ಮಂಗಳವಾರ, ಜನವರಿ 25, 2022
25 °C
ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ l ಅಸ್ಸಾಂನಲ್ಲಿ ಮದ್ಯದಂಗಡಿ ನಡೆಸುತ್ತಿದ್ದ

ಪತ್ನಿ, ಮಕ್ಕಳ ಕೊಲೆ: 11 ವರ್ಷಗಳ ಬಳಿಕ ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಆರೋಪದಡಿ ಬಂಧಿತನಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ಧರ್ಮಸಿಂಗ್ ಯಾದವ್ (53) ಎಂಬಾತ, 11 ವರ್ಷಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಧರ್ಮಸಿಂಗ್, ಚಿಕಿತ್ಸೆಗೆಂದು ವಿಕ್ಟೋರಿಯಾ ಆಸ್ಪತ್ರೆಯ ಮೂತ್ರಪಿಂಡ ವಿಭಾಗಕ್ಕೆ ಬಂದಿದ್ದ. ತನ್ನನ್ನು ಕರೆತಂದಿದ್ದ ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಬೆಂಗಳೂರಿನಿಂದ ಅಸ್ಸಾಂಗೆ ಹೋಗಿದ್ದ ಧರ್ಮಸಿಂಗ್, ಅಲ್ಲಿ ಬೇರೊಬ್ಬರ ಹೆಸರಿನಲ್ಲಿ ಪರವಾನಗಿ ಪಡೆದು ಮದ್ಯದಂಗಡಿ ನಡೆಸುತ್ತಿದ್ದ. ಇತ್ತೀಚೆಗೆ ಆತನ ಬಗ್ಗೆ ತಾಂತ್ರಿಕ ಪುರಾವೆಗಳು ದೊರೆತಿದ್ದವು. ಅಸ್ಸಾಂಗೆ ಹೋದ ವಿ.ವಿ.ಪುರ ಠಾಣೆ ಪೊಲೀಸರ ತಂಡ ಆತನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದೂ ಹೇಳಿದರು.

ಎರಡನೇ ಮದುವೆಯಾಗಲು ಹತ್ಯೆ: ‘ಹರಿಯಾಣದ ಧರ್ಮಸಿಂಗ್, ಪತ್ನಿ ಅನು ಹಾಗೂ ಮಕ್ಕಳಾದ ಕೀರ್ತಿ, ಶುಭಂ ಜೊತೆ ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯ ಸಿಂಗಾಪುರ ಬಡಾವಣೆಯಲ್ಲಿ ವಾಸವಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೂ ಹೋಗುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಎರಡನೇ ಮದುವೆಯಾಗಲು ಯೋಚಿಸಿದ್ದ ಆತ, ಜೀವನ್‌ಸಾಥಿ ಡಾಟ್ ಕಾಮ್‌ ವೈವಾಹಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದ. ಆತನಿಗೆ ರಾಜಾಜಿನಗರದ ಮಹಿಳೆಯೊಬ್ಬರ ಪರಿಚಯವಾಗಿತ್ತು. ಅವರನ್ನು ಮದುವೆಯಾಗಲು ತೀರ್ಮಾನಿಸಿದ್ದ ಆತ, ಮಾತುಕತೆ ಸಹ ನಡೆಸಿದ್ದ.’

‘ತನ್ನ ಮದುವೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಅಡ್ಡಿಯಾಗುತ್ತಾರೆಂದು ಭಾವಿಸಿದ್ದ ಆತ, ಮೂವರನ್ನೂ ಕೊಲೆ ಮಾಡಲು ಸಂಚು ರೂಪಿಸಿದ್ದ. 2008ರ ಅಕ್ಟೋಬರ್ 19ರಂದು ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಮೇಲೆ ದಾಳಿ ಮಾಡಿದ್ದ. ಮರದ ಕಟ್ಟಿಗೆಯಿಂದ ಹೊಡೆದು, ಚಾಕುವಿನಿಂದ ಕತ್ತು ಕೊಯ್ದು ಮೂವರನ್ನೂ ಹತ್ಯೆ ಮಾಡಿದ್ದ’ ಎಂದೂ ಮೂಲಗಳು ವಿವರಿಸಿವೆ.

ಠಾಣೆಗೆ ಹೋಗಿ ದೂರು ಕೊಟ್ಟಿದ್ದ: ‘ಕೊಲೆ ನಂತರ ಠಾಣೆಗೆ ಹೋಗಿದ್ದ ಧರ್ಮಸಿಂಗ್, ಚಿನ್ನಾಭರಣ ಸುಲಿಗೆಗಾಗಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಪತ್ನಿ ಹಾಗೂ ಮಕ್ಕಳನ್ನು ಕೊಂದು ಪರಾರಿಯಾಗಿರುವುದಾಗಿ ದೂರು ಕೊಟ್ಟಿದ್ದ. ತನಿಖೆ ನಡೆಸಿದ್ದ ಪೊಲೀಸರಿಗೆ, ಧರ್ಮಸಿಂಗ್ ಮೇಲೆ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಆತನನ್ನು ಬಂಧಿಸಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. 2 ವರ್ಷ 2 ತಿಂಗಳು ಜೈಲಿನಲ್ಲಿದ್ದ ಆತ, ಮೂತ್ರ ಪಿಂಡದ ತೊಂದರೆ ಇರುವುದಾಗಿ ಅಧಿಕಾರಿಗಳಿಗೆ ಸುಳ್ಳು ಹೇಳಿದ್ದ. ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಂಡಿದ್ದ ಜೈಲು ಅಧಿಕಾರಿಗಳು, ನಗರ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸರ ಭದ್ರತೆಯಲ್ಲಿ 2010ರ ಡಿಸೆಂಬರ್ 4ರಂದು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು.’

‘ತಪ್ಪಿಸಿಕೊಳ್ಳಲು ಮೊದಲೇ ಯೋಚಿಸಿದ್ದ ಧರ್ಮಸಿಂಗ್, ಜೈಲಿನ ಅಡುಗೆ ಮನೆಯಲ್ಲಿದ್ದ ಖಾರವನ್ನು ಜೇಬಿನಲ್ಲಿಟ್ಟುಕೊಂಡಿದ್ದ. ಆಸ್ಪತ್ರೆಯಲ್ಲಿದ್ದಾಗ ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ’ ಎಂದೂ ಮೂಲಗಳು ವಿವರಿಸಿವೆ.

ಅಸ್ಸಾಂನಲ್ಲೂ ಮದುವೆ: ‘ವೈವಾಹಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಅಸ್ಸಾಂನ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ಧರ್ಮಸಿಂಗ್, ಅವರ ಜೊತೆ ನೆಲೆಸಿದ್ದ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು