ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆವು ಸಮಸ್ಯೆ ನೀಗಿಸಲು ಕಾತರ

ಇನ್ಫೊಸಿಸ್ ವಿಜ್ಞಾನ ಪ್ರಶಸ್ತಿಗೆ ಪಾತ್ರರಾದ ಪ್ರೊ. ಜಿ. ಮುಗೇಶ್‌ ಅಭಿಮತ
Last Updated 7 ನವೆಂಬರ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಪ್ರಶಸ್ತಿಗೆ ಆಯ್ಕೆಯಾಗಿರುವಬೆಂಗಳೂರಿನ ಭಾರತೀಯ ವಿಜ್ಙಾನ ಸಂಸ್ಥೆಯ (ಐಐಎಸ್‌ಸಿ) ಅಜೈವಿಕ ಮತ್ತು ಭೌತಿಕ ರಸಾಯನವಿಜ್ಞಾನ ವಿಭಾಗದ ಪ್ರೊಫೆಸರ್ ಗೋವಿಂದಸಾಮಿ ಮುಗೇಶ್‌ ತಮ್ಮ ಸಂಶೋಧನೆಯ ಬಗ್ಗೆ ಒಂದಿಷ್ಟು ಮಾತು ಹಂಚಿಕೊಂಡಿದ್ದಾರೆ.

* ನೀವು ಕಂಡುಹಿಡಿದ ನ್ಯಾನೊ ಉತ್ಪನ್ನಗಳು, ಸಣ್ಣ ಅಣುಗಳು ಮನುಕುಲಕ್ಕೆ ಹೇಗೆ ನೆರವಿಗೆ ಬರಬಹುದು?
ಮುಗೇಶ್‌: ಪಾರ್ಕಿನ್ಸನ್‌, ಆಲ್ಜೈಮರ್ಸ್‌, ಥೈರಾಯ್ಡ್‌, ಪಕ್ಷವಾತ ಮೊದಲಾದ ಕಾಯಿಲೆಗಳಿಗೆ ಕಾರಣ ಮೆದುಳಿಗೆ ಸಂಪರ್ಕ ಕಲ್ಪಿಸುವ ನರಮಂಡಲಗಳ ಸಮಸ್ಯೆ. ಬೆನ್ನುಹುರಿ ಮತ್ತು ಮಿದುಳಿನ ಸಂಧಿ ಸ್ಥಳದಲ್ಲಿರುವ ಈ ನರಕೋಶಗಳು ವಿಷಕಾರಿಯಾಗುವ ಕಬ್ಬಿಣದ ಅಂಶದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ನನ್ನ ಸಂಶೋಧನೆಗಳು ನೆರವಿಗೆ ಬರಬಹುದು.

* ಎಷ್ಟು ವರ್ಷದಿಂದ ಈ ಪ್ರಯೋಗ ನಡೆಸುತ್ತಿದ್ದೀರಿ?
ಮುಗೇಶ್‌: ಮೂರು ವರ್ಷಗಳಿಂದ ಈ ಸಂಶೋಧನೆಯಲ್ಲಿ ತೊಡಗಿದ್ದು, ಇಲಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ನನ್ನ ಸಂಶೋಧನೆಗಳು ಥೈರಾಯ್ಡ್‌ ಹಾರ್ಮೋನ್‌ ಆಕ್ಟಿವೇಷನ್‌ ಮತ್ತು ಮೆಟಬೋಲಿಸಂನಲ್ಲಿ ಸೆಲೆನಿಯಂ ಮತ್ತು ಐಯೋಡಿನ್‌ನಂತಹ ಅಂಶಗಳನ್ನು ಪತ್ತೆಹಚ್ಚಲು ನೆರವಾಗಿದೆ ಮತ್ತು ಈ ಸಂಶೋಧನೆಗಳು ಪ್ರಮುಖ ವೈದ್ಯಕೀಯ ಸುಧಾರಣೆಗಳಿಗೆ ಕಾರಣವಾಗಿವೆ.

* ಈ ಔಷಧ ಪ್ರಯೋಗ ಯಶಸ್ವಿಯಾದರೆ ಇನ್ನೂ ಯಾವುದಕ್ಕೆಲ್ಲ ಪರಿಣಾಮಕಾರಿಯಾದೀತು?
ಮುಗೇಶ್‌: ಹೃದಯದ ರಕ್ತನಾಳ ಕಟ್ಟಿಕೊಳ್ಳುವುದು, ರಕ್ತದ ಪ್ಲೇಟ್‌ಲೆಟ್‌ಗಳು ಕಟ್ಟಿಕೊಳ್ಳುವಂತಹ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾದೀತು.

* ಇಂತಹ ಸಂಶೋಧನೆಗಳಿಗೆ ನಮ್ಮ ವಿಶ್ವವಿದ್ಯಾಲಯಗಳು ಸಜ್ಜಾಗಿವೆಯೇ?
ಮುಗೇಶ್‌: ಖಂಡಿತ ಇಲ್ಲ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪ್ರಯೋಗಾಲಯಗಳು ಸ್ವಲ್ಪಮಟ್ಟಿಗೆ ಚೆನ್ನಾಗಿವೆ, ರಾಜ್ಯ ವಿವಿಗಳಲ್ಲಿ ಸಮರ್ಪಕ ಪ್ರಯೋಗಾಲಯಗಳೇ ಇಲ್ಲ. ಉತ್ತಮ ಬೋಧಕರನ್ನು ನಿಯೋಜಿಸುವ ಕೆಲಸವೂ ಆಗುತ್ತಿಲ್ಲ. ವಿಶ್ವವಿದ್ಯಾಲಯಗಳು ಮತ್ತು ಔಷಧ ಕಂಪನಿಗಳು, ಉದ್ಯಮಗಳ ನಡುವೆ ಮಹತ್ವದ ಸಹಭಾಗಿತ್ವ ಏರ್ಪಡಬೇಕು. ಆದರೆ ಎರಡೂ ಕಡೆಯಿಂದ ಉದ್ದೇಶ ಒಂದೇ ಆಗಿರಬೇಕು. ಸಹಭಾಗಿತ್ವದಲ್ಲಿ ಪಾಲ್ಗೊಂಡ ಯಾರೊಬ್ಬರು ಭಿನ್ನವಾಗಿ ಯೋಚಿಸಿದರೂ ಅದು ಫಲ ಕೊಡಲು ಸಾಧ್ಯವಿಲ್ಲ.

* ಸರ್ಕಾರಿ ಶಾಲೆಯಲ್ಲಿ ಓದಿದರೂ ಇಂತಹ ಸಾಧನೆ ಹೇಗೆ ಸಾಧ್ಯವಾಯಿತು?
ಮುಗೇಶ್‌: ಸೇಲಂ ಸಮೀಪದ ರಾಜಾನುಜಪುರಂನಲ್ಲಿ ವಿದ್ಯುತ್‌ ಇರಲಿಲ್ಲ. ಅಲ್ಲಿ 12ನೇ ತರಗತಿ ತನಕ ಸರ್ಕಾರಿ ಶಾಲೆಯಲ್ಲಿ, ತಮಿಳು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ನಾನು ರಸಾಯನವಿಜ್ಞಾನದಲ್ಲಿ ಎಂಎಸ್ಸಿ ಪಡೆದೆ. ರಾಷ್ಟ್ರೀಯ ಪರೀಕ್ಷೆ ಬರೆದು ಮುಂಬೈಐಐಟಿಗೆ ಸೇರಿದ್ದೇ ನನ್ನ ಜೀವನದ ತಿರುವಿನ ಕ್ಷಣ. ಅರ್ಬನೊ ಮೆಟಾಲಿಕ್‌ ಎಜರ್ನಿ ಬಗ್ಗೆ ಅಧ್ಯಯನ ಕೈಗೊಂಡ ನಾನು 4 ವರ್ಷದಲ್ಲಿ ನನ್ನ ಪಿಎಚ್‌.ಡಿ ಪೂರೈಸಿದೆ.

ಬಳಿಕ ಅಲೆಕ್ಸಾಂಡರ್‌ ಕಂಬೋಲ್ಡ್‌ ಪೆಲೋಶಿಲ್‌ ಮೇಲೆ ಜರ್ಮನಿಗೆ ತೆರಳಿದೆ. ನಂತರ ಅಮೆರಿಕದ ಕ್ರಿಪ್ಸ್ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ತೆರಳಿದೆ. ಅಲ್ಲಿ ಒಂದು ವರ್ಷ ಸಂಶೋಧನೆಯಲ್ಲಿ ತೊಡಗಿದ್ದಾಗಲೇ 2012ರಲ್ಲಿ ಬೆಂಗಳೂರಿನ ಐಐಎಸ್‌ಸಿಯಿಂದ ಆಹ್ವಾನ ಬಂತು. ಸಂಶೋಧನೆ ಏನೇ ಇರಬಹುದು, ಒಂದು ಸ್ಪಷ್ಟಗುರಿ ಇದ್ದರೆ ಅದನ್ನು ಸಾಧಿಸುವುದು ಕಷ್ಟವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT