‘ಸಂಗೀತದೊಂದಿಗೆ ಸಂಸ್ಕಾರವೂ ಒಲಿಯಲಿದೆ’

ಬೊಮ್ಮನಹಳ್ಳಿ: ‘ಸಂಗೀತ ಸಾಧನೆಗೆ ಜಾತಿ, ಧರ್ಮ, ಗಡಿ, ಭಾಷೆ ಮೀರಿದ ಅನುಭೂತಿ ಮುಖ್ಯ. ಪ್ರಚಾರ ಪ್ರಿಯ ತೆಯ ಗೀಳು ಸುಳಿಯದಂತೆ ಎಚ್ಚರ ವಹಿ ಸುತ್ತಲೇ, ಸತತ ಪರಿಶ್ರಮ ಹಾಕಿದ್ದಲ್ಲಿ ಮಾತ್ರವೇ ಸಂಗೀತದ ಸಾಕ್ಷಾತ್ಕಾರ ಆಗುತ್ತದೆ. ಅಂತಹ ಸಂಗೀತದೊಂದಿಗೆ ಸಂಸ್ಕಾರವೂ ಒಲಿಯುತ್ತದೆ’ ಎಂದು ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅಭಿಪ್ರಾಯಪಟ್ಟರು.
ವಿಎಲ್ಎನ್ ನಿರ್ಮಾಣ್ ಪುರಂದರ ಪ್ರತಿಷ್ಠಾನವು ಬನ್ನೇರುಘಟ್ಟ ರಸ್ತೆ ನಿಸರ್ಗ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ 2021ರ ವಿಎಲ್ಎನ್ ನಿರ್ಮಾಣ್ ಪುರಂದರ ಸಂಗೀತರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿ ಅಂತಹವರು ಸಂಗೀತ ಸಂಸ್ಕಾರದ ಧಾರೆಯನ್ನು ರಾಜ್ಯ ದುದ್ದಕ್ಕೂ ಹರಿಸಿದ್ದಾರೆ. ಅಂತಹ ಮಹಾ ಗುರುಗಳ ಶಿಷ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ’ ಎಂದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ‘ಯಾವುದೇ ಕ್ಷೇತ್ರದಲ್ಲಿ ಮನುಷ್ಯ ಪ್ರಯತ್ನದ ಜತೆಗೆ ದೈವೀಕೃಪೆ ಇದ್ದಾಗ ಮಾತ್ರವೇ ಸಾಧನೆ ಸಾಧ್ಯ’ ಎಂದರು.
ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಸಂಪಾದಿಸಿರುವ ‘ಪುರಂದರ ಮಹಾಸಂಪುಟ’ ಲೋಕಾ ರ್ಪಣೆ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ, ವಿದ್ವಾನ್ ವಿದ್ಯಾಭೂಷಣ್, ನಿರ್ಮಾಣ್ ಶೆಲ್ಟರ್ಸ್‌ನ ನಿರ್ದೇಶಕ ಎಸ್.ಎಂ.ಪಾಟೀಲ ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಎಂ.ವೆಂಕಟೇಶ್ ಕುಮಾರ್ ದಾಸವಾಣಿ ಕಛೇರಿ ನಡೆಸಿಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.