ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದ ಊರಿಗೂ ಕೊಡದಲ್ಲಿ ನೀರು ಕೊಂಡೊಯ್ಯುತ್ತಿದ್ದರು: ನಿಜಗುಣ ರಾಜಗುರು

ಪಂ.ಬಸವರಾಜ ರಾಜಗುರು ಅವರ ಕಂಠ ಶುದ್ಧಿ ಕಾಳಜಿ ವಿವರಿಸಿದ ಪುತ್ರ
Last Updated 21 ಡಿಸೆಂಬರ್ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂ. ಬಸವರಾಜ ರಾಜಗುರು ಅವರು ತಮ್ಮ ಕಂಠವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕಠಿಣ ತಪಸ್ಸು ಮಾಡುತ್ತಿದ್ದರು. ಸಂಗೀತ ಕಛೇರಿ ಸಂಬಂಧ ದೂರದ ಊರುಗಳಿಗೆ ತೆರಳುವಾಗ ಎರಡು ಮೂರು ಕೊಡಗಳಲ್ಲಿ ನೀರನ್ನು ಕೊಂಡೊಯ್ಯುತ್ತಿದ್ದರು’ ಎಂದು ಅವರ ಪುತ್ರ ನಿಜಗುಣ ರಾಜಗುರು ವರು ತಂದೆಯ ಸಾಧನೆಯ ಹಿಂದಿನ ಪರಿಶ್ರಮವನ್ನು ನೆನಪಿಸಿಕೊಂಡರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಪಂ. ಬಸವರಾಜ ರಾಜಗುರು ಅವರ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನವದೆಹಲಿ ಸೇರಿದಂತೆ ವಿವಿಧೆಡೆ ತೆರಳುತ್ತಿದ್ದ ತಂದೆ, ಸ್ವರ ಕೆಡುತ್ತದೆ ಎಂಬ ಕಾರಣಕ್ಕೆ ಹೊರಗಡೆ ನೀರನ್ನೂ ಕುಡಿಯುತ್ತಿರಲಿಲ್ಲ.ಜೀವನದುದ್ದಕ್ಕೂ ಅವರು ಧಾರವಾಡದ ನೀರನ್ನೇ ಕುಡಿದರು. ಬಾಲ್ಯದಿಂದಲೇ ಅವರಿಗೆ ಸಂಗೀತದ ಮೇಲೆ ವಿಶೇಷ ಒಲವಿತ್ತು.ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ಪರಿಚಯ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಇತ್ತೀಚಿನ ವರ್ಷಗಳಲ್ಲಿ ಸಂಗೀತ ಕಲಿಯುವವರಿಗೆ ಉತ್ತಮ ಗುರು ಸಿಗುವುದು ಪುಣ್ಯ. ಕಲಿಕೆಯೂ ವಾಣಿಜ್ಯೀಕರಣಗೊಂಡಿದ್ದು, ಎಷ್ಟು ದುಡ್ಡು ಕೊಡುತ್ತಾರೊ ಅಷ್ಟಕ್ಕೇ ಕಲಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಂದೆ ಬಸವರಾಜ ಅವರು ತಮ್ಮ ಗುರುವಿನಲ್ಲಿ ತಂದೆ–ತಾಯಿ ಮತ್ತು ದೇವರನ್ನು ಕಂಡರು. ಅವರಿಗೆ ಸಂಗೀತವೇ ಎಲ್ಲವೂ ಆಗಿತ್ತು. ಅನೇಕ ಕಾರ್ಯಕ್ರಮಗಳಿಗೆ ಅವರ ಜೊತೆಗೆ ತೆರಳಿ,ತಂಬೂರಿ ನುಡಿಸಿದ್ದೆ. ಕಾರಣಾಂತರಗಳಿಂದ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ’ ಎಂದರು.

ಕಾಲದ ಮಿತಿ ದಾಟಿದರು:ಶಿಕ್ಷಣ ತಜ್ಞ ಗುರುರಾಜ ಕರಜಗಿ, ‘ಕೆಲ ವ್ಯಕ್ತಿಗಳು ನಿಧನರಾಗಿ ಹಲವು ವರ್ಷಗಳು ಕಳೆದರೂ ಅವರ ಚಿಂತನೆ ಹಾಗೂ ಕೊಡುಗೆಗಳು ಪ್ರಸ್ತುತವಾಗಿರುತ್ತವೆ. ದಿನಗಳು ಕಳೆದಂತೆ ಅವರ ಪ್ರಸಿದ್ಧಿ ಹೆಚ್ಚುತ್ತಾ ಹೋಗುತ್ತದೆ.ಸ್ವಾಮಿ ವಿವೇಕಾನಂದ ಅವರಿಗೆ ಆಗ ಕೆಲವೇ ಕೆಲವು ಶಿಷ್ಯರು ಇದ್ದರು. ಈಗ ಅವರಿಗೆ ಎಲ್ಲೆಡೆ ಶಿಷ್ಯರು ಇದ್ದಾರೆ.ಯಾರು ಕಾಲದ ಮಿತಿ ದಾಟಿ ಹೋಗುತ್ತಾರೋ ಅವರು ಯಾವಾಗಲೂ ಪ್ರಸ್ತುತ. ಅದೇ ರೀತಿ, ರಾಜಗುರು ಅವರು ಈಗಲೂ ಪ್ರಸ್ತುತ’ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ‘ಕಲೆ ಮತ್ತು ಕಲಾವಿದನಿಗೆ ಸಾವು ಇರುವುದಿಲ್ಲ. ಈ ದೇಶದ ಮೇಲೆ ಹಲವರು ದಾಳಿ ನಡೆಸಿ, ದೇವಸ್ಥಾನ ಹಾಗೂ ವಿವಿಧ ಪಾರಂಪರಿಕ ಕೇಂದ್ರಗಳನ್ನು ನಮ್ಮಿಂದ ದೂರ ಮಾಡಿದರು. ಆದರೆ, ಅವರಿಗೆ ನಮ್ಮ ಶಾಸ್ತ್ರೀಯ ಸಂಗೀತಕ್ಕೆ ಯಾವುದೇ ರೀತಿಯ ಹಾನಿ ಮಾಡಲು ಸಾಧ್ಯವಾಗಲಿಲ್ಲ’ ಎಂದರು.

‘ಸಂಗೀತ ಕ್ಷೇತ್ರದಲ್ಲಿ ಗುರುವೇ ಸರ್ವಸ್ವ’
‘ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿಭೀಮಸೇನ ಜೋಶಿ ಹಾಗೂ ಬಸವರಾಜ ರಾಜಗುರು ಅವರು ಎರಡು ನಕ್ಷತ್ರಗಳು.ಕಲಿಕೆಯ ಅವಕಾಶ ಇರದ ಊರಿನಲ್ಲಿ ಹುಟ್ಟಿದ ರಾಜಗುರು ಅವರು, ಶಿಕ್ಷಣವನ್ನು ಹುಡುಕಿಕೊಂಡು ಹೋಗಿ, ಇತಿಹಾಸ ರಚಿಸಿದರು. ಅವರ ಬಳಿ ಸುಮಾರು 25 ವರ್ಷಗಳ ಕಾಲ ನೆಚ್ಚಿನ ಶಿಷ್ಯನಾಗಿ ಸಂಗೀತ ಕಲಿತೆ.ಸಂಗೀತ ಕ್ಷೇತ್ರದಲ್ಲಿ ಗುರು–ಶಿಷ್ಯ ಪರಂಪರೆ ಅತಿ ಮುಖ್ಯ’ ಎಂದುಸಂಗೀತ ವಿದ್ವಾಂಸ ಹಾಗೂ ಗಾಯಕ ಗಣಪತಿ ಭಟ್ ಹಾಸಣಗಿ ತಿಳಿಸಿದರು.

ಪಂ. ಮುದ್ದು ಮೋಹನ್ ಅವರ ನೇತೃತ್ವದಲ್ಲಿ ಹಿಂದೂಸ್ತಾನಿ ಸಂಗೀತ ಕಚೇರಿ ನಡೆಯಿತು. ಪಂ. ವಿಶ್ವನಾಥ ನಾಕೋಡ್ (ತಬಲ), ಪಂ. ಪಂಚಾಕ್ಷರಯ್ಯ ಹಿರೇಮಠ (ಹಾರ್ಮೋನಿಯಂ), ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ (ಗಾಯನ), ಪಂ. ರವೀಂದ್ರ ಯಾವಗಲ್ (ತಬಲ) ಹಾಗೂ ಪಂ. ಉಮಾಕಾಂತ ಪುರಾಣಿಕ್ ಅವರು (ಹಾರ್ಮೋನಿಯಂ) ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT