ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ನಲ್ಲಿ ಶವ ಸಾಗಿಸುವಾಗ ಅಪಘಾತ; ಬೆಳಕಿಗೆ ಬಂತು ಕೊಲೆ ಪ್ರಕರಣ, ನಾಲ್ವರ ಬಂಧನ

Last Updated 12 ಮೇ 2022, 2:17 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಬೈಕ್‌ಅಪಘಾತದ ತನಿಖೆಯ ವೇಳೆ ಬೆಂಗಳೂರಿನಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ರಹಸ್ಯ ಬಯಲಾಗಿದೆ.

ಬೆಂಗಳೂರಿನ ಶ್ವೇತಾ( 24) ಕೊಲೆಯಾದವರು. ಹಣಕಾಸು ವಿಚಾರವಾಗಿ ಸ್ನೇಹಿತೆ ಶ್ವೇತಾರನ್ನು ಕೊಲೆಗೈದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರ ನಿವಾಸಿ ದುರ್ಗಾ, ಆಕೆ ಪತಿ ರಘು, ಸ್ನೇಹಿತರಾದ ನಾಗರಾಜು ಹಾಗೂ ವಿನೋದ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಭಿ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆ ನಡೆದದ್ದು ಎಲ್ಲಿ?: ಶ್ವೇತಾ ಹಾಗೂ ದುರ್ಗಾ ನಡುವೆ ಹಣಕಾಸಿನ ವಿಚಾರವಾಗಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಈ ವೇಳೆ ದುರ್ಗಾ ಬಡಿಗೆಯಿಂದ ಶ್ವೇತಾಳ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದುರ್ಗಾ ತನ್ನ ಪತಿ ರಘುಗೆ ಈ ವಿಚಾರ ತಿಳಿಸಿದ್ದು, ಆತ ತನ್ನ ಸ್ನೇಹಿತ ಅಭಿ ಎಂಬಾತನನ್ನು ಸ್ಥಳಕ್ಕೆ ಕರೆಯಿಸಿದ್ದ. ಅಭಿ ಉಳಿದ ಇಬ್ಬರು ಆರೋಪಿಗಳನ್ನು ಕರೆಯಿಸಿಕೊಂಡು ಶವವನ್ನು ಚನ್ನಪಟ್ಟಣದ ಕೆರೆ ಇಲ್ಲವೇ ಶ್ರೀರಂಗಪಟ್ಟಣದ ಕಾವೇರಿ ನದಿ ಸೇತುವೆ ಕೆಳಗೆ ಎಸೆಯಲು ಯೋಜನೆ ರೂಪಿಸಿದ್ದರು.

ಅದರಂತೆ ಎರಡು ಬೈಕ್‌ಗಳಲ್ಲಿದುರ್ಗಾ, ರಘು ಹಾಗೂ ಅಭಿ ಹೊರಟರೆ ಮತ್ತೊಂದು ಬೈಕ್‌ನಲ್ಲಿ ಶ್ವೇತಾಳ ಶವದೊಂದಿಗೆ ನಾಗರಾಜು ಹಾಗೂ ವಿನೋದ್ ಹೊರಟಿದ್ದರು. ಈ ಇಬ್ಬರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬರುವಾಗ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಉಬ್ಬಿನಲ್ಲಿ ಬೈಕ್‌ ಸ್ಕಿಡ್‌ ಆಗಿದೆ.

ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಬೈಕ್‌ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಗಳು ನಂಬಿಸುವ ನಾಟಕವಾಡಿದ್ದಾರೆ. ಅನುಮಾನಗೊಂಡ ಪೊಲೀಸರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

‘ಆಕೆ ಸತ್ತು ಅದಾಗಲೇ ಅರ್ಧ ದಿನ ಕಳೆದಿದೆ’ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯ ಶವವನ್ನು ತಾವೇ ಬೈಕ್‌ನಲ್ಲಿ ಸಾಗಿಸುತ್ತಿದ್ದುದಾಗಿ ಬಾಯಿಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಚನ್ನಪಟ್ಟಣದಲ್ಲಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT