ಮಕ್ಕಳಾಗದಕ್ಕೆ ಪತ್ನಿಯನ್ನೇ ಕೊಂದ!

7

ಮಕ್ಕಳಾಗದಕ್ಕೆ ಪತ್ನಿಯನ್ನೇ ಕೊಂದ!

Published:
Updated:

ಬೆಂಗಳೂರು: ಲಗ್ಗೆರೆಯ ಲಕ್ಷ್ಮಿದೇವಿ ನಗರ ದಲ್ಲಿ ಶುಕ್ರವಾರ ನಸುಕಿನ ವೇಳೆ ಕಲ್ಪನಾ (27) ಎಂಬುವರನ್ನು ಅವರ ಪತಿಯೇ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ಆಂಧ್ರಪ್ರದೇಶದ ಕಲ್ಪನಾ, ಹತ್ತು ವರ್ಷಗಳ ಹಿಂದೆ ಡಿ.ರಮೇಶ್ (33) ಎಂಬಾತನನ್ನು ವಿವಾಹವಾಗಿದ್ದರು. ಇಬ್ಬರೂ ಪೀಣ್ಯದ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 6 ಗಂಟೆ ಸುಮಾರಿಗೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆರೋಪಿ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಕೋಣೆಯಲ್ಲಿ ನಿದ್ರಿಸುತ್ತಿದ್ದ ಕಲ್ಪನಾ ತಾಯಿ, ಗಲಾಟೆಯ ಶಬ್ದ ಕೇಳಿ ಹೊರಗೆ ಬರುತ್ತಿದ್ದಂತೆಯೇ ರಮೇಶ್ ಓಡಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಮದುವೆ ಆಗಿ 10 ವರ್ಷವಾದರೂ ನಮಗೆ ಮಕ್ಕಳಾಗಲಿಲ್ಲ. ನಿನ್ನಲ್ಲೇ ಏನೋ ದೋಷವಿರಬಹುದು ಎಂದು ಮಗಳಿಗೆ ಅಳಿಯ ಕಿರುಕುಳ ನೀಡುತ್ತಿದ್ದ. ಬೆಳಿಗ್ಗೆಯೂ ಇದೇ ವಿಚಾರವಾಗಿ ಬೈದಾಡಿಕೊಳ್ಳುತ್ತಿದ್ದರು. ಕೊಲ್ಲುವ ಮಟ್ಟಕ್ಕೆ ಹೋಗುತ್ತಾನೆ ಎಂದುಕೊಂಡಿರಲಿಲ್ಲ’ ಎಂದು ಮೃತರ ತಾಯಿ ಹೇಳಿಕೆ ಕೊಟ್ಟಿದ್ದಾಗಿ ನಂದಿನಿ ಲೇಔಟ್ ಪೊಲೀಸರು
ತಿಳಿಸಿದರು.

ಅಪಘಾತಕ್ಕೆ ಬಲಿ

ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಿಬಿಎಂ ವಿದ್ಯಾರ್ಥಿನಿ ಫೈಜಾ ಖಾನ್ (22)
ಮೃತಪಟ್ಟಿದ್ದಾರೆ.

ಉತ್ತರಪ್ರದೇಶದ ಫೈಜಾ, ಚಿಕ್ಕಜಾಲದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದರು. ಗುರುವಾರ ರಾತ್ರಿ ಸ್ನೇಹಿತ ಕಮಲ್ ಮನೆಗೆ ತೆರಳಿದ್ದ ಅವರು, ಊಟ ಮುಗಿಸಿಕೊಂಡು ಕಮಲ್ ಜತೆ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಥಣಿಸಂದ್ರ ಮುಖ್ಯರಸ್ತೆಯ ನಾರಾಯಣಪುರ ಸಿಗ್ನಲ್‌ ಬಳಿ ಲಾರಿ ಚಾಲಕ ಬೈಕನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಈ ವೇಳೆ ಲಾರಿಗೆ ಹ್ಯಾಂಡಲ್‌ನ ತುದಿ ತಾಕಿದ್ದರಿಂದ ನಿಯಂತ್ರಣ ತಪ್ಪಿ ಇಬ್ಬರೂ ಬೈಕ್‌ನಿಂದ ಬಿದ್ದಿದ್ದಾರೆ. ಫೈಜಾ ತಲೆ ಮೇಲೆ ಲಾರಿ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ಕಮಲ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ

ಗಿರಿನಗರದ ಡಿಸೋಜಾ ಲೇಔಟ್‌ನಲ್ಲಿ ಗುರುವಾರ ರಾತ್ರಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಿಮಾದ್ರಿ (17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

‘ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಅದೇ ಬೇಸರದಲ್ಲಿದ್ದ ಮಗಳು, ನಾವು ಮಲಗಿದ ನಂತರ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ’ ಎಂದು ಹಿಮಾದ್ರಿ ಪೋಷಕರು ಹೇಳಿರುವುದಾಗಿ ಗಿರಿನಗರ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !