ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ತಂಟೆಗೆ ಬಂದರೆ ಹುಷಾರ್

ಜನಜಾಗೃತಿ ಅಭಿಯಾನದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಎಚ್ಚರಿಕೆ
Last Updated 12 ಏಪ್ರಿಲ್ 2018, 6:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಗಾರರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪೊಲೀಸರ ಮೂಲಕ ದಮನ ಮಾಡುವ ಶಕ್ತಿ ಯಾರಿಗೂ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಗುಡುಗಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಅಪಾಯದಲ್ಲಿದೆ ಬಯಲುಸೀಮೆ’ ಕುರಿತ ಸತ್ಯಶೋಧನೆ ಜನಜಾಗೃತಿ ಅಭಿಯಾನದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.  ‘ಇನ್ನು ಮುಂದೆ ನೀರಾವರಿ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಪೊಲೀಸರ ವಿರುದ್ಧ ನಾವು ನ್ಯಾಯಾಲಯಗಳಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣಗಳನ್ನು ಹೂಡುತ್ತೇವೆ’ ಎಂದರು.

‘ಕುಡಿಯಲು ಮತ್ತು ಕೃಷಿಗೆ ನೀರು ಕೇಳುವುದು ಪ್ರತಿಯೊಬ್ಬರ ಮಾನವೀಯ ಹಕ್ಕು. ಆದರೆ ಬಯಲುಸೀಮೆ ನೀರಾವರಿ ಸಮಸ್ಯೆ ಕುರಿತು ಜನಪ್ರತಿನಿಧಿಗಳು ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ನೀರಾವರಿ ಸಚಿವರ ಗಮನಕ್ಕೆ ತರದೇ ಇದ್ದರೆ ಹೇಗೆ? ಪ್ರಶ್ನಿಸುವ ಹೋರಾಟಗಾರರು, ರೈತರನ್ನು ಪೊಲೀಸರು ದರ್ಪ ದಿಂದ ಬಂಧಿಸುವುದು ಪ್ರಜಾಪ್ರ ಭುತ್ವ ವ್ಯವಸ್ಥೆನಾ? ಅಥವಾ ಪಾಳೆಯಗಾರಿ ಕೆಯಾ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಜನರ ಬವಣೆ, ಕಷ್ಟಗಳ ಕುರಿತು ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಮತ್ತು ಶಾಸಕರನ್ನು ಪ್ರಶ್ನೆ ಮಾಡುವುದು ಹೋರಾಟಗಾರರ ಹಕ್ಕು. ಕೆಲವರ ಮಾತು ಕೇಳಿ ಪೊಲೀಸರು ಅದನ್ನು ದಮನ ಮಾಡಲು ಹೊರಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿದಿರಲಿ. ಹೋರಾಟಗಾರರ ಪರವಾಗಿ ಈ ದೇಶದಲ್ಲಿ ವಕೀಲರು, ನ್ಯಾಯಾಲಯಗಳಿವೆ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಯಾಗಿ ನಾನಿದ್ದೇನೆ. ಅವರ ಬೆನ್ನೆಲುಬಾಗಿ ನಾವು ನ್ಯಾಯಾಲಯದಲ್ಲಿ ವಾದ ಮಾಡುತ್ತೇವೆ’ ಎಂದು ಹೇಳಿದರು.

‘ಶಾಸಕ, ಸಚಿವ ಯಾರೇ ಆಗಲಿ ಎಲ್ಲರೂ ಕಾನೂನಿನ ಎದುರು ಸಮಾನರು. ಅದಕ್ಕಿಂತ ದೊಡ್ಡವರು ಯಾರೂ ಇಲ್ಲ. ನಿಮಗೆ ಸಾರ್ವಭೌಮತ್ವ ಕೊಟ್ಟವರ ಹೋರಾಟ ಹತ್ತಿಕ್ಕಲು ಹೋದರೆ ಜನ ದಂಗೆ ಏಳುತ್ತಾರೆ. ಶಾಸಕರನ್ನು ಮೊದಲುಗೊಂಡು ಪ್ರಧಾನಮಂತ್ರಿ ವರೆಗೆ ನಮ್ಮನ್ನು ಆಳುವವರೆಲ್ಲ ಮೊದಲು ಸರಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಥವಾಗದಿ ದ್ದರೆ ನ್ಯಾಯಾಂಗವೋ ಅಥವಾ ವಕೀಲರ ಅಕಾಡೆಮಿಗೆ ಹೋಗಿ ಸಂವಿಧಾನ, ಶಾಸನಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು’ ಎಂದು ಮಾರ್ಮಿಕವಾಗಿ ತಿಳಿಸಿದರು.

‘ಬಯಲುಸೀಮೆ ನೀರಾವರಿ ಬಿಕ್ಕಟ್ಟು’ ವಿಷಯ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ನೋಡಿದವ ರಿಗೆ ಬಯಲು ಸೀಮೆಯ ನೀರಾವರಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಜನಪ್ರತಿನಿಧಿಗಳು ತಮ್ಮ ಸಂವಿಧಾನಬದ್ಧ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮನದಟ್ಟಾ ಗುತ್ತದೆ. ಎರಡೂ ದಶಕಗಳು ಕಳೆದರೂ ಸಣ್ಣ ನೀರಾವರಿ ಯೋಜನೆಯೊಂದನ್ನು ಬಯಲು ಸೀಮೆಗೆ ನೀಡಿಲ್ಲ ಎನ್ನುವುದು ಬಹಳ ಖೇದದ ವಿಚಾರ’ ಎಂದು ಬೇಸರ ವ್ಯಕ್ತಪಡಿಸಿದರು.

ಜವಾಬ್ದಾರಿ ಮರೆತ ಸಂಸದರು

‘ಮಳೆ ಆಶ್ರಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಸುಮಾರು 16 ಯೋಜನೆಗಳಿವೆ. ಆದರೆ ಈವರೆಗೆ ನಮ್ಮ ಸಂಸದರು ಇವುಗಳ ಬಗ್ಗೆ ಚಕಾರ ಎತ್ತಿಲ್ಲ’ ಎಂದು ಆರೋಪಿಸಿದರು.

ರೈತರ ಮೇಲೆ ಒಲುವು ಇಲ್ಲದವರನ್ನು ಚುನಾಯಿಸಿದರೆ ಇನ್ನೂ ನೂರು ವರ್ಷಗಳಾದರೂ ಬವಣೆ ಅನುಭವಿಸುತ್ತಲೇ ಇರಬೇಕು. ಹೀಗಾಗಿ ರೈತರ ಕ್ಷೇಮ ನೋಡಿಕೊಳ್ಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿ.ಗೋಪಾಲಗೌಡ ತಿಳಿಸಿದರು.

‘ಕೆರೆಗಳಿಗೆ ತುಂಬಿಸುವ ಸರಿಯಾಗಿ ಸಂಸ್ಕರಿಸದ ತ್ಯಾಜ್ಯ ನೀರು ಒಂದೊಮ್ಮೆ ಅಂತರ್ಜಲ ಕಲುಷಿತಗೊಳಿಸಿ ನಮ್ಮನೆಲ್ಲ ರೋಗಿಗಳನ್ನಾಗಿ ಮಾಡಿದರೆ ಚಿಕಿತ್ಸೆಗೆ ಉತ್ತಮ ಆಸ್ಪತ್ರೆಗಳಾದರೂ ಎಲ್ಲಿವೆ? ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲಿ ಸರಿಯಾಗಿ ವೈದ್ಯರು, ನರ್ಸ್‌, ಔಷಧಿ ಇಲ್ಲ. ಇನ್ನು ಕಲುಷಿತಗೊಂಡ ನೀರಿನಿಂದ ನಮಗೆ ಚರ್ಮ ರೋಗ, ಕಿಡ್ನಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಬಂದರೆ ಎಲ್ಲಿ ಹೋಗುವುದು’ ಎಂದು ಅವರು ಪ್ರಶ್ನಿಸಿದರು.

‘ರೈತರನ್ನು ಈವರೆಗೆ ಯಾರೂ ಸಂರಕ್ಷಣೆ ಮಾಡಿಲ್ಲ. ಈ ವಿಚಾರಗಳನ್ನು ಪ್ರತಿಯೊಬ್ಬರೂ ಪರಸ್ಪರ ಚರ್ಚೆ ಮಾಡಬೇಕು. ಕೆಟ್ಟ ಆಡಳಿತದ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸವಾಗಬೇಕು. ಇದು ಆಂಜನೇಯರೆಡ್ಡಿ ಒಬ್ಬರೇ ಹೋರಾಡುವ ವಿಚಾರ ಇದಲ್ಲ. ಎಲ್ಲ ರೈತರು, ಕೃಷಿ ಕಾರ್ಮಿಕರು ಒಟ್ಟಾಗಿ, ಸಂಘ, ಸಂಸ್ಥೆಗಳೆಲ್ಲವೂ ಪಕ್ಷಾತೀತವಾಗಿ ಒಗ್ಗಟಾಗಿ ಸಂಘಟನೆ ಕೆಲಸ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಹೋರಾಟಗಾರರಾದ ಕಾಮ್ರೇಡ್ ಲಕ್ಷ್ಮಯ್ಯ, ವಕೀಲ ಪಾಪಿರೆಡ್ಡಿ ಇದ್ದರು.

ಪ್ರಮಾಣಪತ್ರ ಬಿಡುಗಡೆ ಮಾಡಲಿ

‘ಇತ್ತೀಚೆಗೆ ಕೋಲಾರದ ಉಸ್ತುವಾರಿ ಸಚಿವರು ಏ.24ರ ಒಳಗೆ ಕೆ.ಸಿ.ವ್ಯಾಲಿ ನೀರು ತರದೇ ಹೋದರೆ ನಾನು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಅದನ್ನು ಅವರು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಆ ಬಗ್ಗೆ ಒಂದು ಪ್ರಮಾಣಪತ್ರ ಬಿಡುಗಡೆ ಮಾಡಲಿ ಎಂದು ವಿ.ಗೋಪಾಲಗೌಡ ಆಗ್ರಹಿಸಿದರು. ‘ಶುದ್ಧವಿಲ್ಲದ ನೀರು ಕೊಡುವುದು ಸಂವಿಧಾನ ವಿರೋಧಿ ಕೆಲಸ. ಇಂತಹ ಸವಾಲುಗಳನ್ನು ಮಾಡಬೇಡಿ. ನಿಮ್ಮ ಸವಾಲುಗಳನ್ನು ನಾವು ಈ ಹಿಂದೆಯೇ ಗಮನಿಸಿದ್ದೇವೆ’ ಎಂದರು.

ಸಚಿವರು 2016ರಲ್ಲಿ ಆಗಸ್ಟ್‌ 15ರ ಒಳಗೆ ನೀರು ತರದಿದ್ದರೆ ಸ್ವತಂತ್ರ್ಯ ದಿನದಂದು ಬಾವುಟ ಹಾರಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ನಾವು 2018ರಲ್ಲಿದ್ದೇವೆ. ಎಲ್ಲಿದೆ ಎತ್ತಿನಹೊಳೆ, ಕೆ.ಸಿ.ವ್ಯಾಲಿ ನೀರು? ಎಲ್ಲಿವೆ ನಿಮ್ಮ ಪೈಪು? ಯಾರು ನಿಮ್ಮ ಗುತ್ತಿಗೆದಾರರು? ಯಾವ ಗುತ್ತಿಗೆದಾರನಿಗೆ ಎಷ್ಟು ಹಣ ಕೊಟ್ಟಿದ್ದೀರಿ? ಅದು ಎಲ್ಲಿ ಸರಬರಾಜು ಆಗುತ್ತಿದೆ ಎನ್ನುವುದೂ ನಮಗೆ ಗೊತ್ತಿದೆ’ ಎಂದು ಹೇಳಿದರು.

ಸುಳ್ಳು ಎಂದು ಸಾಬೀತುಪಡಿಸಿ

‘ಸುಳ್ಳುಗಳ ವಿರುದ್ಧದ ಈ ನಮ್ಮ ಹೋರಾಟಕ್ಕೆ ಇಲ್ಲಿಗೆ ನಿಲ್ಲುವುದಿಲ್ಲ. ಇದೇ ವಾರದಲ್ಲಿ ‘ಬಯಲುಸೀಮೆ ನೀರಾವರಿ ಬಿಕ್ಕಟ್ಟು’ ವಿಷಯ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್‌ನಲ್ಲಿರುವ ವರದಿಯನ್ನು ನಾವು ವಿಧಾನಸೌಧ, ಮುಖ್ಯ ಕಾರ್ಯದರ್ಶಿ ಕೊಠಡಿ ಇಲ್ಲವೇ ಬೆಂಗಳೂರಿನ ಯಾವುದಾದರೂ ಒಂದು ಸಭಾಂಗಣದಲ್ಲಿ ಪ್ರದರ್ಶಿಸುತ್ತೇವೆ’ ಎಂದು ಗೋಪಾಲಗೌಡ ಹೇಳಿದರು.

‘ವರದಿಯಲ್ಲಿರುವ ವಿಷಯವನ್ನು ಸುಳ್ಳು ಎಂದು ಯಾರಾದರೂ ಸಾಬೀತುಪಡಿಸಿದರೆ ಆಂಜನೇಯರೆಡ್ಡಿ ಅವರನ್ನು ಜೈಲಿಗೆ ಕಳುಹಿಸೋಣ. ವರದಿ ಸರಿ ಇದೆ ಎನ್ನುವುದಾದರೆ ಇದನ್ನು ಒಪ್ಪಿಕೊಂಡು ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಯೋಜನೆ ಸಿದ್ಧಪಡಿಸಲಿ. ಈ ಬಗ್ಗೆ ನಾವು ಸಾರ್ವಜನಿಕ ಚರ್ಚೆಗೆ ಸಿದ್ಧರಾಗಿದ್ದೇವೆ’ ಎಂದು ವಿ.ಗೋಪಾಲಗೌಡ ಹೇಳಿದರು.

ನೀರಾವರಿಗಿಲ್ಲದ ಕಾಳಜಿ ಧರ್ಮಕ್ಕೆ ಏಕೆ?

ಕಾರ್ಯಕ್ರಮದಲ್ಲಿ ‘ಬಯಲುಸೀಮೆ ನೀರಾವರಿ ಬಿಕ್ಕಟ್ಟು’ ವಿಷಯ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿಷಯ ಮಂಡನೆ ಮಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಬಯಲು ಸೀಮೆಯ ಜಿಲ್ಲೆಗಳ ನೀರಿನ ಅಗತ್ಯತೆ, ಸರ್ಕಾರ ಮತ್ತು ಜನಪ್ರತಿನಿಧಿಗಳ ವೈಫಲ್ಯವನ್ನು ಅಂಕಿಅಂಶಗಳ ಸಮೇತ ಅನಾವರಣಗೊಳಿಸಿದರು.

‘ಈ ಹಿಂದೆ ಬೃಹತ್ ರ‍್ಯಾಲಿ ನಡೆಸಿದಾಗ ಮುಖ್ಯಮಂತ್ರಿ ಮಾಡಿದ ವಾಗ್ದಾನ ಎರಡು ವರ್ಷಗಳು ಕಳೆದರೂ ಈಡೇರಿಲ್ಲ. ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯತ ವಿಚಾರದಲ್ಲಿ ತೋರುವ ಆಸಕ್ತಿಯನ್ನು ನಿರ್ಲಕ್ಷಿತ ಪ್ರದೇಶದ ಇಷ್ಟು ದೊಡ್ಡ ಸಮಸ್ಯೆಗೆ ನೀಡಲಿಲ್ಲ. ಕಾರಣ ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಹಾಗಾಗಿ ರಾಜಕಾರಣಿಗಳು ನಮ್ಮನ್ನು ಒಡೆದು ಆಳುತ್ತಿದ್ದಾರೆ’ ಎಂದರು.

‘ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಎಚ್‌.ಎನ್.ವ್ಯಾಲಿ ಯೋಜನೆಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಮ್ಮ ಜನಪ್ರತಿನಿಧಿಗಳು ಕೂಡ ನಮಗಾಗಿರುವ ಅನ್ಯಾಯ ಕುರಿತು ಮುಖ್ಯಮಂತ್ರಿ, ನೀರಾವರಿ ಸಚಿವರನ್ನು ಕತ್ತಿನ ಪಟ್ಟಿ ಹಿಡಿದು ಕೇಳೋಣ ಬನ್ನಿ ಎಂದ ನಿದರ್ಶನಗಳಿಲ್ಲ’ ಎಂದು ಆಪಾದಿಸಿದರು.

‘ಸಂಸ್ಕರಿಸಿದ ತ್ಯಾಜ್ಯ ನೀರಿನ ವಿಚಾರದಲ್ಲಿ ನಾವು ಪೂರ್ವಗ್ರಹಪೀಡಿತರಾಗಿಲ್ಲ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಗಮನ ಹರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆಗಳು ಕೂಡ ಇವೆ. ಈಗಲಾದರೂ ಅನ್ಯಾಯಕ್ಕೆ ಒಳಗಾದ ಬಯಲುಸೀಮೆ ಜಿಲ್ಲೆಗಳಿಗೆ ನ್ಯಾಯ ಒದಗಿಸುವ ಕೆಲಸಗಳಾಗಲಿ ಎನ್ನುವುದು ನಮ್ಮ ಕಳಕಳಿ’ ಎಂದು ಹೇಳಿದರು.

**

ರೈತರನ್ನು ಸಂರಕ್ಷಣೆ ಮಾಡದವರನ್ನು ಜನ ವಿರೋಧಿ ಎಂದು ಘೋಷಿಸಿ, ರೈತರು, ಜನಸಾಮಾನ್ಯರ ಹಿತ ಕಾಯುವವರಿಗೆ ಮಾತ್ರ ಮತದಾರ ಮತ ನೀಡಿ – ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT