ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡ್ ಬ್ಲಾಕಿಂಗ್: ಕಾಂಗ್ರೆಸ್‌ನಿಂದ ದಿಕ್ಕು ತಪ್ಪಿಸುವ ಯತ್ನ ಎಂದ ತೇಜಸ್ವಿ ಸೂರ್ಯ

50 ಹಾಸಿಗೆಗಳ ಆರೈಕೆ ಕೇಂದ್ರ ಉದ್ಘಾಟನೆ
Last Updated 29 ಮೇ 2021, 21:05 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ’ಕೊರೊನಾ ಸೋಂಕಿನಿಂದ ಸಾವಿರಾರು ಜನರು ಬಲಿಯಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಬೆಡ್ ಬ್ಲಾಕಿಂಗ್‌ ಹಗರಣವನ್ನು ನಾವು ಹೊರ ತಂದಿದ್ದೇವೆ. ಆದರೆ, ಇಂತಹ ಸಮಯದಲ್ಲಿ ಕಾಂಗ್ರೆಸ್ ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ' ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿಯ ಆರ್.ಎಂ.ಆರ್ ಪಾರ್ಕ್ ಬಳಿ ಪಂಡಿತ್ ದೀನದಯಾಳ್ ಉಪಾಧ್ಯಾಯ 50 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

'ಹಾಸಿಗೆ ಬ್ಲಾಕ್ ಪ್ರಕರಣವನ್ನು ಸಿಸಿಬಿ ತನಿಖೆ ಮಾಡುತ್ತಿದೆ. ತನಿಖೆ ಬಳಿಕ ಸಾಕಷ್ಟು ಮಂದಿ ಬಂಧನ ಆಗುವ ಸಾಧ್ಯತೆ ಇದೆ‘ ಎಂದರು.

ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, 'ಕ್ಷೇತ್ರದ ಸೋಂಕಿತರಿಗೆ ಸರಿಯಾದ ಬೆಡ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಭೇದಿಸಲು ಹೊರಟಾಗ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಬಳಿಕ ನಮ್ಮ ಮೇಲೆಯೇ ಆರೋಪ ಮಾಡುತ್ತಿರುವುದು ನೋವು ತಂದಿದೆ’ ಎಂದರು.

’ಬೊಮ್ಮನಹಳ್ಳಿಯಲ್ಲಿ ದಾನಿಗಳ ನೆರವಿನಿಂದ ₹50 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಸಹಿತ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಮಕ್ಕಳಿಗೂ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಅಪೊಲೊ ಆಸ್ಪತ್ರೆ, ನ್ಯಾನೊ ಆಸ್ಪತ್ರೆ ಹಾಗೂ ಕೋಡಿಚಿಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇಲ್ಲಿ ಚಿಕಿತ್ಸೆ ನೀಡುವರು. ಎಚ್‌ಎಸ್‌ಆರ್‌ ಬಡಾವಣೆ, ಹೊಂಗಸಂದ್ರದಲ್ಲಿ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದ್ದು, 400 ಬೆಡ್‌ಗಳು ಲಭ್ಯವಾಗಿವೆ‘ ಎಂದರು.

‘ಈಗಾಗಲೇ ಗಾರ್ಮೆಂಟ್ಸ್‌ಗಳ 10 ಸಾವಿರ ನೌಕರರಿಗೆ ಆಹಾರದ ಕಿಟ್‌ ನೀಡಲಾಗಿದೆ. ಕ್ಷೇತ್ರದ 50 ಸಾವಿರ ಮಂದಿಗೆ ವಾರದಲ್ಲಿ ಕಿಟ್‌ ನೀಡಲಾಗುವುದು. ಪ್ರತಿ ವಾರ್ಡ್‌ನ 6 ಸಾವಿರ ಬಡವರಿಗೆ ಕಿಟ್‌ ವಿತರಿಸಲಾಗುವುದು’ ಎಂದು ಅವರು ಹೇಳಿದರು.

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ 20 ಮಕ್ಕಳಿಗೆ ತಲಾ ₹25 ಸಾವಿರ ಧನಸಹಾಯವನ್ನು ನೀಡಲಾಯಿತು.

ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ, ಮಾಜಿ ಉಪ ಮೇಯರ್ ರಾಮ್‌ಮೋಹನ್ ರಾಜ್, ಬಿಜೆಪಿ ಮುಖಂಡರಾದ ಶ್ರೀನಿವಾಸ್, ಜಲ್ಲಿ ರಮೇಶ್, ಭಾಗ್ಯಲಕ್ಮಿ ಮುರಳಿ, ಮುನಿರಾಮು, ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT