ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿವಿಂಗ್ ಟುಗೆದರ್‌’ ಜೋಡಿ ಮಧ್ಯೆ ಮನಸ್ತಾಪ: ಪ್ರಿಯಕರನಿಂದ ಪ್ರೇಯಸಿ ಹತ್ಯೆ

ಸಿಲಿಂಡರ್ ಎತ್ತಿ ಹಾಕಿ ಕೃತ್ಯ
Last Updated 22 ಸೆಪ್ಟೆಂಬರ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿವಿಂಗ್ ಟುಗೆದರ್‌’ ಬಂಧದಲ್ಲಿದ್ದ ಗೆಳತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತ‍ಪಡಿಸಿದ ಗೆಳೆಯ, ಸಿಲಿಂಡರ್ ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಕೆ.ಆರ್. ಪುರ ಠಾಣಾ ವ್ಯಾಪ್ತಿಯ ದೊಡ್ಡಬಸವನಪುರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಶಶಿಕಲಾ (32) ಕೊಲೆಯಾದ ಮಹಿಳೆ. ಆರೋಪಿ ವೆಂಕಟಗಿರಿಯಪ್ಪನನ್ನು (40) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವೆಂಕಟಗಿರಿಯಪ್ಪ ವಿವಾಹಿತನಾಗಿದ್ದು, ಆತನ ಕುಟುಂಬ ಮುಳಬಾಗಿಲಿನಲ್ಲಿ ನೆಲೆಸಿದೆ. ಆರೋಪಿ ಮತ್ತು ಶಶಿಕಲಾ ಕೆಲವು ವರ್ಷಗಳಿಂದ ಜೊತೆಯಾಗಿ ಜೀವನ ಮಾಡುತ್ತಿದ್ದರು. ಶಶಿಕಲಾಳನ್ನು ಕೆ.ಆರ್.ಪುರದಲ್ಲಿ ಬಾಡಿಗೆ ಮನೆ ಮಾಡಿ ಆರೋಪಿ ಇರಿಸಿದ್ದ. ಆಕೆಗೆ ಮೂರು ವರ್ಷದ ಮಗಳಿದ್ದಾಳೆ.

ಶಶಿಕಲಾಳ ಶೀಲ ಶಂಕಿಸಿ ವೆಂಕಟಗಿರಿಯಪ್ಪ ಶನಿವಾರ ನಸುಕಿನ ಎರಡು ಗಂಟೆ ಸುಮಾರಿಗೆ ಜಗಳ ಮಾಡಿದ್ದಾನೆ. ಮನೆಯಲ್ಲಿ ಜೋರಾಗಿ ಶಬ್ದ ಕೇಳಿದ ತಕ್ಷಣ ಮನೆಯ ಮಾಲೀಕರು ಆರೋಪಿಯ ಮನೆಗೆ ತೆರಳಿ ಬಾಗಿಲು ತೆಗೆಯುವಂತೆ ಸೂಚಿಸಿದ್ದರು. ಎಷ್ಟೂ ಕೂಗಿದರೂ ಆರೋಪಿ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ, ಕಿಟಕಿ ಮೂಲಕ ಸ್ಥಳೀಯರು ಮತ್ತು ಮನೆ ಮಾಲೀಕರು ನೋಡಿದಾಗ ಆರೋಪಿ, ಶಶಿಕಲಾ ಕತ್ತು ಹಿಸುಕುತ್ತಿದ್ದ. ತಕ್ಷಣ ಸ್ಥಳೀಯರು ಕೂಗಾಡುತ್ತಾ, ಆಕೆಯನ್ನು ಬಿಡುವಂತೆ ಮನವಿ ಮಾಡಿದ್ದಾರೆ.

ಆದರೆ, ಯಾರ ಮಾತೂ ಕೇಳದ ಆರೋಪಿ ‘ನನ್ನನ್ನು ಬಿಟ್ಟು ಬೇರೆಯವರ ಸಹವಾಸ ಮಾಡುತ್ತೀಯಾ’ ಎಂದು ನಿಂದಿಸುತ್ತಾ, ಅಡುಗೆ ಮನೆಗೆ ಹೋಗಿ ಸಿಲಿಂಡರ್ ತಂದಿದ್ದಾನೆ. ಈ ವೇಳೆ ಮಹಿಳೆ ತೆವಳಿಕೊಂಡು ಬಾಗಿಲಿನವರೆಗೆ ಬಂದಿದ್ದಾಳೆ. ಅಷ್ಟರಲ್ಲಿ ಮಹಿಳೆಯ ತಲೆ ಮೇಲೆ ವೆಂಕಟಗಿರಿಯಪ್ಪ ಸಿಲಿಂಡರ್‌ ಎತ್ತಿ ಹಾಕಿದ್ದಾನೆ ಎಂದು ಪೊಲೀಸರು ಹೇಳಿದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ ಸ್ಥಳೀಯರು ಬಾಗಿಲು ತೆಗೆಯುವಂತೆ ಆರೋಪಿಗೆ ಕೇಳಿಕೊಂಡಿದ್ದಾರೆ. ಆಗ ಆರೋಪಿ, ‘ಪೊಲೀಸರು ಬರುವ ತನಕ ಬಾಗಿಲು ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾನೆ. ಪೊಲೀಸರು ಬಂದು ಮನವೊಲಿಸಿದ ಬಳಿಕ ಆರೋಪಿ ಬಾಗಿಲು ತೆಗೆದಿದ್ದಾನೆ.

‘ತಲೆ ಮೇಲೆ ಸಿಲಿಂಡರ್ ಎತ್ತಿಹಾಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆಯ ಸಾವು ಸಂಭವಿಸಿದೆ. ಮನೆ ಬಾಡಿಗೆ ಪಡೆಯುವಾಗ ವೆಂಕಟಗಿರಿಯಪ್ಪ, ‘ಶಶಿಕಲಾ ನನ್ನ ಪತ್ನಿ’ ಎಂದು ಹೇಳಿಕೊಂಡಿದ್ದಾನೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಗೊತ್ತಾಗಿದೆ. ಮಹಿಳೆಯ ಸಂಬಂಧಿಕರಿಗೆ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT