ರೌಡಿ ಕೊಲೆಗೆ ಜೈಲಿನಿಂದಲೇ ಸಂಚು; ಆರೋಪಿಗಳ ಬಂಧನ

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ರೌಡಿ ಲೋಕೇಶ್ (28) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಕೋಗಿಲು ಲೇಔಟ್ ನಿವಾಸಿ ಸೈಯದ್ ನವಾಜ್ (22), ಸೈಯದ್ ತೋಹಿದ್ (27), ಸೈಯದ್ ಆರೀಫ್ (21), ತಬ್ರೇಜ್ ಬೇಗ್ (33), ಅಗ್ರಹಾರ ಲೇಔಟ್‌ನ ಗಣೇಶ್ (19) ಹಾಗೂ ಕಾಮಾಕ್ಷಮ್ಮ ಲೇಔಟ್ ನಿವಾಸಿ ರಮೇಶ್ ಅಲಿಯಾಸ್ ಟಾಟಾ (40) ಬಂಧಿತರು. ಕೊಲೆ ಆರೋಪದಡಿ ಜೈಲು ಸೇರಿರುವ ಕ್ಯಾಟ್ ಮಂಜ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಹಲ್ಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಲ್ಲಿ ಆರೋಪಿಯಾಗಿದ್ದ ಲೋಕೇಶ್, ಆರೋಪಿ ನವಾಜ್ ಜತೆ ಗಲಾಟೆ ಮಾಡಿಕೊಂಡಿದ್ದ. ಇದೇ ವಿಚಾರವನ್ನು ನವಾಜ್ ಸ್ನೇಹಿತರ ಮೂಲಕ ಜೈಲಿನಲ್ಲಿರುವ ಮಂಜನಿಗೆ ತಿಳಿಸಿದ್ದ. ಅದಾದ ನಂತರವೇ ಮಂಜ, ಜೈಲಿನಲ್ಲೇ ಸಂಚು ರೂಪಿಸಿ ಲೋಕೇಶ್‌ಗೆ ಒಂದು ಗತಿ ಕಾಣಿಸುವಂತೆ ಹೇಳಿದ್ದ.’
‘ಜೂ. 6ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದ ಲೋಕೇಶ್‌ನನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದರು. ಸ್ಥಳೀಯರೇ ಲೋಕೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.