ಶನಿವಾರ, ಡಿಸೆಂಬರ್ 3, 2022
27 °C

ಎಲ್ಲ ಧರ್ಮೀಯರಿಂದ ಮಸೀದಿ ದರ್ಶನ: ಭಾವೈಕ್ಯದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯನ್ನು ಗಟ್ಟಿಗೊಳಿಸಲು ಹಾಗೂ ಪರಸ್ಪರ ಅರಿತುಕೊಳ್ಳುವ ಮೂಲಕ ಅಪನಂಬಿಕೆ, ಪೂರ್ವಾಗ್ರಹಗಳನ್ನು ದೂರ ಮಾಡುವ ಪ್ರಯತ್ನವನ್ನು ಇಲ್ಲಿನ ಮಸಜೀದ್–ಎ–ಖಾದ್ರಿಯಾ ಕೈಗೊಂಡಿದೆ.

‘ಮಸೀದಿ ದರ್ಶನ, ಮಸೀದಿಯ ಒಳಗೊಂದು ಸುತ್ತು’ ಎಂಬ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಉಗಮ, ಪ್ರವಾದಿ ಮಹಮ್ಮದ್ ಅವರ ಜೀವನ ದರ್ಶನ ಸೇರಿ ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟ ವಸ್ತು ಪ್ರದರ್ಶನ, ನಮಾಜ್‌ ಮಾಡುವ ವಿಧಿ–ವಿಧಾನಗಳ ವೀಕ್ಷಣೆ ಮತ್ತು ಪ್ರಶ್ನೋತ್ತರ–ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಧರ್ಮೀಯರು ಪಾಲ್ಗೊಂಡಿದ್ದರು. ಇದು ಭಾವೈಕ್ಯಕ್ಕೆ ಸಾಕ್ಷಿಯಾಯಿತು.

ಬೆನ್ಸನ್‌ ಟೌನ್‌ನ ಮಿಲ್ಲರ್‌ ರಸ್ತೆಯಲ್ಲಿರುವ ಮಸೀದಿಯು ಮುಸ್ಲಿಮೇತರರಿಗೂ ಬಾಗಿಲು ತೆರೆದಿಡುವ ಮೂಲಕ ಮಸೀದಿಯೊಳಗೆ ಏನಿದೆ, ಆಜಾನ್‌ ಏಕೆ, ನಮಾಜ್‌ ಏಕೆ ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಹಲವು ಅನುಮಾನಗಳನ್ನು ಪರಿಹರಿಸಿದೆ.

ಶನಿವಾರ ಆಯೋಜಿಸಿದ್ದ ‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಮಹಿಳೆಯರೂ ಸೇರಿ 500ಕ್ಕೂ ಹೆಚ್ಚು ಮುಸ್ಲಿಮೇತರರು ಭಾಗವಹಿಸಿದ್ದರು. ನಮಾಜ್‌ ಮಾಡುವ ಜಾಗವನ್ನೂ ಒಳಗೊಂಡಂತೆ ಮಸೀದಿಯ ಪೂರ್ಣ ಆವರಣದಲ್ಲಿ ಸುತ್ತಾಡಿ, ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಹಿಳೆಯರು ಸಹ ಮಸೀದಿಯಲ್ಲಿ ನಮಾಜ್‌ ಮಾಡಿದರು.

‘ಭಾರತ ವಿವಿಧ ಧರ್ಮ, ಸಂಸ್ಕೃತಿ, ಪಂಥಗಳ ದೇಶ. ಇಲ್ಲಿ ಎಲ್ಲ ಧರ್ಮೀಯರು ಪರಸ್ಪರ ಅರಿತುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕ್ಷುಲ್ಲಕ ವಿಚಾರಗಳಿಂದ ನಮ್ಮಲ್ಲಿ ಅಪನಂಬಿಕೆ, ತಪ್ಪು ಕಲ್ಪನೆಗಳು ಉಂಟಾಗುತ್ತಿವೆ. ವಾಸ್ತವದಲ್ಲಿ ಧರ್ಮಗಳು ಜನರನ್ನು ವಿಭಜಿಸುವುದಿಲ್ಲ, ಎಲ್ಲರನ್ನೂ ಒಗ್ಗೂಡಿಸುತ್ತವೆ’ ಎಂದು ಕಮಿಟಿಯ ಸದಸ್ಯ ಮಹಮ್ಮದ ನವಾಜ್ ತಿಳಿಸಿದರು.

‘ಪರಸ್ಪರರನ್ನು ಅರಿಯುವ ಮೂಲಕ ಮನಸ್ಸುಗಳನ್ನು ಬೆಸೆಯುವುದೇ ಇದರ ಮುಖ್ಯ ಉದ್ದೇಶ. ಎಲ್ಲ ಮಸೀದಿಗಳನ್ನು ನೋಡುವುದರ ಮೂಲಕ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು, ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವುದರಲ್ಲಿ ಇದು ನಮ್ಮ ಪ್ರಥಮ ಹೆಜ್ಜೆ’ ಎಂದು ಮಸೀದಿಯ ಕಾರ್ಯದರ್ಶಿ ಉಸ್ಮಾನ್ ಶರೀಫ್ ಹೇಳಿದರು.

‘ಹಿಂದೂಗಳನ್ನು ಮಸೀದಿಗೆ ಏಕೆ ಕರೆಯಬೇಕು ಎನ್ನುವ ಅಭಿಪ್ರಾಯಗಳನ್ನು ನಮ್ಮಲ್ಲೂ ಹಲವರು ವ್ಯಕ್ತಪಡಿಸಿದ್ದಾರೆ. ಅಂತಹವರಿಗೂ ನಾವು ಮನದಟ್ಟು ಮಾಡುತ್ತಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ನೋಡಲಿ’ ಎಂದರು.

‘ಎಲ್ಲಾ ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರವೇಶ ಇದೆ. ಶುಕ್ರವಾರದ ಪ್ರವಚನಕ್ಕೆ ಹೋಗುತ್ತಿದ್ದಾರೆ. ಮಸೀದಿಯೊಳಗೆ ಹೆಣ್ಣುಮಕ್ಕಳು ಬರಲೇಬಾರದು ಎಂಬುದಿಲ್ಲ. ಇಲ್ಲಿ ಎಲ್ಲಾ ಧರ್ಮೀಯರಿಗೆ ಪ್ರವೇಶವಿದೆ’ ಎಂದು ಬೆನ್ಸನ್ ಟೌನ್‌ ನಿವಾಸಿ ತಸ್ಲೀಮಾ ಹೇಳಿದರು. 

‘ಮಸೀದಿ ದರ್ಶನವೆಂಬುದು ಒಳ್ಳೆಯ ಕಾರ್ಯಕ್ರಮ. ಇಲ್ಲಿ ಶಾಂತಿ, ನೆಮ್ಮದಿ ದೊರೆಯಿತು. ತಪ್ಪು ಕಲ್ಪನೆಗಳು ದೂರವಾಗಿವೆ’ ’ ಎಂದು ಬೆನ್ಸನ್‌ ಟೌನ್ ನಿವಾಸಿ ತುಶಿತಾ ಪಟೇಲ್‌ ಹೇಳಿದರು.

 

‘ಶಾಂತಿ ನೆಲಸಲು ಎಲ್ಲರೂ ಒಂದುಗೂಡಿ’

‘ಜಗತ್ತಿನಲ್ಲಿ ಶಾಂತಿ ನೆಲಸಲು ಎಲ್ಲರೂ ಒಂದುಗೂಡಿ ಸಾಮರಸ್ಯ–ಏಕತೆಯಿಂದ ಕೆಲಸ ಮಾಡಬೇಕಿದೆ. ಎಲ್ಲ ಧರ್ಮಗಳ ಮೂಲತತ್ವ ಪ್ರೀತಿ. ಎಲ್ಲಿ ಪ್ರೀತಿ ಇದೆಯೂ ಅಲ್ಲಿ ದೇವರಿದ್ದಾನೆ. ಕುರಾನ್, ಬೈಬಲ್ ಮತ್ತು ಭಗವದ್ಗೀತೆಗಳಲ್ಲಿರುವ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ಕಲಿಸಬೇಕು’ ಎಂದು ವ್ಯಾಟಿಕನ್ ಸಿಟಿಯ ಕಾರ್ಡಿನಲ್ ಮಾರಿಯೋ ಗ್ರೇಚ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಗತ್ತಿನಲ್ಲಿ ಎಲ್ಲ ಧರ್ಮಗಳು ಶಾಂತಿ, ಸೌಹಾರ್ದ ಬಯಸುತ್ತವೆ. ದೇವರೊಬ್ಬ ನಾಮ ಹಲವು (‘ಸಬ್‌ ಕಾ ಮಾಲೀಕ್‌ ಏಕ್ ಹೈ’) ಎಂಬುದನ್ನು ಮುಂದಿನ ಜನಾಂಗ ಅರ್ಥ ಮಾಡಿಕೊಳ್ಳಬೇಕು’ ಎಂದು ಆರ್ಚ್‌ ಬಿಷಪ್‌ ಪಿಟರ್‌ ಮಚಾಡೋ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು