ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಮರಳಿದ ತಾಯಿ ಮಗಳಿಗೆ ಕೋವಿಡ್‌

Last Updated 22 ಡಿಸೆಂಬರ್ 2020, 19:06 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟನ್‌ನಿಂದ ನಗರಕ್ಕೆ ಇತ್ತೀಚೆಗೆ ಮರಳಿರುವ ತಾಯಿ (34 ವರ್ಷ) ಹಾಗೂ ಮಗಳು (6 ವರ್ಷ) ಕೋವಿಡ್‌ ಸೋಂಕು ಹೊಂದಿರುವುದು ದೃಢಪಟ್ಟಿದೆ.

ರೂಪಾಂತರ ಗೊಂಡಿರುವ ಕೊರೊನಾ ವೈರಸ್‌ ಬ್ರಿಟನ್‌ನಲ್ಲಿ ವ್ಯಾಪಕಗಿ ಹರಡಿದೆ. ಹಾಗಾಗಿ, ಆ ದೇಶದಿಂದ ಇತ್ತೀಚೆಗೆ ನಗರಕ್ಕೆಬಂದಿರುವವರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

‘ಬೊಮ್ಮನಹಳ್ಳಿ ವಲಯದ ವಸಂತಪುರದಲ್ಲಿ ನೆಲೆಸಿರುವ ತಾಯಿ ಹಾಗೂ ಮಗಳು ಡಿ.19ರಂದು ಬ್ರಿಟನ್‌ನಿಂದ ಮರಳಿದ್ದರು. ಅವರಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿದ್ದವು. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಅವರಿಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಬೊಮ್ಮನಹಳ್ಳಿ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ರಿಟನ್‌ನಿಂದ ಮರಳಿಸಿರುವ 28 ಮಂದಿಯನ್ನು ಬೊಮ್ಮನಹಳ್ಳಿ ವಲಯದಲ್ಲಿ ಇದುವರೆಗೆ ಪತ್ತೆ ಮಾಡಿದ್ದೇವೆ. ಅವರ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್‌ ಪರೀಕ್ಷೆಗೆ ಕಳುಹಿಸಿದ್ದೇವೆ. ಫಲಿತಾಂಶ ಇನ್ನಷ್ಟೇ ಬರಬೇಕಿದೆ’ ಎಂದು ಅವರು ತಿಳಿಸಿದರು.

‘ಬ್ರಿಟನ್‌ನಿಂದ ಮರಳಿದವರ ದೇಹದಿಂದ ಸಂಗ್ರಹಿಸಿದ ಮಾದರಿಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುವ ಸಲುವಾಗಿನಿಮ್ಹಾನ್ಸ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಬ್ರಿಟನ್‌ನಿಂದ ಬಂದಿಳಿದ 454 ಮಂದಿ
ಲಂಡನ್‌ನಿಂದ ಬಂದ ಎರಡು ವಿಮಾನಗಳು ಇದೇ 21ರಂದು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿದಿವೆ. ಈ ವಿಮಾನದಲ್ಲಿ ಒಟ್ಟು 454 ಪ್ರಯಾಣಿಕರಿದ್ದರು.

ಈ ಎಲ್ಲ ಪ್ರಯಾಣಿಕರು ಎಲ್ಲಿ ಉಳಿದುಕೊಂಡಿದ್ದಾರೆ ಎಂದು ಪತ್ತೆಹಚ್ಚಿ ಆರೋಗ್ಯ ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

‘ಲಂಡನ್‌ನಿಂದ ಪ್ರಯಾಣಿಕರು ಎಲ್ಲೆಲ್ಲ ಉಳಿದುಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಸರ್ಕಾರ ಸೂಚನೆ ನೀಡಿದೆ. ಸೋಮವಾರ ನಗರಕ್ಕೆ ಬಂದಿಳಿದ ವಿಮಾನದಲ್ಲಿದ್ದ 454 ಮಂದಿಯಲ್ಲಿ 211 ಮಂದಿ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ರಿಟನ್‌ನಿಂದ ಬಂದಿರುವ ಪ್ರಯಾಣಿಕರ ವಿವರ ಸಲ್ಲಿಸಿ’
ಬೆಂಗಳೂರು: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಮಾದರಿಯ ಕೊರೊನಾ ವೈರಾಣು ರಾಜ್ಯಕ್ಕೆ ಹರಡದಂತೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೋವಿಡ್ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಬ್ರಿಟನ್‌ನಿಂದ ಡಿಸೆಂಬರ್ 7ರ ನಂತರ ಬಂದಿರುವ ಪ್ರಯಾಣಿಕರ ವಿವರ ಸಲ್ಲಿಸಬೇಕು’ ಎಂದು ತಿಳಿಸಿತು.

‘ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೊನಾ ವೈರಾಣು ಪತ್ತೆಯಾಗಿದೆ. ಬ್ರಿಟನ್‌ನಿಂದ ಸಾವಿರಾರು ಜನರು ರಾಜ್ಯಕ್ಕೆ ಬಂದಿರುವ ಸಾಧ್ಯತೆಯಿದೆ. ವಿಮಾನ ನಿಲ್ದಾಣಗಳಲ್ಲಿ ಆ ಪ್ರಯಾಣಿಕರ ಸೂಕ್ತವಾಗಿ ತಪಾಸಣೆ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ, ಆ ಸೋಂಕು ರಾಜ್ಯದಲ್ಲಿ ಹರಡುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರೊಬ್ಬರ ಪರ ವಕೀಲ ವಕೀಲ ಜಿ.ಆರ್.ಮೋಹನ್ ಕೋರಿದರು.

‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಡಿ.7ರಿಂದ ಬ್ರಿಟನ್‌ನಿಂದ ಕರ್ನಾಟಕಕ್ಕೆ ಬಂದಿರುವ ಪ್ರಯಾಣಿಕರ ಮಾಹಿತಿ ಒದಗಿಸಲು ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ವಿವರ ದೊರೆತ ಕೂಡಲೇ, ಅವರನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು. ಜತೆಗೆ, ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT