ಶುಕ್ರವಾರ, ನವೆಂಬರ್ 22, 2019
26 °C
ತಿದ್ದುಪಡಿ ಹಿಂಪಡೆಯಲು ಆಗ್ರಹ; ವಕೀಲರ ಪ್ರತಿಭಟನೆ

ವಿಮೆ ಕಂಪನಿಗಳ ಲಾಬಿಗೆ ಮಣಿದು ತಿದ್ದುಪಡಿ: ಆರೋಪ

Published:
Updated:
Prajavani

ಬೆಂಗಳೂರು: ‘ವಿಮೆ ಕಂಪನಿಗಳ ಲಾಬಿಗೆ ಮಣಿದು ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ವಕೀಲರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ್ದ ವಕೀಲರು, ‘ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ವಿಮೆ ಕಂಪನಿಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಲಾಬಿ ಮಾಡಿವೆ. ಜನರ ಹಿತ ಬಯಸಬೇಕಾದ ಸರ್ಕಾರ, ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿದು ಕಾಯ್ದೆಗೆ ತಿದ್ದುಪಡಿ ತಂದಿದೆ. ಇದು ಅವೈಜ್ಞಾನಿಕ ತಿದ್ದುಪಡಿ ಆಗಿದೆ. ಇದರಿಂದ ವಕೀಲರು ಸೇರಿದಂತೆ ಜನರೆಲ್ಲರೂ ಕಷ್ಟ ಅನುಭವಿಸುವಂತಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹೆಚ್ಚಳ ಮಾಡಲಾಗಿದೆ. ಇದರಲ್ಲಿ ಹಲವರ ಲಾಭವೂ ಅಡಗಿದೆ. ಇದರ ಪರಿಣಾಮ, ದುಬಾರಿ ದಂಡ ಪಾವತಿಸಲಾಗದೇ ಜನರು ತೊಂದರೆಗೆ ಸಿಲುಕುತ್ತಿದ್ದಾರೆ. ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ವಕೀಲರು ಎಚ್ಚರಿಸಿದರು.

ಪ್ರಧಾನ ಮಂತ್ರಿ ಮೋದಿಗೆ ಪತ್ರ

‘ತಿದ್ದುಪಡಿಯನ್ನು ಕಾನೂನು ತಜ್ಞರೂ ವಿರೋಧಿಸುತ್ತಿದ್ದಾರೆ. ಹೀಗಾಗಿ, ತಿದ್ದುಪಡಿ ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಧಾನ ಮಂತ್ರಿಯವರ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ನಂತರವೇ ಹೋರಾಟದ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು. 

ಪ್ರತಿಕ್ರಿಯಿಸಿ (+)