ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆಯಲ್ಲಿ ಬಹುಮಾದರಿ ಸಾಗಣೆ ಪಾರ್ಕ್‌: ಸೋಮಣ್ಣ

Last Updated 13 ಅಕ್ಟೋಬರ್ 2021, 16:46 IST
ಅಕ್ಷರ ಗಾತ್ರ

ಬೆಂಗಳೂರು: ದಾಬಸ್‌ಪೇಟೆಯಲ್ಲಿ ಬಹುಮಾದರಿ ಸಾಗಣೆ ಪಾರ್ಕ್‌ (ಎಂಎಂಎಲ್‌ಪಿ) ನಿರ್ಮಿಸಲು 400 ಎಕರೆ ಜಮೀನು ಗುರುತಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಅವರು, ‘ದೇಶದಲ್ಲಿ ಅತಿದೊಡ್ಡ ಸಾಗಣೆ ವ್ಯೂಹ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ಗುರಿ ಇದೆ. ಅದಕ್ಕೆ ಪೂರಕವಾಗಿ ಬಹುಮಾದರಿ ಸಾಗಣೆ ಪಾರ್ಕ್‌ ನಿರ್ಮಿಸಲಾಗುವುದು’ ಎಂದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ‘ಲಾಜಿಸ್ಟಿಕ್ಸ್‌ ಪಾರ್ಕ್‌’ಗಳನ್ನು ನಿರ್ಮಿಸಲಿದೆ. ಇದರಿಂದ ರಾಜ್ಯದಲ್ಲಿ ವಾಣಿಜ್ಯ ವಹಿವಾಟು ಸುಗಮವಾಗಿ ನಡೆಯಲುನ ಅನುಕೂಲವಾಗಲಿದೆ ಎಂದು ಹೇಳಿದರು.

ಗತಿ ಶಕ್ತಿ ಯೋಜನೆಯು ರಾಷ್ಟ್ರದ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಬಲ ತುಂಬಲಿರುವ ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ. ಮಹಾಯೋಜನೆಯ ಅನುಷ್ಠಾನವು ಆರ್ಥಿಕ ವ್ಯವಸ್ಥೆಯನ್ನು ಏಕೀಕರಣಗೊಳಿಸಿ, ದೇಶವನ್ನು ಸಮಗ್ರ ಪ್ರಗತಿಯತ್ತ ಕೊಂಡೊಯ್ಯಲಿದೆ ಎಂದರು.

ವಿವಿಧ ಆರ್ಥಿಕ ವಲಯಗಳನ್ನು ಬೆಸೆಯುವ ಈ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ರೈಲ್ವೆ, ಭೂಸಾರಿಗೆ ಸೇರಿದಂತೆ 16 ಸಚಿವಾಲಯಗಳನ್ನು ಒಂದು ಜಾಲದಡಿ ತರಲಾಗುತ್ತಿದೆ. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಕ್ಕೆ ಕಡಿವಾಣ ಬೀಳಲಿದೆ. ದೇಶದಾದ್ಯಂತ ಮೂಲಸೌಕರ್ಯ ಅಭಿವೃದ್ಧಿಯ ಹೊಸ ಶಕೆ ಇದರಿಂದ ಆರಂಭವಾಗಲಿದೆ ಎಂದು ಸೋಮಣ್ಣ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌. ಶಿವಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT