ಶುಕ್ರವಾರ, ಏಪ್ರಿಲ್ 23, 2021
24 °C

ಬಾಲಕಿ ಕೊಂದು ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹದಿನೇಳು ವರ್ಷದ ಬಾಲಕಿಯ ಕತ್ತು ಬಿಗಿದು ಕೊಲೆ ಮಾಡಿರುವ ಆರೋಪಿ ರಾಜು, ಕೃತ್ಯದ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಸೋಮಸಂದ್ರಪಾಳ್ಯದ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ರಾಜು, ತನ್ನ ಮನೆ ಸಮೀಪದಲ್ಲೇ ವಾಸವಿದ್ದ ಬಾಲಕಿಯನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದ. ಬಾಲಕಿಯನ್ನು ಆಗಾಗ ತನ್ನ ಕೊಠಡಿಗೂ ಕರೆಸಿಕೊಳ್ಳುತ್ತಿದ್ದ. ಅದೇ ಕೊಠಡಿಯಲ್ಲಿ ಬಾಲಕಿಯನ್ನು ಕೊಂದಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರ ಬೆಳಿಗ್ಗೆ ಮಲ್ಲೇಶ್ವರದಿಂದ ಯಶವಂತಪುರದತ್ತ ಹೊರಟಿದ್ದ ರೈಲು ಹತ್ತಿದ್ದ ರಾಜು, ಮಾರ್ಗಮಧ್ಯೆಯೇ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಸ್ಥಳೀಯರು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞೆ ಬರುತ್ತಿದ್ದಂತೆ ಆರೋಪಿ, ಕೊಲೆ ಸಂಗತಿಯನ್ನು ವೈದ್ಯರ ಬಳಿ ಬಾಯ್ಬಿಟ್ಟಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಮಾಹಿತಿ ಬರುತ್ತಿದ್ದಂತೆ ಆರೋಪಿ ಕೊಠಡಿ ಹೋಗಿ ಪರಿಶೀಲಿಸಲಾಯಿತು. ಅಲ್ಲಿದ್ದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು’ ಎಂದೂ ಮೂಲಗಳು ತಿಳಿಸಿವೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಕೊಲೆ ಆರೋಪದಡಿ ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ಸದ್ಯ ಆಸ್ಪತ್ರೆಯಲ್ಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವಶಕ್ಕೆ ಪಡೆಯಲಾಗುವುದು. ಬಳಿಕವೇ, ಕೊಲೆಗೆ ಕಾರಣವೇನು ಎಂಬುದು ತಿಳಿಯಲಿದೆ’ ಎಂದೂ ತಿಳಿಸಿವೆ.

ಡೆಲಿವರಿ ಬಾಯ್ ಕೆಲಸ: ‘ಆರೋಪಿ ರಾಜು, ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಬಾಲಕಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಒಂದೇ ಪ್ರದೇಶವಾಗಿದ್ದರಿಂದ ಇಬ್ಬರಿಗೂ ಪರಿಚಯವಾಗಿತ್ತು. ನಂತರ ಅವರಿಬ್ಬರು ಒಟ್ಟಿಗೆ ಸುತ್ತಾಡಲಾರಂಭಿಸಿದ್ದರು. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಏ. 3ರಂದು ಕಾಲೇಜು ಮುಗಿದ ಬಳಿಕ ಬಾಲಕಿ, ಆರೋಪಿ ಕೊಠಡಿಗೆ ಹೋಗಿದ್ದಳು. ಅದೇ ವೇಳೆ ಬಾಲಕಿ ಹಾಗೂ ಆರೋಪಿ ನಡುವೆ ಜಗಳವಾಗಿರುವ ಮಾಹಿತಿ ಇದೆ. ಅದೇ ಸಂದರ್ಭದಲ್ಲೇ ಆರೋಪಿ, ಕತ್ತು ಬಿಗಿದು ಬಾಲಕಿಯನ್ನು ಕೊಂದಿದ್ದಾನೆಂದು ಗೊತ್ತಾಗಿದೆ. ನಂತರ, ಮೃತದೇಹವನ್ನು ಕೊಠಡಿಯಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೊರಬಂದಿದ್ದ.’

’ರಾತ್ರಿಯಾದರೂ ಬಾಲಕಿ ಮನೆಗೆ ಹೋಗಿರಲಿಲ್ಲ. ಗಾಬರಿಗೊಂಡ ಪೋಷಕರು, ಬಂಡೆಪಾಳ್ಯ ಠಾಣೆಯಲ್ಲಿ ದೂರು ಸಹ ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.