ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪ್ತಿಮಾಡಲು ಹೋದವ, ಸಾಲ ಕೊಟ್ಟು ಬಂದೆ: ಎಂ.ಎಸ್. ನರಸಿಂಹಮೂರ್ತಿ

ವೃತ್ತಿ ಜೀವನದ ಘಟನೆಯನ್ನು ನೆನಪಿಸಿಕೊಂಡ ಹಾಸ್ಯ ಸಾಹಿತಿ
Last Updated 21 ಅಕ್ಟೋಬರ್ 2019, 4:28 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕಿನ ವ್ಯವಸ್ಥಾಪಕನಾಗಿದ್ದಾಗ ಕಡುಬಡವನ ಮನೆಗೆ ₹ 17 ಸಾವಿರ ಸಾಲ ವಸೂಲಾತಿಗೆ ಹೋಗಿದ್ದೆ. ನಾವು ಬರುವ ಸೂಚನೆ ಸಿಕ್ಕಿದ್ದರಿಂದ ಯಜಮಾನ ಮನೆಯಲ್ಲಿ ಇರಲಿಲ್ಲ. ಕಣ್ಣೀರು ಹಾಕಿದ ಸಾಲಗಾರನ ಪತ್ನಿ, ದ್ರಾಕ್ಷಿ ಬೆಳೆ ಕೈಕೊಟ್ಟಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಣ್ಣೀರಿಟ್ಟರು. ಅವಳಿಗೆ ₹ 8 ಸಾವಿರ ಕೊಟ್ಟು, ಇದರಲ್ಲಿ ಹಸು ಖರೀದಿಸಿ, ಹಾಲು ಮಾರಿ ಸಾಲ ತೀರಿಸಿ ಎಂದು ಹೇಳಿ ವಾಪಸಾದೆ.’

–ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹ ಮೂರ್ತಿ ಅವರು ವೃತ್ತಿ ಜೀವನದ ಘಟನೆಯನ್ನು ನೆನಪಿಸಿಕೊಂಡ ಪರಿ ಇದು. ನರಸಿಂಹಮೂರ್ತಿ ಅವರ 70ನೇ ಜನ್ಮದಿನದ ಪ್ರಯುಕ್ತ ತೇಜು ಪಬ್ಲಿ ಕೇಷನ್ಸ್ ಮತ್ತು ಎಸ್‌.ಡೆಂಟಲ್‌ ಕೇರ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನಗೆಸಿಂಹ ಎಂ.ಎಸ್‌.ಎನ್. ಹಬ್ಬ’ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾ ಡಿದರು. ಬ್ಯಾಂಕಿನ ವ್ಯವಸ್ಥಾಪಕನಾಗಿ ಕಳೆದ ದಿನಗಳ ಸ್ವಾರಸ್ಯಕರ ಸನ್ನಿವೇಶಗಳನ್ನು ಹಂಚಿಕೊಂಡರು.

‘ಮಾಲೂರಿನ ಜಟೆಗನಹಳ್ಳಿಗೆ ಹೊಸದಾಗಿಬ್ಯಾಂಕಿನ ವ್ಯವಸ್ಥಾಪಕನಾಗಿ ಹೋದ ಎರಡನೆ ದಿನವೇ ಸಾಲ ವಸೂಲಿ ಮಾಡುವ ಪ್ರಮೇಯ ಬಂತು. ಪೊಲೀಸ್ ಸಿಬ್ಬಂದಿ ಜತೆಗೆ ಸಾಲಗಾರನ ಮನೆಗೆ ಹೋದಾಗ ಜನ ಸೇರಿದ್ದರು. ನಾನು ಮನೆಯೊಳಗೆ ಕಾಲಿಟ್ಟಾಗ ಕಣ್ಣೀರು ಹಾಕುತ್ತಿದ್ದ ಸಾಲಗಾರ ಪತ್ನಿ, ಎರಡು ಆಲ್ಯುಮಿನಿಯಂ ಪಾತ್ರೆಗಳಿವೆ. ಕಿತ್ತೊಗಿರೋ ಚಾಪೆ ಇದೆ. ಇವುಗಳನ್ನು ಎದೆ ಮೇಲೆ ಹಾಕಿಕೊಳ್ಳಿ ಎಂದಳು. ಸಾವಧಾನವಾಗಿ ಅವರ ಸಮಸ್ಯೆ ಆಲಿಸಿದೆ. ಜಪ್ತಿಗೆ ಹೋದವನು ಮತ್ತೆ ಸಾಲ ನೀಡಿದೆ. ಆ ಹಣದಿಂದ ಹಸು ಖರೀದಿಸಿ, ಹಾಲನ್ನು ಡೇರಿಗೆ ಹಾಕಿದಳು. ದ್ರಾಕ್ಷಿ ವ್ಯಾಪಾರವೂ ಕುದುರಿತು. ಅವರ ಸಾಲ 6 ತಿಂಗಳಲ್ಲಿ ತೀರಿತು’ ಎಂದು ವಿವರಿಸಿದರು.

ರಜಾ ದಿನ ಹಣ ನೀಡಿದೆ: ‘ಯಲಹಂಕದ ವ್ಯವಸ್ಥಾಪಕನಾದಾಗ ಹಗಲು–ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಒಮ್ಮೆ ಭಾನುವಾರವೂ ಕಾರ್ಯನಿರ್ವಹಿಸಿದ್ದೆ. ಬ್ಯಾಂಕಿನ ಗೇಟು ತೆರೆದಿದ್ದರಿಂದ ಒಬ್ಬ ವ್ಯಕ್ತಿ ನನ್ನ ಬಳಿ ಬಂದು, ₹ 18 ಸಾವಿರ ಹಣಬೇಕು ಸರ್ ಅಂದ. ಇವತ್ತು ಭಾನುವಾರ. ಹಣ ಕೊಡಲು ಬರುವುದಿಲ್ಲ ಎಂದು ಹೇಳಿದೆ. ಆಂಧ್ರದಿಂದ ಬಂದ ಆ ಗುತ್ತಿಗೆದಾರನ ಮುಖದಲ್ಲಿ ಆತಂಕವನ್ನು ಗಮನಿಸಿದೆ. ‘ನನ್ನ ಖಾತೆಯಲ್ಲಿ ₹ 2 ಲಕ್ಷ ಇದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ 20 ವರ್ಷದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಚಿಕಿತ್ಸೆ ಫಲಿಸದೆ ಮಗ ಮೃತಪಟ್ಟಿದ್ದಾನೆ. ಅವನ ದೇಹ ಬಿಡಿಸಿಕೊಳ್ಳಲು ಹಣ ಬೇಕು ಅಂದ.’

‘ಆ ಕಾಲದಲ್ಲಿ ₹ 18 ಸಾವಿರ ಎಂದರೇ ಈಗಿನ ₹ 2 ಲಕ್ಷಕ್ಕೆ ಸಮ. ಆತನಿಗೆ ಸಹಾಯ ಮಾಡಬೇಕು ಅನಿಸಿತು. ಬಾಲಾಜಿ ಮೆಡಿಕಲ್ಸ್ ಅವರಿಗೆ ಕರೆ ಮಾಡಿ, ನಾಳೆ ಖಾತೆಗೆ ಪಾವತಿಸುವ ಹಣವನ್ನು ಇವತ್ತೇ ನೀಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಚಲನ್‌ ಹಾಕಿ ಹಣ ಕಳುಹಿಸಿಕೊಟ್ಟರು. ಮರುದಿನದ ದಿನಾಂಕ ನಮೂದಿಸಿ ಅವನಿಗೆ ಹಣ ಕೊಟ್ಟು ಕಳಿಸಿದೆ. ಆತನ ಕಣ್ಣಲ್ಲಿ ನೀರು ತುಂಬಿ ನಿರ್ಗಮಿಸಿದ್ದನ್ನು ಗಮನಿಸಿದೆ. ನಾನು ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದೆ. ಆಗ ಈ ವಿಚಾರ ಬಹಿರಂಗವಾಗಿದ್ದರೆ ಅಮಾನತಾಗುತ್ತಿದ್ದೆ’ ಎಂದು ಹಳೆಯ ಘಟನೆ ಮೆಲುಕು ಹಾಕಿದರು.

ಇದೇ ವೇಳೆ ‘ನಗೆಸಿಂಹ’ ಪುಸ್ತಕವನ್ನು ಬಿಡುಗಡೆ ಮಾಡ ಲಾಯಿತು.

‘ಪ್ಲೇಗು, ಕಾಲರಾ ಒಟ್ಟೊಟ್ಟಿಗೆ ಬಂದವು’

ಹಾಸ್ಯ ಬರಹಗಾರ ಅ.ರಾ. ಮಿತ್ರ, ‘ಹಿಂದೆ ಹಾಸ್ಯೋತ್ಸವಗಳಿಗೆ ಕುಳಿತುಕೊಳ್ಳಲು ಸ್ಥಳ ಇಲ್ಲದಷ್ಟು ಜನ ಸೇರುತ್ತಿದ್ದರು. ಬೇಗ ಬಂದವರಿಗೆ ಮಾತ್ರ ಸ್ಥಳ ಸಿಗುತಿತ್ತು. ಒಮ್ಮೆ ಭಾಷಣ ಮಾಡುತ್ತಿರುವ ವೇಳೆ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ದಂಪತಿ ಬರುತ್ತಿರುವುದು ತಿಳಿಯಿತು. ಆದರೆ, ಕುರ್ಚಿಗಳೆಲ್ಲ ಭರ್ತಿಯಾಗಿದ್ದವು. ಅವರು ಸಭಾಂಗಣ ಪ್ರವೇಶಿಸುತ್ತಿದ್ದಂತೆನಾಡಿನ ಮುಖ್ಯಮಂತ್ರಿ ಮತ್ತು ಅವರ ಪತ್ನಿ ಒಟ್ಟೊಟ್ಟಿಗೆ ಬಂದಿದ್ದಾರೆ.

ಇದು ಪ್ಲೇಗು ಮತ್ತು ಕಾಲರಾ ಒಟ್ಟಿಗೆ ಬಂದಂತಾಗಿದೆ ಎಂದು ಹಾಸ್ಯಚಟಾಕಿ ಹಾರಿಸಿದೆ. ಅದನ್ನು ಅವರು ಕೂಡಾ ಹಾಸ್ಯಮಯವಾಗಿಯೇ ಸ್ವೀಕರಿಸಿದರು. ಎಸ್.ಎಂ. ಕೃಷ್ಣ ಅವರು ಪ್ಲೇಗು, ಕಾಲರಾ ಪ್ರಸಂಗವನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT