ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ ರಿಪೋರ್ಟ್‌ ಸಲ್ಲಿಸಿದಾಕ್ಷಣ ಪ್ರಕರಣ ಮುಗೀತು ಅಂತಲ್ಲ: ಹೈಕೋರ್ಟ್

ಅಮೃತರಾಜ್‌ ವಿರುದ್ಧದ ಕೊಲೆ ಯತ್ನ ಪ್ರಕರಣ
Last Updated 8 ಜೂನ್ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತರಾಜ್‌ ವಿರುದ್ಧ ಹೂಡ ಲಾಗಿರುವ ಕೊಲೆ ಯತ್ನ ಮತ್ತು ಜೀವ ಬೆದರಿಕೆ ಆರೋಪದ ಪ್ರಕರಣದಲ್ಲಿ ಪೊಲೀಸರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಿರುವುದನ್ನುರದ್ದುಗೊಳಿಸ ಬೇಕು ಎಂದು ಕೋರಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪೂರ್ವ ನಿದರ್ಶನಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿ’ ಎಂದು ದೂರುದಾರರ ಪರವಕೀಲರಿಗೆ ಹೈಕೋರ್ಟ್‌ ಸೂಚಿಸಿದೆ.

‘ನನ್ನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆಯತ್ನ, ಜೀವ ಬೆದರಿಕೆ ಆರೋಪದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಅಮೃತರಾಜ್‌ ಅವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನ ಗೌಡರ ಅವರಿದ್ದ ಏಕಸದಸ್ಯ ನ್ಯಾಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಮೃತರಾಜ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್‌ ಪಾಷ, ‘ಈ ಪ್ರಕರಣದಲ್ಲಿ ಈಗಾಗಲೇ ಯಶವಂತಪುರ ಮತ್ತು ಆರ್‌ಎಂಸಿ ಯಾರ್ಡ್‌ ಪೊಲೀಸರು ಎರಡು ಬಾರಿ ‘ಸಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶ ವಿಲ್ಲದೆ ಪ್ರಕರಣದ ಮುಂದುವರಿದ ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿರುವುದು ಕಾನೂನುಬಾಹಿರ. ಆದ್ದರಿಂದ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

ಇದನ್ನು ಬಲವಾಗಿ ಅಲ್ಲ ಗಳೆದ ದೂರುದಾರರೂ ಆದ ಪ್ರತಿ ವಾದಿ ಬಿ.ಆರ್.ಮುರಳೀಧರ ಪರ ವಾದ ಮಂಡಿಸಿದ ವಕೀಲ ಸಿ.ಎಚ್‌.ಹನುಮಂತರಾಯ, ‘ಸಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಪ್ರಕರಣ ಮುಕ್ತಾಯವಾಗಿದೆ ಎಂದರ್ಥವಲ್ಲ.ಕರ್ನಾಟಕ ಪೊಲೀಸ್‌ ಮ್ಯಾನುಯಲ್‌ ಅನುಸಾರ ಅಂತಿಮ ‘ಸಿ’ ವರದಿ ಸಲ್ಲಿಸಿದ ಪ್ರಕರಣದಲ್ಲಿ ತನಿಖಾಧಿಕಾರಿಗೆ ಯಾವುದಾದರೂ ಸಾಕ್ಷ್ಯ ಲಭಿಸಿದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಸ್ವಯಂ ಅಥವಾ ಮೇಲಧಿಕಾರಿಯ ಆದೇಶದ ಮೇರೆಗೆ ತನಿಖೆ ಮುಂದುವರೆಸಬಹುದು’ ಎಂದರು.

‘ಬಿ ರಿಪೋರ್ಟ್ ಸಲ್ಲಿಸಿದಾಗ ಮಾತ್ರ ಪ್ರಕರಣ ಮುಕ್ತಾಯವಾಗಿದೆ ಎಂದರ್ಥ. ಮುಂದುವರೆದ ತನಿಖೆಗೆ ನ್ಯಾಯಾಲಯದ ಅನುಮತಿಯ ಅಗತ್ಯವಿರುತ್ತದೆ. ಆದರೆ, ಸಿ ಅಂತಿಮ ವರದಿ ಸಲ್ಲಿಸಿದಾಗ ಅದರ ಅಗತ್ಯವಿಲ್ಲ ಎಂಬುದನ್ನು ಕರ್ನಾಟಕ ಪೋಲೀಸ್‌ ಮ್ಯಾನುಯಲ್ ಸೂಚಿಸುತ್ತದೆ’ ಎಂದು ವಿವರಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯ ಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳು ಏನು ಹೇಳುತ್ತವೆ ಎಂಬ ವರದಿಗಳನ್ನು ಪ್ರಸ್ತುತಪಡಿಸಿ’ ಎಂದು ವಕೀಲ ಸಿ.ಎಚ್‌.ಹನುಮಂತರಾಯ ಅವರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿತು.

ಪ್ರಕರಣವೇನು?: ಮತ್ತೀಕೆರೆಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ಉಸ್ತುವಾರಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬಿ.ಆರ್.ಮುರಳೀಧರ ಅವರು, ಅಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಪರಿವೀಕ್ಷಕ ಹಾಗೂಉಪವಿಭಾಗಾಧಿಕಾರಿ ಕಚೇರಿಯ ಜಾಹೀರಾತು ವಿಭಾಗದ ನೌಕರರಾಗಿದ್ದ ಅಮೃತರಾಜ್‌ ತಮ್ಮ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ಮಾಡಿ ಮೂರು ಹಲ್ಲುಗಳನ್ನು ಮುರಿದು, ಕೊಲೆಯತ್ನ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು.

ಈ ಘಟನೆ ನಡೆದ ಸಂದರ್ಭದಲ್ಲಿ ಅಮೃತರಾಜ್‌ ಅವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ನಿರ್ದೇಶಕರಾಗಿದ್ದರು.

ಎ,ಬಿ,ಸಿ ರಿಪೋರ್ಟ್‌ ಹೇಳುವುದೇನು?

ಯಾವುದೇ ಕ್ರಿಮಿನಲ್ ಪ್ರಕರಣದ ತನಿಖೆಯ ಕೊನೆಯ ಭಾಗವಾಗಿ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ.

* ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದರೆ ಆರೋಪಿಯ ವಿರುದ್ಧ ದೋಷಾರೋಪಣ ವರದಿ (ಎ ಅಂತಿಮ ವರದಿ) ಸಲ್ಲಿಸಲಾಗುತ್ತದೆ.

* ಆರೋಪಿ ವಿರುದ್ಧ ನೀಡಿರುವ ದೂರು ಸುಳ್ಳು ಅಥವಾ ಸೂಕ್ತ ಸಾಕ್ಷಾಧಾರ ಲಭ್ಯವಾಗಿಲ್ಲ ಎಂದಾರೆ ‘ಬಿ’ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ.

* ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಪತ್ತೆ ಸಾಧ್ಯವಾಗದೇ ಇದ್ದಾಗ ‘ಸಿ’ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT