7
ಸದಾ ಮೊಬೈಲ್‌ನಲ್ಲೇ ಮಳುಗಿರುತ್ತಿದ್ದಳು; ಆರೋಪಿ ಪತಿಯ ಹೇಳಿಕೆ

ಪತ್ನಿ ಕೊಂದಿದ್ದ ಒಡಿಶಾದ ಕಾರ್ಮಿಕ ಬಂಧನ

Published:
Updated:

ಬೆಂಗಳೂರು: ಅನೈತಿಕ ಸಂಬಂಧದ ಶಂಕೆ ಮೇಲೆ ಪತ್ನಿಯನ್ನು ಕೊಂದು ಒಡಿಶಾಗೆ ತೆರಳಿದ್ದ ಕೈಲಾಶ್ ಚಂದ್ರ (28) ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಪತ್ನಿಗೆ ಪರ ಪುರುಷನ ಜತೆ ಸಂಬಂಧವಿತ್ತು. ಯಾವಾಗಲೂ ಮೊಬೈಲ್‍ನಲ್ಲೇ ಮುಳುಗಿರುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಎಚ್ಚರಿಸಿದರೂ ಬುದ್ಧಿ ಕಲಿಯಲಿಲ್ಲ. ಅದಕ್ಕೇ ಕೊಲೆ ಮಾಡಿ ಹೋಗಿದ್ದೆ’ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

ಒಡಿಶಾದ ಕೈಲಾಶ್, ಹತ್ತು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಕಾಮಾಕ್ಷಿಪಾಳ್ಯದ ಸೊಳ್ಳೆ ಪರದೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತ, ತನ್ನೂರಿನವರೇ ಆದ ಮಾಲತಿ ಸಾಹು ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿ ಕಾವೇರಿಪುರದಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದರು. ಮಾಲತಿ ಸುಂಕದಕಟ್ಟೆಯ ಸಿದ್ಧ ಉಡುಪು ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು.

‘ಪೂರ್ತಿ ಸಂಬಳವನ್ನು ಪತ್ನಿ ಕೈಗೇ ಕೊಡುತ್ತಿದ್ದ ನಾನು, ಖರ್ಚಿಗೆ ಬೇಕಾದಾಗ ಹಣ ಕೇಳಿ ಪಡೆಯುತ್ತಿದ್ದೆ. ಅಂತೆಯೇ ಜೂನ್ 19ರಂದು ದುಡ್ಡು ಕೇಳಿದಾಗ ತನ್ನ ಬಳಿ ಹಣವಿಲ್ಲ ಎಂದಳು. ಇಷ್ಟು ಬೇಗ ಹೇಗೆ ಖಾಲಿ ಆಯಿತು? ಯಾರಿಗೆ ಕೊಟ್ಟೆ ನಿಜ ಹೇಳು? ನೀನು ಸಂಬಂಧ ಇಟ್ಟುಕೊಂಡಿದ್ದೀಯಲ್ಲಾ, ಅವನಿಗೇನಾದರೂ ಕೊಟ್ಟಿದ್ದೀಯಾ ಎಂದು ಪ್ರಶ್ನಿಸಿದೆ. ಅದರಿಂದ ಸಿಟ್ಟಾದ ಪತ್ನಿ, ನನ್ನ ವಿರುದ್ಧ ಕೂಗಾಡಿದಳು’ ಎಂದು ಅರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದರು.

‘ಅರ್ಧ ತಾಸಿನ ಗಲಾಟೆ ಬಳಿಕ ಇಬ್ಬರೂ ಸುಮ್ಮನಾದೆವು. ಆ ನಂತರ ಆಕೆ ಮೊಬೈಲ್ ಹಿಡಿದುಕೊಂಡು ಕುಳಿತಳು. ನಾನು ಎಷ್ಟೇ ಮಾತನಾಡಿಸಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ನನ್ನ ಮಾತಿಗಿಂತ ಯಾರಿಗೋ ಸಂದೇಶ ಕಳುಹಿಸುವುದೇ ಆಕೆಗೆ ದೊಡ್ಡ ಕೆಲಸವಾಗಿತ್ತು. ಆ ಕೋಪದಲ್ಲಿ ಬೈದಿದ್ದರಿಂದ ಪುನಃ ಕೂಗಾಡಿದಳು. ಆಗ ಉಸಿರುಗಟ್ಟಿಸಿ ಕೊಲೆ ಮಾಡಿದೆ’ ಎಂದು ವಿವರಿಸಿದ್ದಾನೆ.

ಮಾಲೀಕರು ಎದುರಾದರು: ಹತ್ಯೆಗೈದ ಬಳಿಕ ದೇಹದ ಮೇಲೆ ಬೆಡ್‌ಶೀಟ್ ಹೊದಿಸಿ ಹೊರಟ ಕೈಲಾಶ್‌ಗೆ ಮನೆ ಮಾಲೀಕ ಮುನಿಯಪ್ಪ ಎದುರಾಗಿದ್ದರು. ‘ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ಅವರು ಪ್ರಶ್ನಿಸಿದಾಗ, ‘ಊರಿನಿಂದ ತಂದೆ ಬಂದಿದ್ದಾರೆ. ಅವರಿಗೆ ರೂಮಿನ ವ್ಯವಸ್ಥೆ ಮಾಡಿಕೊಟ್ಟು ಬರುತ್ತೇನೆ’ ಎಂದು ಹೇಳಿ ಹೋಗಿದ್ದ.

ಪ್ರತಿದಿನ ಸಂಜೆ ಸ್ಥಳೀಯ ಮಹಿಳೆಯರು ಮಾಲತಿ ಅವರ ಮನೆ ಮುಂದೆ ಕುಳಿತು ಮಾತುಕತೆ ನಡೆಸುತ್ತಾರೆ. ಅಂತೆಯೇ ಆ ದಿನವೂ ಕೆಲವರು ಮನೆ ಹತ್ತಿರ ಬಂದಿದ್ದರು. ಸಂಜೆ 7 ಗಂಟೆಯಾದರೂ ಮಾಲತಿ ಹೊರಗೆ ಬಾರದಿದ್ದಾಗ ಬಾಗಿಲು ಬಡಿದಿದ್ದರು. ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ ತಾವೇ ಒಳಗೆ ಹೋಗಿದ್ದರು. ಆಗ ಮಾಲತಿ ನಡುಮನೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದರು. ಕೈಲಾಶ್ ಚಂದ್ರನೇ ಕೊಲೆ ಮಾಡಿದ್ದಾನೆಂದು ಮಾಲೀಕರು ಠಾಣೆಗೆ ದೂರು ಕೊಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !