ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆ ಮಾಡಿರುವ 14 ಬದಲಿ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಿಂಪಡೆಯಲಿ’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಕಾಗಿನೆಲೆ ಕನಕ ಗುರುಪೀಠದ ಚಂದ್ರಾಲೇಔಟ್ ಶಾಖಾ ಮಠದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾರ್‍ಯಾರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದನ್ನು ಅವರೇ ಹೇಳಿಕೊಳ್ಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಆಸ್ತಿ ಮಾಡಿದ್ದಾರೆ ಎಂದು ಯಾರೂ ಹೇಳಿಲ್ಲ. ಅವರು ನಾಡಿನ ಮತ್ತು ಸಮಾಜದ ಆಸ್ತಿ. ಒಂದು ವಾರದಿಂದ ಅವರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕಪ್ಪುಚುಕ್ಕೆ ಇಡಲು ಪ್ರಯತ್ನಿಸಿದರೆ, ಅದನ್ನು ದೃಷ್ಟಿಬೊಟ್ಟಾಗಿ ಪರಿವರ್ತಿಸಿ ಕಾಪಾಡಿಕೊಳ್ಳುತ್ತೇವೆ’ ಎಂದರು.
ತಿಂಥಿಣಿ ಬ್ರಿಜ್ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಪ್ರಸ್ತುತ ರಾಜಕೀಯದಲ್ಲಿ ಕೆಟ್ಟ ವ್ಯವಸ್ಥೆ ಇದೆ. ಜಾತಿವಾದಿ ಎನ್ನುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಚಿಸುವಂತಾಗಿದೆ. ಭ್ರಷ್ಟಾಚಾರದ ಜಗತ್ತಿನಲ್ಲಿ ಪ್ರಾಮಾಣಿಕವಾಗಿ ಉಳಿಯುವವನೇ ಪಾಪಿ ಎಂಬ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ‘ಸಿದ್ದರಾಮಯ್ಯ ಪತ್ನಿ ನಿವೇಶನಗಳನ್ನು ಮುಡಾಗೆ ವಾಪಸ್ ಕೊಡುವ ಅಗತ್ಯವಿಲ್ಲ. ಕಾನೂನು ಪ್ರಕಾರವೇ ಹಂಚಿಕೆ ಮಾಡಲಾಗಿದೆ’ ಎಂದರು.
ಶೇಕಡ 90ಕ್ಕಿಂತ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಕಂಬಳಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಿಗೆ ’ಕನಕ ಚೇತನ‘ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಣ್ಣೀರಿಟ್ಟ ಸ್ವಾಮೀಜಿ
‘ಮಠ ಆರ್ಥಿಕ ಸಂಕಷ್ಟದಲ್ಲಿದ್ದು ನೆರವು ಕೋರಿ ಬರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ನೀಡಲು ಆಗುತ್ತಿಲ್ಲ’ ಎಂದು ಸಮಾರಂಭದಲ್ಲಿ ಮಾತನಾಡುವ ವೇಳೆ ಈಶ್ವರನಾಂದಪುರಿ ಸ್ವಾಮೀಜಿ ಕಣ್ಣೀರು ಹಾಕಿದರು.
‘ಜೋಳಿಗೆ ಹಿಡಿದು ಮನೆಗೆ ಬರುತ್ತೇನೆ. ₹ 10 ಕೋಟಿ ಸಂಗ್ರಹಿಸಿ ಅದನ್ನು ಠೇವಣಿ ಇರಿಸಿ ಬಂದ ಬಡ್ಡಿ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು. ಸಾಧ್ಯವಾದಷ್ಟು ನೆರವು ನೀಡಿ ಮಠಕ್ಕೆ ಶಕ್ತಿ ತುಂಬಿ’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.