ಸೋಮವಾರ, ಸೆಪ್ಟೆಂಬರ್ 27, 2021
25 °C
ಬೇರೆ ಸಾರಿಗೆ ರಾತ್ರಿವರೆಗೂ ಕಾರ್ಯಾಚರಿಸುವಾಗ ಬಿಎಂಆರ್‌ಸಿಎಲ್‌ಗೆ ಏನು ಸಮಸ್ಯೆ: ಸಂಸದರ ಪ್ರಶ್ನೆ

ಜನರ ಓಡಾಟ ಹೆಚ್ಚಿರುವಾಗಲೇ ಮೆಟ್ರೊ ಸೇವೆ ನಿಲ್ಲಿಸಿದರೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಸೇವೆಯ ಅವಧಿ ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಸೀಮಿತಗೊಂಡಿದೆ. ಸೇವೆಯ ಅವಧಿಯನ್ನು ವಿಸ್ತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರೂ ಕ್ರಮ ಕೈಗೊಳ್ಳದ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಧೋರಣೆಗೆ ನಗರವನ್ನು ಪ್ರತಿನಿಧಿಸುವ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಿಮಾನಯಾನ ಸೇವೆಗಳು ಸೇರಿದಂತೆ ಎಲ್ಲ ವಿಧದ ಸಾರಿಗೆಗಳೂ ಮಧ್ಯರಾತ್ರಿವರೆಗೂ ಕಾರ್ಯಾಚರಿಸುತ್ತಿವೆ. ನಮ್ಮ ಮೆಟ್ರೊ ಸೇವೆಯನ್ನು ಮಾತ್ರ ಮೊಟಕುಗೊಳಿಸಿರುವುದು ಯಾವ ನ್ಯಾಯ’ ಎಂದು ಸಂಸದರು ಪ್ರಶ್ನೆ ಮಾಡಿದರು.

ನಿಗಮವು ಆದಷ್ಟು ಬೇಗ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ನಾಲ್ವರು ಸಂಸದರೂ ಒತ್ತಾಯಿಸಿದರು.

‘ಕೇಂದ್ರ ಸಚಿವರ ಗಮನಕ್ಕೆ ತರುತ್ತೇನೆ’

ಕೋವಿಡ್‌ ಹರಡುವಿಕೆ ಕಡಿಮೆ ಆದ ಬಳಿಕ ನಿರ್ಬಂಧಗಳನ್ನು ಸಡಿಲ ಮಾಡಬೇಕೇ ಹೊರತು ಮುಂದುವರಿಸುವುದು ಸೂಕ್ತ ಅಲ್ಲ. ಇದು ಉಚಿತವೂ ಅಲ್ಲ. ನಗರದ ಜನರು ಸಂಜೆವರೆಗೂ ಕೆಲಸ ಮಾಡುತ್ತಾರೆ. ಅವರ ದೈನಂದಿನ ವ್ಯವಹಾರ ಹಾಗೂ ಶಾಪಿಂಗ್‌ಗಳೇನಿದ್ದರೂ ಕಚೇರಿ ಅವಧಿಯ ನಂತರವೇ ಜಾಸ್ತಿ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುವುದೇ ರಾತ್ರಿ 8 ಗಂಟೆ ನಂತರ. ಈ ಸಂದರ್ಭದಲ್ಲೇ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮೆಟ್ರೊ ಸೇವೆ ಒದಗಿಸದಿದ್ದರೆ ಹೇಗೆ.

ನಗರದಲ್ಲಿ ನಮ್ಮ ಮೆಟ್ರೊ ಸೇವೆ ಈ ಹಿಂದೆ ರಾತ್ರಿ 11ಗಂಟೆವರೆಗೂ ಇತ್ತು. ಅದನ್ನು 8 ಗಂಟೆಗೆ ಸೀಮಿತಗೊಳಿಸಬಾರದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೂ ಹೇಳಿದ್ದೇನೆ. ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರ ಜೊತೆಗೂ ಈ ಬಗ್ಗೆ ಮಾತನಾಡುತ್ತೇನೆ.

ಡಿ.ವಿ.ಸದಾನಂದ ಗೌಡ, ಸಂಸದ, ಬೆಂಗಳೂರು ಉತ್ತರ

***

‘ಸೇವೆ ವಿಸ್ತರಿಸಲು ನಿಗಮಕ್ಕೆ ಏನು ಸಮಸ್ಯೆ’

ಕೊರೊನಾ ಹರಡುವಿಕೆ ಕಡಿಮೆ ಆಗಿದೆ. ಜನರ ಓಡಾಟ ಹೆಚ್ಚುತ್ತಿದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯ ಅವಧಿ ವಿಸ್ತರಣೆ ಮಾಡುವುದು ಒಳ್ಳೆಯದು. ಬಿಎಂಟಿಸಿ ಬಸ್‌ಗಳು ಓಡುತ್ತಿವೆ. ಕೆಎಸ್ಆರ್‌ಟಿಸಿ ಬಸ್‌ಗಳೂ ಸಂಚರಿಸುತ್ತಿವೆ. ರೈಲು ಓಡುತ್ತಿದೆ. ವಿಮಾನಗಳೂ ಹಾರಾಟ ನಡೆಸುತ್ತಿವೆ. ಹಾಗಿರುವಾಗ ಮೆಟ್ರೊ ರೈಲು ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್‌ಗೆ ಏನು ಸಮಸ್ಯೆ. 

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರನ್ನು ಭೇಟಿಯಾಗಿ ನಮ್ಮ ಮೆಟ್ರೊ ಸೇವೆಯ ಅವಧಿ ವಿಸ್ತರಣೆ ಮಾಡುವ ಬಗ್ಗೆ ಒತ್ತಾಯಿಸುತ್ತೇನೆ.

ಪಿ.ಸಿ.ಮೋಹನ್‌, ಸಂಸದ, ಬೆಂಗಳೂರು ಕೇಂದ್ರ

***

‘ರಾತ್ರಿ 11 ಗಂಟೆವರೆಗಾದರೂ ಸೇವೆ ಲಭಿಸಲಿ

ಕೋವಿಡ್‌ ನಿಯಂತ್ರಣಕ್ಕಾಗಿ ಹೇರಲಾದ ಈಗಾಗಲೇ ಲಾಕ್‌ಡೌನ್‌ ಅನ್ನು ಸಡಿಲಗೊಳಿಸಲಾಗಿದೆ. ಎಲ್ಲ ರೀತಿಯ ಕೈಗಾರಿಕೆಗಳು, ಉದ್ಯಮಗಳ ಕಾರ್ಯಾಚರಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮಾರುಕಟ್ಟೆಗಳು, ಅಂಗಡಿ ಮಳಿಗೆಗಳು ರಾತ್ರಿ 9 ಗಂಟೆವರೆಗೆ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗಿದೆ. ಖರೀದಿ ಮುಗಿಸಿ ಜನ ರಾತ್ರಿ ಮನೆಗೆ ಮರಳುವಾಗ ರಾತ್ರಿ 10.30ರವರೆಗೂ ಆಗುತ್ತದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯನ್ನು ಈ ಹಿಂದಿನಂತೆ ರಾತ್ರಿ 11 ಗಂಟೆವರೆಗಾದರೂ ವಿಸ್ತರಿಸಬೇಕು.

ಗಾರ್ಮೆಂಟ್ಸ್‌ ಸೇರಿದಂತೆ ವಿವಿಧ ಕಾರ್ಖಾನೆಗಳ ಕಾರ್ಮಿಕರು ಬೆಳಿಗ್ಗೆ ಕೆಲಸಕ್ಕೆ ಹೋಗಲು ಮೆಟ್ರೊವನ್ನು ಅವಲಂಬಿಸಿದ್ದಾರೆ. ಬೆಳಿಗ್ಗೆಯೂ 7 ಗಂಟೆಗಿಂತ ಮುನ್ನವೇ ಮೆಟ್ರೋ ಸೇವೆ ಆರಂಭಿಸಿದರೆ ಒಳ್ಳೆಯದು. ಕನಿಷ್ಠ ಪಕ್ಷ ಹಿಂದೆ ಇದ್ದಷ್ಟು ಹೊತ್ತಾದರೂ ಮೆಟ್ರೊ ಸೇವೆ ಲಭಿಸಬೇಕು. ಬೇರೆ ಸಾರಿಗೆಗಳಿಗೆ ಅವಕಾಶ ಕಲ್ಪಿಸಿ ಮೆಟ್ರೊ ಸೇವೆಯನ್ನು ಮಾತ್ರ ಬೇಗ ಮೊಟಕುಗೊಳಿಸಿದರೆ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ.

ಡಿ.ಕೆ.ಸುರೇಶ್‌, ಸಂಸದ, ಬೆಂಗಳೂರು ಗ್ರಾಮಾಂತರ

***

‘ಸರ್ಕಾರದ ಮಟ್ಟದಲ್ಲಿ ಶೀಘ್ರ ತೀರ್ಮಾನ’

ಬೆಂಗಳೂರು ದಿನದ 24x7 ಗಂಟೆಯೂ ಚಟುವಟಿಕೆಗಳಿಂದ ಕೂಡಿರುವ ನಗರ. ಯಾವುದೇ ಅಂತರಾಷ್ಟ್ರೀಯ ನಗರದಲ್ಲಿ ದಿನದ 24 ಗಂಟೆಗಳೂ ಯಾವುದಾದರೂ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಿರುತ್ತದೆ. ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಗರವನ್ನಾಗಿ ಮಾಡಬೇಕೆನ್ನುವುದು ಮುಖ್ಯಮಂತ್ರಿಗಳ ಕನಸು ಕೂಡಾ.

‘ನಮ್ಮ ಮೆಟ್ರೊ’ ರಾತ್ರಿ ಬೇಗ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ.
ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಜೊತೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ ಮೆಟ್ರೊ ಸೇವೆ ಪೂರ್ಣಪ್ರಮಾಣದಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಮಾಡುವಂತೆ ಕೇಳಿಕೊಳ್ಳುತ್ತೇನೆ.

ಕೋವಿಡ್ ಕಾರಣದಿಂದಾಗಿ ಮೆಟ್ರೊ ಸೇವೆಯನ್ನು ರಾತ್ರಿ 8 ಗಂಟೆಗೆ ಸ್ಥಗಿತಗೊಳಿಸಲಾಗುತ್ತಿದೆ.
ಈಗ ಬೇರೆಲ್ಲ ಸೇವೆಗಳು ಪೂರ್ಣಪ್ರಮಾಣದಲ್ಲಿ ತೆಗೆದಿರುವುದರಿಂದ ಬೆಂಗಳೂರು ಮೆಟ್ರೊ ರೈಲುಗಳು ಸಹ ಪೂರ್ಣ ಪ್ರಮಾಣದಲ್ಲಿ ಚಲಿಸಬಹುದು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಲಾಗುವುದು.

ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು