ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ಆಗಿರುವ ಹಗರಣ ಖಂಡಿಸಿ ಇದೇ 15ರಿಂದ ಮೈಸೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಅಧ್ಯಕ್ಷ ಆರ್. ಮೋಹನರಾಜ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ವಂಚಿಸುತ್ತ ಬಂದಿದೆ. ಒಂದು ವರ್ಷದಿಂದ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಯ ₹25 ಸಾವಿರ ಕೋಟಿ ಹಣವನ್ನು ‘ಗ್ಯಾರಂಟಿ’ಗೆ ಬಳಸುವ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.
‘ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಹಂಚಿಕೆಯಲ್ಲೂ ಸಮಸ್ಯೆ ಆಗಿದೆ. ಈ ಎಲ್ಲ ಹಗರಣಗಳನ್ನು ಖಂಡಿಸಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 20ಕ್ಕೆ ಬೆಂಗಳೂರಿಗೆ ಬಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪರಶುರಾಮ, ಪ್ರಧಾನ ಕಾರ್ಯದರ್ಶಿ ನಾಗೇಶ್, ಸಂಚಾಲಕರಾದ ಜಯರಾಮ್, ಚನ್ನಕೇಶವ ಭಾಗವಹಿಸಿದ್ದರು.