ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಟರಾಯನಪುರ ಠಾಣೆಯ ವ್ಯಾಪ್ತಿಯಲ್ಲಿ ಇಸ್ಲಾಂ ಖಾನ್ ಎಂಬಾತನನ್ನು ಶನಿವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

‘ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಸ್ಲಾಂ ಖಾನ್, ಜೈಲಿಗೂ ಹೋಗಿ ಬಂದಿದ್ದ. ಹಳೇ ವೈಷಮ್ಯದಿಂದ ಎದುರಾಳಿ ಗುಂಪಿನವರು ಆತನನ್ನು ಕೊಲೆ ಮಾಡಿರುವ ಅನುಮಾನವಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಶಾಮಣ್ಣ ಗಾರ್ಡನ್‌ನ ಮಸೀದಿಯೊಂದರ ಬಳಿ ಶನಿವಾರ ರಾತ್ರಿ ಇಸ್ಲಾಂ ಖಾನ್‌ ನಿಂತಿದ್ದ. ಅದೇ ವೇಳೆ ದಾಳಿ ಮಾಡಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಇಸ್ಲಾಂ ಖಾನ್‌ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ’ ಎಂದೂ ಹೇಳಿದರು.

ಅಪರಾಧ ಹಿನ್ನೆಲೆಯುಳ್ಳವ: ‘ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣ ಹಾಗೂ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಇಸ್ಲಾಂ ಖಾನ್ ಆರೋಪಿ ಆಗಿದ್ದ. ಅಪರಾಧ ಹಿನ್ನೆಲೆಯುಳ್ಳ ಆತ, ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಉದ್ಯಮ ನಡೆಸುತ್ತಲೇ ಅಪರಾಧ ಕೃತ್ಯ ಎಸಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಇಸ್ಲಾಂ ಖಾನ್‌ ಹಾಗೂ ಹಲವರ ನಡುವೆ ವೈಷಮ್ಯವಿತ್ತು. ಇದೇ ಕಾರಣಕ್ಕೆ ಆತನ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿ ಸಹೋದರ ದೂರು ನೀಡಿದ್ದಾರೆ’ ಎಂದೂ ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು