ಅಮ್ಮನ ವಿದಾಯದ ಹಾರಾಟಕ್ಕೆ ಮಗಳೇ ಸಾರಥಿ!

7
ಮುಂಬೈನಿಂದ ಬೆಂಗಳೂರಿಗೆ ಬಂದ ಏರ್‌ ಇಂಡಿಯಾ ವಿಮಾನ

ಅಮ್ಮನ ವಿದಾಯದ ಹಾರಾಟಕ್ಕೆ ಮಗಳೇ ಸಾರಥಿ!

Published:
Updated:

ಬೆಂಗಳೂರು: ಅಮ್ಮ ಗಗನಸಖಿ. ಮಗಳು ಪೈಲಟ್‌! ಅದೂ ಒಂದೇ ವಿಮಾನದಲ್ಲಿ!

ಇದು ಯಾವುದೋ ಕಾದಂಬರಿ ಅಥವಾ ಸಿನಿಮಾ ಕಥೆಯಲ್ಲ. ಮಂಗಳವಾರ ಮುಂಬೈನಿಂದ ಬೆಂಗಳೂರಿಗೆ ಬಂದ ಏರ್‌ ಇಂಡಿಯಾ ವಿಮಾನಕ್ಕೆ ತಾಯಿ ಪೂಜಾ ಚಿಂಚನ್‌ಕರ್‌ ಗಗನಸಖಿ, ಮಗಳು ಆಶ್ರಿತಾ ಪೈಲಟ್‌ ಆಗಿದ್ದರು.

ಅದು ಬಾನಂಗಳದಲ್ಲಿ ನಡೆದ ಅಮ್ಮನ ಕೊನೆಯ ವೈಮಾನಿಕ ಹಾರಾಟ. ಆನಂತರ ಅವರು ನಿವೃತ್ತಿ ಹೊಂದಿದರು. ಈ ಹಾರಾಟಕ್ಕೆ ಮಗಳು ಸಾರಥಿಯಾಗಿದ್ದು ಕಾಕತಾಳೀಯ ಅಷ್ಟೆ. ಇಂಥದ್ದೊಂದು ಅದ್ಭುತ ಗಳಿಗೆಗೆ ಇಬ್ಬರೂ ರುಜು ಮಾಡಿದರು. ಪ್ರಯಾಣಿಕರೂ ಇದಕ್ಕೆ ಸಾಕ್ಷಿಯಾದರು.

ವಿಮಾನವು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕ್ಯಾಬಿನ್‌ ಸಿಬ್ಬಂದಿ, ಪೂಜಾ ಅವರ 38 ವರ್ಷಗಳ ಸೇವೆ ಸ್ಮರಿಸಿ, ಅಭಿನಂದಿಸಿತು. ಪ್ರಯಾಣಿಕರು ಕರತಾಡನ ಮಾಡಿ ಗೌರವಿಸಿದರು. ಅರಿವಿಲ್ಲದಂತೆಯೇ ಪೂಜಾ ಅವರ ಕಣ್ಣಾಲಿಗಳು ತುಂಬಿದ್ದವು. ಪಕ್ಕದಲ್ಲಿದ್ದ ಆಶ್ರಿತಾ ಅವರ ಕಣ್ಣುಗಳೂ ಒದ್ದೆಯಾಗಿದ್ದವು. ಕೆಲಹೊತ್ತು ಮೌನ ಮಾತನಾಡಿತು.

ಪೂಜಾ, ತಮ್ಮ ಮಗಳು ಪೈಲಟ್‌ ಆಗಬೇಕೆಂದು ಕನಸು ಕಂಡಿದ್ದರು. ಅವರ ಕನಸೇನೋ ಈಡೇರಿತು. ಆದರೆ, ತಮ್ಮ ನಿವೃತ್ತಿಯ ಮುಂಚಿನ ಕೊನೆಯ ಹಾರಾಟಕ್ಕೆ ಮಗಳೇ ಸಾರಥಿಯಾಗಬಹುದು ಎಂದು ಊಹಿಸಿರಲಿಲ್ಲ. ಆಶ್ರಿತಾ ಅವರಿಗೂ ಅದರ ಕಲ್ಪನೆ ಇರಲಿಲ್ಲ. ಏರ್‌ ಇಂಡಿಯಾ ಆಡಳಿತ ಮಂಡಳಿಯೂ ‘ಇಬ್ಬರೂ ಒಟ್ಟಿಗೆ ಹಾರಾಡಿದ್ದು ಕೇವಲ ಕಾಕತಾಳೀಯ’ ಎಂದು ಪ್ರಕಟಿಸಿತು.

ಆಶ್ರಿತಾ ಸೋಮವಾರ ರಾತ್ರಿಯೇ ತಮ್ಮ ಪ್ರಯಾಣ ಕುರಿತು ಸರಣಿ ಟ್ವೀಟ್‌ ಮಾಡಿದ್ದರು. ‘ಸ್ನೇಹಿತರೇ ನಾಳೆ ನನ್ನ ಅಮ್ಮನ ನಿವೃತ್ತಿಯ ದಿನ. ಆಕೆ ಗಗನಸಖಿಯಾಗಿ ಕಾರ್ಯ ನಿರ್ವಹಿಸಲಿರುವ ವಿಮಾನಕ್ಕೆ ನಾನೇ ಪೈಲಟ್‌. ಇದು ನನಗೆ ಸಿಕ್ಕಿರುವ ಸುವರ್ಣಾವಕಾಶ. ಆ ಸಂದರ್ಭವನ್ನು ಎದುರುಗೊಳ್ಳಲು ಕಾತರಳಾಗಿದ್ದೇನೆ. ನನಗೆ ಖುಷಿ, ಹೆಮ್ಮೆ ಒಟ್ಟೊಟ್ಟಿಗೆ ಆಗುತ್ತಿದೆ. ತಾವು ಗಗನಸಖಿಯಾಗಿ ಕೆಲಸ ಮಾಡಲಿರುವ ಕೊನೆಯ ವಿಮಾನಕ್ಕೆ ಮಗಳೇ ಪೈಲಟ್‌ ಆಗಿರಬೇಕು ಎಂದು ಅಮ್ಮ ಕನಸು ಕಾಣುತ್ತಿದ್ದರು. ಅವರ ಕನಸು ನನಸಾಗುತ್ತಿದೆ’ ಎಂದು ಬರೆದಿದ್ದರು. ಈ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

 

ಬರಹ ಇಷ್ಟವಾಯಿತೆ?

 • 31

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !