮಗಳ ಕಾರ್ಯಾಲಯದ ನಿರ್ದೇಶಕ ಸುಧೀರ್‌ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT