ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ಹೈಕೋರ್ಟ್‌ಗೆ ವರ್ಗಾಯಿಸಿ: ಪ್ರಗತಿಪರ ಚಿಂತಕರಿಂದ ಒತ್ತಾಯ

ಲೈಂಗಿಕ ಕಿರುಕುಳ ಪ್ರಕರಣ
Last Updated 2 ಸೆಪ್ಟೆಂಬರ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ‍್ರಕರಣದ ಸಮಗ್ರ ತನಿಖೆ ಹಾಗೂ ವಿಚಾರಣೆಯನ್ನು ನ್ಯಾಯ ಯುತವಾಗಿ ನಡೆಸಲು ಹೈಕೋರ್ಟ್‌ಗೆ ವರ್ಗಾಯಿಸುವಂತೆ ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಅಭಿಯಾನ ನಡೆದಿದೆ.

ಆರೋಪಿಗಳು ಪ್ರಭಾವಶಾಲಿಯಾಗಿರುವುದರಿಂದ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸ್ ವ್ಯಾಪ್ತಿಯಲ್ಲಿ ನಡೆಸದೆ ನ್ಯಾಯಾಂಗದ ಸಮ್ಮುಖದಲ್ಲಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಜತೆಗೆ, ಪ್ರತ್ಯೇಕ ವಿಶೇಷ ತನಿಖಾ ಸಮಿತಿ ರಚಿಸಬೇಕು ಮತ್ತು ಈ ಪ್ರಕರಣವನ್ನು ನೆರೆಯ ಕೇರಳ, ತೆಲಂಗಾಣ ಅಥವಾ ತಮಿಳುನಾಡು ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ.

ಮುರುಘಾಮಠದ ಪೀಠಾಧಿಕಾರಿ ಮತ್ತು ಅವರ ಸಹಚರರು ತಮ್ಮದೇ ವಸತಿ ನಿಲಯದ ಬಾಲಕಿಯರನ್ನು ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಪ್ರಕರಣವು ಅತ್ಯಂತ ಅಮಾನವೀಯ ಮತ್ತು ಕ್ರೂರವಾಗಿದ್ದು, ನಾಗರಿಕ ಸಮಾಜವನ್ನು ಆಘಾತಕ್ಕೀಡುಮಾಡಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದೌರ್ಜನ್ಯ ತಡೆ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿದ್ದರೂ ಆರೋಪಿಗಳನ್ನು ತಕ್ಷಣವೇ ಬಂಧಿಸಲಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು. ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತ ಬಾಲಕಿಯರಿಗೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರಿ ವ್ಯವಸ್ಥೆಯು ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟ ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ಮತ್ತು ನ್ಯಾಯದಾನ ಪ್ರಕ್ರಿಯೆ ಕಡ್ಡಾಯವಾಗಿ ಒಂದು ವಾರದೊಳಗೆ ಮುಗಿಯುವಂತೆ ಕ್ರಮಕೈಗೊಳ್ಳಬೇಕು.ಎಲ್ಲ ಸಂತ್ರಸ್ತ ಬಾಲಕಿಯರು ಮತ್ತು ಕುಟುಂಬಕ್ಕೆ ಭದ್ರತೆ ಮತ್ತು ತಕ್ಷಣದ ಪರಿಹಾರ ಒದಗಿಸಬೇಕು. ಜತೆಗೆ, ಅವರಿಗೆ ನಿರಂತರವಾಗಿ ತಜ್ಞರ ಮೂಲಕ ಆಪ್ತ ಸಲಹೆಯನ್ನೂ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ

ಮಠದ ವಸತಿ ನಿಲಯಗಳನ್ನು ತಕ್ಷಣವೇ ಮಟ್ಟುಗೋಲು ಹಾಕಿ ಕೊಂಡು, ಅಲ್ಲಿನ ಮಕ್ಕಳ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಂಡು ಸುರಕ್ಷಿತ ವಸತಿಯುತ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದುಕೋರಿದ್ದಾರೆ.

ರೂಪ ಹಾಸನ, ಶ್ರೀಪಾದ ಭಟ್ ಮತ್ತಿತರರು ಈ ಬಗ್ಗೆ ಅಭಿಯಾನ ಕೈಗೊಂಡಿದ್ದಾರೆ.

‘ನಿಷ್ಪಕ್ಷಪಾತ ತನಿಖೆ ನಡೆಸಿ’
ಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಸ್ತಿ ಮಾರಾಟ: ಮುರುಘಾಶ್ರೀಗೆ ವಾರಂಟ್‌
ಬೆಂಗಳೂರು: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಶಿವಮೂರ್ತಿ ಮುರಘಾ ಶರಣರು ಮಠದ ಹೆಸರಿನಲ್ಲಿ, ‘ಅನ್‌ರಿಜಿಸ್ಟರ್ಡ್‌ ಸೋಲ್ಡ್‌ ಟ್ರಸ್ಟ್‌ ಡೀಡ್‌’ ಇಟ್ಟುಕೊಂಡು ಭಕ್ತರಿಗೆ ನಂಬಿಕೆ ದ್ರೋಹ ಮಾಡಿ ಸ್ಥಿರಾಸ್ತಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು 4ನೇ ಎಸಿಎಂಎಂ ನ್ಯಾಯಾಲಯ ಜಾಮೀನುರಹಿತ ಬಂಧನದ ವಾರಂಟ್‌ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆಮಠದ ಭಕ್ತ ತುಮಕೂರಿನ ಪಿ.ಎಸ್.ಪ್ರಕಾಶ್‌ ಅಲಿಯಾಸ್ ಪಂಚಿ ಸಲ್ಲಿಸಿದ್ದ ಅರ್ಜಿಯನ್ನು 4ನೇ ಹೆಚ್ಚುವರಿ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಶುಕ್ರವಾರ ವಿಚಾರಣೆ ನಡೆಸಿ, ಆರೋಪಿ ಮುರುಘಾ ಶರಣರಿಗೆ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿ ಆದೇಶಿಸಿದರು.

‘ಬೃಹನ್ಮಠದ ಅಧೀನಕ್ಕೆ ಒಳಪಟ್ಟ ಬೆಂಗಳೂರಿನ ಗಾಂಧಿನಗರದಲ್ಲಿರುವ ತಿಪ್ಪಶೆಟ್ಟಿ ಮಠಕ್ಕೆ ಸೇರಿದ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದ ಸರ್ವೇ ನಂಬರ್ 34ರಲ್ಲಿ 7 ಎಕರೆ 18 ಗುಂಟೆ ಜಮೀನನ್ನು ಶರಣರು ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿ ಪಂಚಿ, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಶರಣರು ಆಸ್ತಿ ಮಾರಾಟ ಮಾಡುವ ಮುನ್ನ ಚಾರಿಟಿ ಕಮಿಷನ್‌ನಿಂದಾಗಲೀ ಅಥವಾ ಸೆಷನ್ಸ್‌ ನ್ಯಾಯಾಲಯದಿಂದಾಗಲೀ ಅನುಮತಿ ಪಡೆದಿರುವುದಿಲ್ಲ. ಮಾರಾಟಕ್ಕೂ ಮುನ್ನ ಯಾವುದೇ ರೀತಿಯ ಸಾರ್ವಜನಿಕ ಪತ್ರಿಕಾ ಪ್ರಕಟಣೆ ಹೊರಡಿಸಿರುವುದಿಲ್ಲ. ಸ್ಥಿರಾಸ್ತಿ ಮಾರಾಟದಿಂದ ಮಠಕ್ಕೆ ₹ 7 ಕೋಟಿ ನಷ್ಟ ಉಂಟಾಗಿರುತ್ತದೆ ಮತ್ತು ನಂಬಿಕೆ ದ್ರೋಹವಾಗಿರುತ್ತದೆ. ಆದ್ದರಿಂದ, ಆರೋಪಿಗಳಾದ ಶಿವಮೂರ್ತಿ ಮುರುಘಾ ಶರಣರು ಮತ್ತು ಆನಂದ್ ಕುಮಾರ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ. ಪ್ರಕರಣದ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT