ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಸುರೇಶ್‌ ಪಿಎ ವಿಚಾರಣೆಗೆ ತಡೆ

ಕಾನೂನುಬಾಹಿರವಾಗಿ ₹ 10 ಲಕ್ಷ ವಿನಿಮಯ ಆರೋಪ
Last Updated 29 ಜುಲೈ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು: ‘ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಸಂಸದ ಡಿ.ಕೆ‌.ಸುರೇಶ್ ಅವರ ಆಪ್ತ ಪದ್ಮನಾಭಯ್ಯ ₹ 10 ಲಕ್ಷ ಮೊತ್ತದ ಹಳೆಯ ನೋಟುಗಳನ್ನು ರಾಮನಗರದ ಬ್ಯಾಂಕಿನಲ್ಲಿ ಕಾನೂನು ಬಾಹಿರವಾಗಿ ವಿನಿಮಯ ಮಾಡಿಸಿಕೊಂಡಿದ್ದಾರೆ‘ ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣ ಸಂಬಂಧಿತ ಆದೇಶವನ್ನು ಪ್ರಶ್ನಿಸಿ ಪ್ರಕರಣದ ಎರಡನೇ ಆರೋಪಿಯಾಗಿದ್ದ ಪದ್ಮನಾಭಯ್ಯ ಬಿನ್‌ ಬಿಳ್ಳಪ್ಪ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ, ‘ಅರ್ಜಿದಾರರು ಮುಗ್ಧರಿದ್ದು, ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ. ಎಫ್‌ಐಆರ್‌ನಲ್ಲಿ ಇವರ ಪಾತ್ರದ ಬಗ್ಗೆ ವಿವರಣೆ ನೀಡಿಲ್ಲ. ಅಪರಾಧ ಘಟಿಸಿದೆ ಎನ್ನಲಾದ ದಿನದಿಂದ ನಾಲ್ಕು
ತಿಂಗಳ ನಂತರ ಎಫ್‌ಐಆರ್ ದಾಖಲು ಮಾಡಲಾಗಿದೆ. ವಿಳಂಬಕ್ಕೆ ಕಾರಣವನ್ನೇ ತೋರಿಸಿಲ್ಲ’ ಎಂದರು.

‘ಆರೋಪಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ವೀಕರಿಸಿದ ದೂರಿನ ಅನುಸಾರ ಕಾರ್ಪೋರೇಷನ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಬಿ.ಪ್ರಕಾಶ್‌ ಸೇರಿ ಎಂಟು ಜನರನ್ನು ಆರೋಪಿಗಳಾಗಿಸಲಾಗಿದೆ. ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ’ ಎಂದು ವಿವರಿಸಿದರು.

‘ತಮ್ಮನ್ನು ಪ್ರಕರಣದಿಂದ ಕೈಬಿಡಲು ಕೋರಿ ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಮಾಡಿದ್ದ ಮನವಿಯನ್ನು ನ್ಯಾಯಾಧೀಶರು ಕಳೆದ ತಿಂಗಳ 21ರಂದು ತಿರಸ್ಕರಿಸಿದ್ದಾರೆ. ಆಗಸ್ಟ್1ರಿಂದ ಮೂರು ದಿನ ನಿರಂತರ ವಿಚಾರಣೆ ನಡೆಸುವುದಾಗಿ ಮುದ್ದತು ನಿಗದಿಪಡಿಸಿದ್ದಾರೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿದರು.

ಇದಕ್ಕೆ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್‌ ಆಕ್ಷೇಪಿಸಿದರೂ ನ್ಯಾಯಪೀಠ ಪರಿಗಣಿಸದೆ, ಅರ್ಜಿ ಇತ್ಯರ್ಥವಾಗುವತನಕ ಸಿಬಿಐನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 10ರವರೆಗೆ ಮುಂದೂಡುವಂತೆ ನಿರ್ದೇಶಿಸಿದೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 120–ಬಿ, 420, 409, 468, 471 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರನ್ನು 41ನೇ ಸಾಕ್ಷಿದಾರನನ್ನಾಗಿ ಕಾಣಿಸಲಾಗಿದೆ. ಅರ್ಜಿದಾರರ ಪರ ವಕೀಲ ಎಸ್‌.ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT