ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನ ‘ಹೊಸ ಶತ್ರು’ ಬಿಡಿಎಸ್‌ ಆಂದೋಲನ

ಇದು ಯುದ್ಧ ಟ್ಯಾಂಕ್‌, ಕ್ಷಿಪಣಿ ಬಳಕೆಯಾಗುವ ಸಮರವಲ್ಲ. ಆದರೂ ಯಹೂದಿ ಪ್ರಭುತ್ವಕ್ಕೆ ಅಪಾಯ ಒಡ್ಡುತ್ತಿದೆ
Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಇಸ್ರೇಲ್ ಒಂದು ರಾಷ್ಟ್ರವಾಗಿ 1948ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹೆಚ್ಚುಕಮ್ಮಿ ಹತ್ತು ವರ್ಷಗಳಿಗೊಮ್ಮೆ ಯುದ್ಧ ಮಾಡುತ್ತಲೇ ಬಂದಿದೆ. ಇದೀಗ, ಮೂಲಭೂತವಾಗಿ ನಮ್ಮ ಅಸ್ತಿತ್ವವನ್ನೇ ನಿರಾಕರಿಸುವ ನೆರೆಹೊರೆಯವರ ಭೌತಿಕ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಹೊಸ ಶತ್ರುವಿನ ವಿರುದ್ಧ ಸೆಣಸಬೇಕಾದ ಪರಿಸ್ಥಿತಿ ಸೃಷ್ಟಿಸಲಾಗಿದೆ.

ಇದು ಯುದ್ಧ ಟ್ಯಾಂಕುಗಳು, ಕ್ಷಿಪಣಿಗಳು ಬಳಕೆಯಾಗುವ ಸಮರವಲ್ಲ. ಆದರೂ ಯಹೂದಿ ಪ್ರಭುತ್ವಕ್ಕೆ ಇದು ಗಂಭೀರ ಅಪಾಯವನ್ನು ಒಡ್ಡುತ್ತಿದೆ. ಇದರ ವಿರುದ್ಧದ ಪ್ರತಿದಾಳಿಗೆ ನಾವು ಹಿಂಜರಿಯುತ್ತಿಲ್ಲ ಎಂಬುದೂ ಸ್ಪಷ್ಟ.

ಪ್ಯಾಲೆಸ್ಟೀನಿನ ಸುಮಾರು 170 ಸಂಘಟನೆಗಳ ಕರೆಯ ಮೇರೆಗೆ, ಇಸ್ರೇಲ್ ವಿರುದ್ಧ 2005ರಲ್ಲಿ ಅಧಿಕೃತವಾಗಿ ಆರಂಭವಾದ ಬಹಿಷ್ಕಾರ, ಹೂಡಿಕೆ ವಾಪಸಾತಿ ಮತ್ತು ನಿರ್ಬಂಧ ವಿಧಿಸುವಿಕೆಯ ಆಂದೋಲನ (boycott, divestment and sanctions movement) ಇದಾಗಿದೆ. ಹಾಗೆ ನೋಡಿದರೆ ಈ ‘ಬಿಡಿಎಸ್ ಸಮರ' ಎಂಬುದು ಯಹೂದಿ ಜನರನ್ನು ಕ್ರೂರಿಗಳು ಎಂಬಂತೆ ಬಿಂಬಿಸುವ ಹಾಗೂ ಅವರನ್ನು ನಿರ್ಮೂಲಗೊಳಿಸುವ ಬಹು ಹಳೆಯ ಕಾರ್ಯತಂತ್ರಕ್ಕೆ ನೀಡಲಾಗಿರುವ ಹೊಸ ಹೆಸರಾಗಿದೆ ಅಷ್ಟೇ. ಮಾನವ ಹಕ್ಕುಗಳ ಹೆಸರಿನಲ್ಲಿ ಇದನ್ನು ನಡೆಸಲಾಗುತ್ತಿದೆ. ಜೊತೆಗೆ ಇತಿಹಾಸ ತಿರುಚುವ ಮೂಲಕ, ಮಧ್ಯಪ್ರಾಚ್ಯದಲ್ಲಿ ಯಹೂದ್ಯರಿಗೆ ಅಸ್ತಿತ್ವದ ಹಕ್ಕು ಇಲ್ಲ ಎಂಬುದನ್ನು ಈ ಆಂದೋಲನ ಪ್ರತಿಪಾದಿಸುತ್ತಿದೆ.

ಇಸ್ರೇಲಿ ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಬಿಡಿಎಸ್ ನಾಯಕರು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ರಾಜಕೀಯ, ಆರ್ಥಿಕ ಮತ್ತು ಕಾನೂನು ಕದನ ಸಾರುತ್ತಾರೆ. ಕಾಲೇಜು ಕ್ಯಾಂಪಸ್‍ಗಳು, ಕಾರ್ಮಿಕ ಸಂಘಟನೆಗಳು ಮತ್ತು ಚರ್ಚ್‍ಗಳಲ್ಲಿ ಕೂಡ ಇಂತಹ ಕದನಗಳನ್ನು ಸಾರಲಾಗುತ್ತದೆ. ಆದರೆ, ಶಾಂತಿ ಸ್ಥಾಪನೆಯೇ ತಮ್ಮ ಪ್ರಮುಖ ಆಸಕ್ತಿಯಾಗಿದ್ದು, ಇದಕ್ಕೆ ಪೂರಕವಾಗಿ ಇಸ್ರೇಲಿ ನೀತಿಗಳನ್ನಷ್ಟೇ ತಾವು ಟೀಕಿಸುವುದಾಗಿಯೂ ಅವರು ಹೇಳಿಕೊಳ್ಳುತ್ತಾರೆ.

ಆದರೆ ಆ ಸಮರ ಆಂದೋಲನದ ಸ್ಥಾಪಕರಲ್ಲಿ ಒಬ್ಬರಾದ ಒಮರ್ ಬರ್ಗೌತಿ ಅವರು ಚಳವಳಿಯ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ‘ನಿಶ್ಚಿತವಾಗಿ, ಅತ್ಯಂತ ಖಡಾಖಂಡಿತವಾಗಿ, ಪ್ಯಾಲೆಸ್ಟೀನಿನ ಯಾವುದೇ ಭೂಭಾಗದಲ್ಲಿ ನಾವು ಯಹೂದಿ ಪ್ರಭುತ್ವದ ಇರುವಿಕೆಯನ್ನು ವಿರೋಧಿಸುತ್ತೇವೆ. ತನ್ನ ಸ್ವಾಭಿಮಾನವನ್ನು ಅಡವು ಇಟ್ಟಿರದ ಯಾವುದೇ ವೈಚಾರಿಕ ಪ್ಯಾಲೆಸ್ಟೀನಿ ಪ್ರಜೆ ಕೂಡ ಪ್ಯಾಲೆಸ್ಟೀನಿನಲ್ಲಿ ಯಹೂದಿ ಪ್ರಭುತ್ವವನ್ನು ಒಪ್ಪಲಾರ' ಎಂದು ಅವರು ಗುಡುಗಿದ್ದಾರೆ. ಅಂದರೆ, ‘ಇಸ್ರೇಲಿ ನೀತಿಯಲ್ಲಿ ಬದಲಾವಣೆ ತರುವುದು ನಮ್ಮ ಗುರಿಯಲ್ಲ; ಬದಲಿಗೆ ಇಸ್ರೇಲಿ ರಾಷ್ಟ್ರದ ನಿರ್ಮೂಲನೆಯೇ ನಮ್ಮ ಗುರಿ’ ಎಂಬುದನ್ನು ಯಾವ ಮುಚ್ಚುಮರೆಯೂ ಇಲ್ಲದೆ ಬಿಡಿಎಸ್ ನಾಯಕರು ಸ್ಪಷ್ಟಪಡಿಸುತ್ತಿದ್ದಾರೆ. ಯಾವುದೇ ಇನ್ನಿತರ ಪ್ರಜಾತಾಂತ್ರಿಕ ರಾಷ್ಟ್ರದಂತೆ ಇಸ್ರೇಲ್‍ಗೆ ಕೂಡ ತನ್ನ ಪ್ರಜೆಗಳ ರಕ್ಷಣೆಯೇ ಮೊತ್ತಮೊದಲ ಆದ್ಯತೆಯ ವಿಷಯವಾಗಿದೆ. ನಮ್ಮ ವಿನಾಶ ಬಯಸುವವರಿಗೆ ನಮ್ಮ ಭೂಪ್ರದೇಶ ಪ್ರವೇಶ ನಿಷೇಧಿಸುವುದು ಅನಿವಾರ್ಯವಾಗಿ ತೆಗೆದುಕೊಳ್ಳಲೇಬೇಕಾದ ಕ್ರಮವಾಗಿದೆ. ತಮ್ಮ ಭೂಪ್ರದೇಶಕ್ಕೆ ಯಾರು ಪ್ರವೇಶಿಸಬಹುದು ಅಥವಾ ಯಾರು ಪ್ರವೇಶಿಸಬಾರದು ಎಂಬ ನಿರ್ಧಾರವನ್ನು ಎಲ್ಲಾ ಸಾರ್ವಭೌಮ ರಾಷ್ಟ್ರಗಳೂ ತಳೆಯುತ್ತವೆ.

ಇದೇ ರೀತಿಯಲ್ಲಿ ಇಸ್ರೇಲ್ ಕೂಡ ಕಳೆದ ಮಾರ್ಚ್‌ನಲ್ಲಿ, ಬಿಡಿಎಸ್ ಆಂದೋಲನದಲ್ಲಿ ಸಕ್ರಿಯರಾಗಿರುವವರು ದೇಶ ಪ್ರವೇಶಿಸದಂತೆ ತಡೆಯುವ ಅಧಿಕಾರವನ್ನು ವಲಸೆ ಅಧಿಕಾರಿಗಳಿಗೆ ನೀಡಿ ಶಾಸನ ಜಾರಿಗೊಳಿಸಿತು. ಈ ಚಳವಳಿಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳ ಹೆಸರುಗಳ ಪಟ್ಟಿಯನ್ನು ಇಸ್ರೇಲ್ ಪ್ರಕಟಿಸಿತು. ಐರ್ಲೆಂಡ್ ಪ್ಯಾಲೆಸ್ಟೀನ್ ಸಾಲಿಡಾರಿಟಿ ಕ್ಯಾಂಪೇನ್, ಬಿಡಿಎಸ್ ಇಟಲಿ, ಜೂಯಿಷ್ ವಾಯ್ಸ್ ಫಾರ್ ಪೀಸ್ ಸೇರಿದಂತೆ ಹಲವು ಸಂಘಟನೆಗಳು ಇದರಲ್ಲಿ ಸೇರಿವೆ.

ಈ ಹೊಸ ನೀತಿಯ ಹಿಂದಿನ ತರ್ಕ ತುಂಬಾ ಸದೃಢವಾಗಿದೆ: ‘ಶತ್ರು ಸೈನಿಕರನ್ನು ನಮ್ಮ ಭೂಪ್ರದೇಶಕ್ಕೆ ನಾವು ಸ್ವಾಗತಿಸುವುದಿಲ್ಲ. ನೀವು ನಮ್ಮ ವಿನಾಶಕ್ಕೆ ಪೂರಕವಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವಿರಾದರೆ ನಮ್ಮ ನಾಡಿಗೆ ಬರಬೇಡಿ' ಎಂಬುದೇ ಈ ನೀತಿಯಾಗಿದೆ. ಇದು ಕೆಲವು ಸಂಘಟನೆಗಳ ಮೇಲೆ ಸಂಪೂರ್ಣ ನಿಷೇಧ ಹೇರುತ್ತದೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಇದು ಸುಳ್ಳುಗಳನ್ನು ಹಬ್ಬಿಸುತ್ತಿರುವ ಬಿಡಿಎಸ್‌ ಚಳವಳಿಯ ಮತ್ತೊಂದು ಪ್ರಕರಣವಾಗಿದೆ ಅಷ್ಟೇ. ಈ ಕಾನೂನು, ವ್ಯಕ್ತಿಗಳ ಪ್ರವೇಶ ನಿಷೇಧಿಸುವ ಆಯ್ಕೆಯನ್ನು ವಲಸೆ ಅಧಿಕಾರಿಗಳಿಗೆ ನೀಡುತ್ತದೆಯೇ ವಿನಾ ಅವರು ಕಡ್ಡಾಯವಾಗಿ ಹಾಗೇ ಮಾಡಬೇಕೆಂದು ಹೇಳುವುದಿಲ್ಲ.

ನಾನು ಇದನ್ನು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟಪಡಿಸುತ್ತೇನೆ: ಇಸ್ರೇಲ್ ವಿಕಸನಶೀಲ ಪ್ರಜಾತಾಂತ್ರಿಕ ರಾಷ್ಟ್ರವಾಗಿದ್ದು, ನಮ್ಮ ನೀತಿಗಳೊಂದಿಗೆ ಭಿನ್ನಮತ ಹೊಂದಿರುವವರನ್ನು ನಾವು ಸ್ವಾಗತಿಸುತ್ತೇವೆ. ನೀವು ಪಶ್ಚಿಮ ದಂಡೆಯಲ್ಲಿ ಜನವಾಸ್ತವ್ಯದ ನೆಲೆಗಳನ್ನು ವಿರೋಧಿಸಿದರೆ ಖುದ್ದು ಅಲ್ಲಿಗೆ ತೆರಳಿ ಪ್ರತ್ಯಕ್ಷ ಮಾಹಿತಿ ಪಡೆಯಲು ನಿಮ್ಮನ್ನು ಸ್ವಾಗತಿಸುತ್ತೇನೆ.


ಆದರೆ ಬಿಡಿಎಸ್ ಆಂದೋಲನವು ನಿರ್ದಿಷ್ಟವಾಗಿ ನೀತಿಗಳನ್ನಾಗಲೀ ಅಥವಾ ಈಗಿನ ಇಸ್ರೇಲಿ ಸರ್ಕಾರವನ್ನಾಗಲೀ ವಿರೋಧಿಸುವುದಿಲ್ಲ. ಇಸ್ರೇಲನ್ನು ಭೂಪಟದಿಂದ ನಿರ್ಮೂಲನೆ ಮಾಡುವುದೇ ಅದರ ಗುರಿಯಾಗಿದೆ. ‘ಸುಮಾರು 70 ವರ್ಷಗಳಿಂದ’ ನಡೆಯುತ್ತಿರುವ ಹೋರಾಟವನ್ನು ತನ್ನ ವೆಬ್‍ಸೈಟ್‌ನಲ್ಲಿ ಅದು ಉಲ್ಲೇಖಿಸಿದೆ. ಈ ಅವಧಿಯ ಉಲ್ಲೇಖವು ಇಸ್ರೇಲ್ ಒಂದು ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ಕಾಲಘಟ್ಟಕ್ಕೆ ನಮ್ಮನ್ನು ತೆಗೆದುಕೊಂಡು ಹೋಗುತ್ತದೆಯೇ ವಿನಾ 1967ರ ಆರು ದಿನಗಳ ಯುದ್ಧದಿಂದ ಉದ್ಭವಿಸಿದ ಗಡಿ ರೇಖೆಗಳ ಕುರಿತ ನಮ್ಮ ನೀತಿ ನಿರೂಪಣೆಗಳ ಬಗೆಗಿನ ಚರ್ಚೆಯ ಕಡೆಗೇನೂ ಕೊಂಡೊಯ್ಯುವುದಿಲ್ಲ. ಇವೆಲ್ಲವನ್ನೂ ಅವಲೋಕಿಸಿ ಸುಲಭವಾಗಿ ಈ ನಿರ್ಧಾರಕ್ಕೆ ಬರಬಹುದು: ಈ ಆಂದೋಲನವು ಪಶ್ಚಿಮ ದಂಡೆಯ ಭವಿತವ್ಯಕ್ಕಾಗಿ ಇರುವಂಥದ್ದಲ್ಲ. ಅದು ಟೆಲ್‌ ಅವೀವ್‌ ಮತ್ತು ಹೈಫಾಗಾಗಿ ಇರುವಂಥದ್ದು. ನಮ್ಮ ವಿನಾಶ ಹೊರತುಪಡಿಸಿದರೆ ಬಿಡಿಎಸ್ ನಾಯಕರ ಗುರಿ ಬೇರೆಯದ್ದಾಗಿರಲು ಸಾಧ್ಯವಿಲ್ಲ.

ಈ ಚಳವಳಿಯಲ್ಲಿರುವ ನಾಯಕರೇ ತಮ್ಮ ಗುರಿ ಏನೆಂಬುದನ್ನು ಬಹಿರಂಗಪಡಿಸಿಕೊಂಡಿದ್ದಾರೆ ಮತ್ತು ಅವರಲ್ಲಿ ಕೆಲವರು ಇಸ್ರೇಲ್ ವಿನಾಶದ ಗುರಿಯೊಂದಿಗೆ, ಶಿಕ್ಷೆಗೆ ಗುರಿಯಾದ ಭಯೋತ್ಪಾದಕರೊಂದಿಗೆ ಕೂಡ ಕೈಜೋಡಿಸಿದ್ದಾರೆ. ಜೂಯಿಷ್‌ ವಾಯ್ಸ್‌ ಫಾರ್‌ ಪೀಸ್‌ ಅದಕ್ಕೊಂದು ಉದಾಹರಣೆ. ಕಳೆದ ಏಪ್ರಿಲ್‍ನಲ್ಲಿ ಅದು ತನ್ನ ರಾಷ್ಟ್ರೀಯ ಸಭೆಯಲ್ಲಿ ರಸ್ಮಿಯಾ ಓಡೆಹ್‌ ಅವರನ್ನು ವಕ್ತಾರರನ್ನಾಗಿ ನೇಮಿಸಿತ್ತು. ಆದರೆ ಈ ರಸ್ಮಿಯಾ 1969ರಲ್ಲಿ ಮುಗ್ಧ ಇಸ್ರೇಲಿಗಳನ್ನು ಹತ್ಯೆ ಮಾಡಿದಾಕೆ. ಈಕೆ ವಲಸೆ ವಂಚನೆ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಭಯೋತ್ಪಾದಕಿ ಕೂಡ. ಅಷ್ಟಾದರೂ, ‘ಅವರು ನಮ್ಮೊಂದಿಗಿರುವುದು ನಮ್ಮ ಸೌಭಾಗ್ಯ’ ಎಂದು ಈ ಸಂಘಟನೆಯ ಕಾರ್ಯಕಾರಿ ನಿರ್ದೇಶಕರು ಹೇಳಿಕೊಂಡಿದ್ದಾರೆ.

ಬಿಡಿಎಸ್ ಕಾರ್ಯಕರ್ತರು ‘ಮಾನವ ಹಕ್ಕುಗಳ’ ಮುಖವಾಡ ಧರಿಸಿ ನೈಜತೆ ಮರೆಮಾಚಲು ಯತ್ನಿಸಿದಷ್ಟೂ ನೈಜತೆ ಏನೆಂಬುದು ಹೆಚ್ಚು ಹೆಚ್ಚು ಜನರಿಗೆ ಮನದಟ್ಟಾಗುತ್ತಿದೆ: ಈ ಆಂದೋಲನವು ಇಸ್ರೇಲಿ ವಿರೋಧಿ ಹಾಗೂ ಶಾಂತಿ ವಿರೋಧಿ. ಅಮೆರಿಕದ ಹಲವು ಸಂಸ್ಥಾನಗಳು ಬಿಡಿಎಸ್ ವಿರೋಧಿ ಕಾನೂನುಗಳು ಮತ್ತು ನಿರ್ಣಯಗಳನ್ನು ಜಾರಿಗೊಳಿಸಿವೆ. ಸ್ಪೇನ್, ಜರ್ಮನಿ ಮತ್ತಿತರ ಯುರೋಪ್ ರಾಷ್ಟ್ರಗಳ ಕೆಲವು ನಗರಗಳು ಕೂಡ ಈ ಚಳವಳಿಗೆ ವಿರೋಧ ವ್ಯಕ್ತಪಡಿಸಿವೆ. ಬಿಡಿಎಸ್ ಚಳವಳಿ ಬೆಂಬಲಿಸುವ ಕಂಪನಿಗಳ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಈ ನಗರಗಳು ನಿರಾಕರಿಸುತ್ತಿವೆ. ಮತ್ತೆ ಕೆಲವು ನಗರಗಳು ಈ ಚಳವಳಿಯಲ್ಲಿ ಭಾಗಿಯಾಗಿರುವ ಯುರೋಪಿಯನ್ ಬ್ಯಾಂಕುಗಳ ಜತೆ ವಹಿವಾಟು ಸ್ಥಗಿತಗೊಳಿಸಿವೆ. ಬಿಡಿಎಸ್ ವಿರೋಧಿಸುವುದೆಂದರೆ ಶಾಂತಿಯ ಪರ ನಿಲ್ಲುವುದು ಎಂದರ್ಥ ಎಂಬುದು ಅವುಗಳಿಗೆ ಈಗ ಮನವರಿಕೆಯಾಗಿದೆ.

ನಮಗೆ ಆಘಾತ ಎಸಗಲು ಹವಣಿಸುವವರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ತಳೆದಿರುವ ನಿರ್ಧಾರದ ಸಂದೇಶ ಸ್ಪಷ್ಟವಾಗಿದೆ: ನಮ್ಮ ವಿನಾಶವನ್ನೇ ಗುರಿಯಾಗಿಸಿಕೊಂಡಿರುವವರಿಗೆ ನಮ್ಮ ನೆಲಕ್ಕೆ ಬನ್ನಿ ಎಂದು ನಾವು ಸ್ವಾಗತ ಕೋರುವುದಿಲ್ಲ. ನಮ್ಮ ಪರಿಸ್ಥಿತಿಯಲ್ಲಿರುವ ಯಾವುದೇ ರಾಷ್ಟ್ರ ಕೂಡ ನಮ್ಮಂತೆಯೇ ನಿರ್ಧಾರ ತಳೆಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

(ಲೇಖಕ ಇಸ್ರೇಲ್ ಸರ್ಕಾರದ ಶಿಕ್ಷಣ ಮತ್ತು ಸಮುದಾಯ ವ್ಯವಹಾರಗಳ ಸಚಿವ ಹಾಗೂ ರಾಷ್ಟ್ರದ ರಕ್ಷಣಾ
ಸಂಪುಟ ಸಮಿತಿಯ ಸದಸ್ಯ)

ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT