ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಇಲ್ಲದೇ ಬಹುಮಹಡಿ ನಿರ್ಮಾಣ?

10 ವರ್ಷಗಳಲ್ಲಿ 2,481 ಕಟ್ಟಡ ಯೋಜನೆಗಳಿಗೆ ಮಾತ್ರ ಬಿಬಿಎಂಪಿ ಅನುಮೋದನೆ, ಹೆಚ್ಚುತ್ತಲೇ ಇದೆ ಉಲ್ಲಂಘನೆ
Last Updated 14 ಜುಲೈ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹದ ಲೆಕ್ಕಾಚಾರದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಲಕ್ಷ ಆಸ್ತಿಗಳಿವೆ. ಈ ಪೈಕಿ ಬಹುಮಹಡಿ (15 ಮೀ ಗಿಂತ ಹೆಚ್ಚು ಎತ್ತರದವು) ಕಟ್ಟಡಗಳೆಷ್ಟು? ಅವುಗಳಲ್ಲಿ ಪಾಲಿಕೆಯಿಂದ ಮಂಜೂರಾತಿ ಪಡೆದು ನಿರ್ಮಿಸಿದವುಗಳೆಷ್ಟು.

ಈ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ. ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳ ಬಳಿಯೂ ಸ್ಪಷ್ಟ ಉತ್ತರ ಸಿಗದು. ‘ಬಹು ಮಹಡಿ ಕಟ್ಟಡ ಯೋಜನೆಗಳಿಗೆ 10 ವರ್ಷಗಳಿಂದ ಈಚೆಗೆ ಅನುಮೋದನೆ ನೀಡಿರುವ ಎಲ್ಲ ವಿವರಗಳೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (http://bbmp.gov.in) ಲಭ್ಯವಿದೆ’ ಎಂದು ಬಿಬಿಎಂಪಿ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಆರ್‌.ಪ್ರಸಾದ್‌ ತಿಳಿಸಿದರು.

ನಗರದಲ್ಲಿ ಬಹುಮಹಡಿ ಕಟ್ಟಡ ಗಳ ನಿರ್ಮಾಣ ಹೆಚ್ಚಾಗಿರುವುದು ದಶಕಗಳಿಂದ ಈಚೆಗೆ. ಪಾಲಿಕೆ ‌ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, 10 ವರ್ಷಗಳಲ್ಲಿ 2,481 ಬಹುಮಹಡಿ ಕಟ್ಟಡ ಯೋಜನೆಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಆದರೆ, ನಗರದಲ್ಲಿ ಯಾವುದಾದರೂ ಪ್ರಮುಖ ವಾಣಿಜ್ಯ ತಾಣಗಳಲ್ಲಿ ಅಡ್ಡಾಡಿದರೂ ಸಾಕು, ಸಾವಿರಾರು ಕಟ್ಟಡಗಳು ಕಾಣಸಿಗುತ್ತವೆ. ಇವುಗಳಲ್ಲಿ ಬಹುತೇಕವು 10 ವರ್ಷಗಳ ಹಿಂದೆ ಇದ್ದವುಗಳಲ್ಲ.

ಅಗ್ನಿಶಾಮಕ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಬೆಂಕಿ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳದ ಬಹುಮಹಡಿ ಕಟ್ಟಡಗಳ ಸಂಖ್ಯೆಯೇ 35 ಸಾವಿರಕ್ಕೂ ಅಧಿಕವಿದೆ. ‘ಈ ಸಂಖ್ಯೆ ಇನ್ನಷ್ಟು ಹೆಚ್ಚು ಇರಬಹುದು’ ಎನ್ನುತ್ತಾರೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು. ನಗರದಲ್ಲಿ ಮಂಜೂರಾತಿ ಪಡೆಯದೆಯೇ ಬಹು ಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬುದು ಈ ಅಂಕಿ ಅಂಶಗಳಿಂದಲೇ ಸಾಬೀತಾಗುತ್ತದೆ.

‘ಮಂಜೂರಾತಿ ಇಲ್ಲದೆಯೇ ಬಹುಮಹಡಿ ಕಟ್ಟಡ ನಿರ್ಮಾಣ ಮಾಡು ತ್ತಿರುವುದು ಗುಟ್ಟಿನ ವಿಚಾರ ವೇನಲ್ಲ. ಅನೇಕರು ಮೂರು ಮಹಡಿ ಕಟ್ಟಡಕ್ಕೆ ಅನುಮತಿ ಪಡೆದು ಅಕ್ರಮವಾಗಿ ನಾಲ್ಕು ಹಾಗೂ ಐದು ಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಕಣ್ಣೆದುರೇ ಇಂತಹ ಚಟುವಟಿಕೆ ನಡೆದರೂ ಪಾಲಿಕೆ ಅಧಿಕಾರಿಗಳು ಸುಮ್ಮನಿರುತ್ತಾರೆ. ಇದರ ಹಿಂದೆ ಸಾಕಷ್ಟು ಭ್ರಷ್ಟಾಚಾರವೂ ನಡೆಯುತ್ತದೆ’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಡಿ.ಎಸ್‌. ರಾಜಶೇಖರ್‌ ಆರೋಪಿಸಿದರು.

‘ಕಾಕ್ಸ್‌ಟೌನ್‌ನಲ್ಲಿ ಇತ್ತೀಚೆಗೆ ದುರ್ಘಟನೆ ಸಂಭವಿಸಿದ ಕಟ್ಟಡವನ್ನು ಇದೇ ರೀತಿ ನಿಯಮ ಉಲ್ಲಂಘಿಸಿಯೇ ನಿರ್ಮಿಸಲಾಗಿತ್ತು. ಕಣ್ಣೆದುರೇ ಇಷ್ಟೊಂದು ದೊಡ್ಡ ಕಟ್ಟಡ ನಿರ್ಮಾಣವಾಗುವಾಗ ಆಯಾ ವಾರ್ಡ್‌ ಎಂಜಿನಿಯರ್‌ಗೆ ಗೊತ್ತಿರುವುದಿಲ್ಲವೇ. ವಾರ್ಡ್‌ ಎಂಜಿನಿಯರ್‌ಗಳು ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ರಾಜಶೇಖರ್‌.

ಅವಘಡ ಸಂಭವಿಸಿದ ಬಳಿಕ ಸಹಾಯಕ ಎಂಜಿನಿಯರ್ ಶ್ರೀಕಾಂತ್ ಅವರನ್ನು ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ ಆರೋಪದಡಿ ಅಮಾನತು ಮಾಡಲಾಗಿದೆ. ಅಮಾನತಾದ ಅಧಿಕಾರಿ ಸ್ವಲ್ಪ ದಿನಗಳ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ. ದುರಂತಗಳನ್ನು ಜನ ಬಲುಬೇಗ ಮರೆಯುತ್ತಾರೆ. ನಿಯಮ ಉಲ್ಲಂಘನೆಗಳು ನಂತರವೂ ಮುಂದುವರಿಯುತ್ತಲೇ ಇರುತ್ತವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಶ್ವತನಗರದಲ್ಲಿ ಇದೇ ರೀತಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ವೊಂದು ನಿರ್ಮಾಣ ಪೂರ್ಣ ಗೊಳ್ಳುವ ಹಂತದಲ್ಲಿ ವಾಲಿಕೊಂಡಿತ್ತು. ಬಳಿಕ ಅದನ್ನು ಕೆಡವಲಾಗಿತ್ತು. ಒಂದು ವರ್ಷದಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ಮರುಕಳಿಸಿವೆ.

‘ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಪಾಲಿಕೆಯ ಎಂಜಿನಿಯರ್‌ಗಳು ನಿರ್ಮಾಣ ಹಂತದಲ್ಲೇ ತಡೆದ ಅನೇಕ ಉದಾಹರಣೆಗಳಿವೆ. ಸಾಮಾನ್ಯವಾಗಿ ಇಂತಹ ಕಟ್ಟಡ ನಿರ್ಮಿಸುವವರಿಗೆ ರಾಜಕೀಯ ಬೆಂಬಲವೂ ಇರುತ್ತದೆ. ಕೆಲವೊಮ್ಮೆ ಮೇಲಾಧಿಕಾರಿಗಳಿಂದಲೂ ಸರಿಯಾದ ಬೆಂಬಲ ಸಿಗದಿದ್ದಾಗ ತಳಮಟ್ಟದ ಅಧಿಕಾರಿಗಳು ಅಸಹಾಯಕರಾಗಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಅಕ್ರಮ ನಿರ್ಮಾಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಅಚ್ಚರಿ ಎಂದರೆ ಉಲ್ಲಂಘನೆ ಪ್ರಕರ ಣಗಳು ಕಣ್ಣಿಗೆ ರಾಚುವಂತಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕುವ ಯಾವುದೇ ಪ್ರಯತ್ನವನ್ನು ಬಿಬಿಎಂಪಿ ಮಾಡಿಲ್ಲ. ಇದನ್ನು ಮಾಡಿದರೆ ಅಧಿಕಾರಿ ಗಳು ನಡೆಸಿರುವ ಅಕ್ರಮಗಳಿಗೆ ದಾಖಲೆ ಸಿಕ್ಕಂತಾಗುತ್ತದೆ. ಪಾಲಿಕೆ ಸದಸ್ಯರೂ ಇಂತಹ ಅಕ್ರಮ ತಡೆಯುವ ಬಗ್ಗೆ ಕಾಳಜಿ ತೋರಿಸುವುದಿಲ್ಲ. ಏಕೆಂದರೆ ಈ ಅಕ್ರಮದಲ್ಲಿ ಅವರ ಪಾಲೂ ಇದೆ’ ಎಂದು ರಾಜಶೇಖರ್‌ ಆರೋಪಿಸಿದರು.

ಎಷ್ಟು ಮಹಡಿವರೆಗೆ ಅನುಮತಿ?

ನಗರದಲ್ಲಿ ಐದಾರು ವರ್ಷದ ಹಿಂದಿನವರೆಗೂ ಬಿಬಿಎಂಪಿ ವತಿಯಿಂದಲೇ ನಿರ್ಮಿಸಿದ ಎಂ.ಜಿ. ರಸ್ತೆಯಲ್ಲಿನ ಯುಟಿಲಿಟಿ ಕಟ್ಟಡವೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಪಡೆದಿತ್ತು. 1973ನಲ್ಲಿ ಕಟ್ಟಿದ್ದ ಈ ಕಟ್ಟಡ 24 ಮಹಡಿಗಳನ್ನು ಹೊಂದಿದೆ. ಬನ್ನೇರುಘಟ್ಟ ರಸ್ತೆ ಬಳಿ 43 ಮಹಡಿಗಳಿರುವ ವಸತಿ ಸಂಕೀರ್ಣ ನಿರ್ಮಿಸಲು ಪಾಲಿಕೆ ಮಂಜೂರಾತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT