ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಕಿ.ಮೀ. ಸಂಚಾರಕ್ಕೆ 3 ಕಿ.ಮೀ. ಸುತ್ತಾಟ!

ಹೊಸಕೆರೆಹಳ್ಳಿ: ಮುತ್ತುರಾಜ್‌ ಜಂಕ್ಷನ್‌ನಲ್ಲಿ ಸಂಚಾರ ಆರಂಭವಾದರೂ ಕೊನೆಯಾಗದ ಅವ್ಯವಸ್ಥೆ
Last Updated 5 ಸೆಪ್ಟೆಂಬರ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿಯ ಮುತ್ತುರಾಜ್ ಜಂಕ್ಷನ್‌ನಲ್ಲಿ ಹೊಸತಾಗಿ ನಿರ್ಮಾಣವಾದ ಕೆಳಸೇತುವೆ ವಾಹನ ಸಂಚಾರಕ್ಕೆ ಮುಕ್ತವಾದರೂ ಸ್ಥಳೀಯರು ಹಾಗೂ ವಾಹನ ಸವಾರರ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಅರ್ಧ ಕಿ.ಮೀ. ದಾರಿಯನ್ನು ಕ್ರಮಿಸಲು ಮೂರು ಕಿ.ಮೀ. ಸುತ್ತಬೇಕಾಗಿದೆ.

ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ನಾಯಂಡಹಳ್ಳಿವರೆಗೆ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯಡಿಮುತ್ತುರಾಜ್ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಬಿಬಿಎಂಪಿ ಬರೋಬ್ಬರಿ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತ್ತು. ಕೆಲ ದಿನಗಳ ಹಿಂದಷ್ಟೇ ಈ ಕೆಳಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸರ್ವಿಸ್‌ ರಸ್ತೆಗಳ ಮಳೆ ನೀರು ಚರಂಡಿ ಕಾಮಗಾರಿ ಹಾಗೂ ಕೆಳಸೇತುವೆಯನ್ನು ಅಡ್ಡಹಾಯುವ 80 ಅಡಿ ರಸ್ತೆಯ ಕಾಂಕ್ರೀಟೀಕರಣ ಈಗಷ್ಟೇ ನಡೆಯುತ್ತಿದೆ. ಇದರಿಂದಾಗಿ ಸರ್ವಿಸ್‌ ರಸ್ತೆಗಳೆರಡರಲ್ಲೂ ಸಂಪರ್ಕ ಕಡಿತ ಮಾಡಲಾಗಿದೆ. ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದ ನಿವಾಸಿಗಳು ಬನಶಂಕರಿ ಕಡೆ ಹೋಗಲು 3 ಕಿ.ಮೀ. ಸುತ್ತಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮಗಾರಿಯ ಈಗಿನ ವೇಗವನ್ನು ನೋಡಿದರೆ ಎರಡು ತಿಂಗಳ ಬಳಿಕವೂ ಸರ್ವಿಸ್ ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ಅನುಮಾನ.ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, 80 ಅಡಿ ರಸ್ತೆಯ ಮೂಲಕ ಶ್ರೀನಿವಾಸ ನಗರದ ಕಡೆ ಹೋಗುವವರು ಹೊರವರ್ತುಲ ರಸ್ತೆಯಲ್ಲೇ ಹೊಸಕೆರೆಹಳ್ಳಿಯ ಇಂಡಿಯನ್ ಆಯಿಲ್ ಪೆಟ್ರೋಲ್‌ ಬಂಕ್‌ ಬಳಿ ಬಲಕ್ಕೆ ತಿರುವು ಪಡೆದು, ವಿದ್ಯಾನಗರ ರಸ್ತೆಯ ಮೂಲಕ ಸಾಗಬೇಕು.

ಬಂದ ದಾರಿಗೆ ಸುಂಕವಿಲ್ಲ: ಸೀತಾ ಸರ್ಕಲ್ ಕಡೆಯಿಂದ ಬರುವವರು ವಾಟರ್‌ ಟ್ಯಾಂಕ್‌ ಸರ್ಕಲ್‌ಗೆ ಸಾಗಿ, 50 ಅಡಿ ರಸ್ತೆಯ ಮೂಲಕ ಬನಶಂಕರಿಗೆ ಹೋಗಬೇಕಾಗಿದೆ. ಮಾರ್ಗ ಬದಲಾವಣೆಯ ಬಗ್ಗೆ ಮಾಹಿತಿ ಇಲ್ಲದ ಕೆಲ ವಾಹನ ಸವಾರರು 50 ಅಡಿ ರಸ್ತೆಯ 1ನೇ ಅಡ್ಡ ರಸ್ತೆಯ ಮೂಲಕ 80 ಅಡಿ ರಸ್ತೆಗೆ ಸಾಗಿ, ಮುತ್ತುರಾಜ್ ಜಂಕ್ಷನ್‌ ತಲುಪುತ್ತಿದ್ದಾರೆ. ಆದರೆ, ಮುಂದೆ ಮಾರ್ಗ ಇಲ್ಲದಿರುವುದರಿಂದ ಬಂದ ರಸ್ತೆಯಲ್ಲಿಯೇ ವಾಪಸಾಗುತ್ತಿದ್ದಾರೆ. ಸಾಯಿ ಚೇಂಬರ್ಸ್ ಮುಂಭಾಗದ ಏಕಮುಖ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಕೆಲ ವಾಹನ ಸವಾರರುವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದಸಂಚಾರ ದಟ್ಟಣೆ ಸಮಸ್ಯೆ ಉಂಟಾಗುವ ಜತೆಗೆ ಅಪಘಾತದ ಆತಂಕವೂ ಎದುರಾಗಿದೆ.

ನಾಯಂಡಹಳ್ಳಿ ಕಡೆಗೆ ಹೋಗುವವರು ಸರ್ವಿಸ್ ರಸ್ತೆಯ ಮೂಲಕ ಹೊರವರ್ತುಲ ರಸ್ತೆಯನ್ನು ಸಂಪರ್ಕಿಸಿ, ವಿರುದ್ಧ ದಿಕ್ಕಿನಲ್ಲಿ ಒಂದು ಕಿ.ಮೀ ಸಾಗಿ ಹೊಸಕೆರೆಹಳ್ಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಎಡಕ್ಕೆ ತಿರುವು ಪಡೆದುಕೊಳ್ಳುತ್ತಿದ್ದಾರೆ. ನಿಯಮ ಉಲ್ಲಂಘನೆ ಆರೋಪದಡಿ ಇಲ್ಲಿ ಸಂಚಾರ ಪೊಲೀಸರು ದಂಡ ಹಾಕುತ್ತಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವ್ಯಾಪಾರ ವಹಿವಾಟು ಸ್ಥಗಿತ: ಸರ್ವಿಸ್‌ ರಸ್ತೆ ಹಾಗೂ 80 ಅಡಿ ರಸ್ತೆಗಳಲ್ಲಿ 500 ಮೀ. ಉದ್ದಕ್ಕೆ ಸಂಪರ್ಕ ಕಡಿತದಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಹಕರ ಸಂಖ್ಯೆ ಕ್ಷೀಣಿಸಿದ್ದರಿಂದ, ಸರ್ವಿಸ್‌ ರಸ್ತೆಯ ಪಕ್ಕದಲ್ಲಿ ಮಳಿಗೆಗಳು ವ್ಯಾಪಾರ ನಿಲ್ಲಿಸಬೇಕಾದ ಸ್ಥಿತಿ ಬಂದೊದಗಿದೆ. ಕಾಮಗಾರಿಯಿಂದ ಉಂಟಾಗುವ ಶಬ್ದ ಮತ್ತು ದೂಳು ಸ್ಥಳೀಯರ ನಿದ್ದೆಗೆಡಿಸಿದೆ.

‘ಆಮೆಗತಿಯ ಕಾಮಗಾರಿಯಿಂದ ಬೇಸತ್ತಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದೂ ಕಷ್ಟವಾಗಿದೆ. ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ದೂಳಿನಿಂದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕಾಮಗಾರಿ ಗುಣಮಟ್ಟವೂ ಕಳಪೆಯಾಗಿದೆ’ ಎಂದುದತ್ತಾತ್ರೇಯ ನಗರದ ನಿವಾಸಿ ಭಾಸ್ಕರ್ ಬೇಸರ ವ್ಯಕ್ತಪಡಿಸಿದರು.

‘ಮಳೆನೀರು ಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಜಲ್ಲಿ ಹಾಕಿ ಡಾಂಬರೀಕರಣ ಮಾಡಲು ಹೆಚ್ಚು ದಿನ ಬೇಡ. ಕಾಂಕ್ರೀಟೀಕರಣ ಮುಕ್ತಾಯದ ಹಂತದಲ್ಲಿದೆ. ಎಲ್ಲ ಕಾಮಗಾರಿಗಳೂ 10 ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಆ ಬಳಿಕ ಈ ರಸ್ತೆಗಳಲ್ಲೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

4 ವರ್ಷದಿಂದ ಇಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮಕ್ಕಳು, ವೃದ್ಧರು ಓಡಾಡುವುದು ಕಷ್ಟವಾಗಿದೆ. ಸ್ಥಳೀಯರು ಹಾಗೂ ವಾಹನ ಸವಾರರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ.

- ಶ್ರೀದೇವಿ, ಶಿಕ್ಷಕಿ

ಎಲ್ಲೆಂದರೆಲ್ಲಿ ಮಣ್ಣಿನ ರಾಶಿಗಳಿವೆ. ದೂಳಿನಿಂದ ಅಲರ್ಜಿ ಉಂಟಾಗುತ್ತಿದೆ. ರಸ್ತೆ ದಾಟುವುದು ಕಷ್ಟವಾಗಿದೆ. ವಾಹನವಿದ್ದರೂ ಮುಖ್ಯರಸ್ತೆಗೆ ಹೋಗುವುದು ಸವಾಲಾಗಿದೆ

- ಮೋಹನ್ ಕುಮಾರ್,ಹೊಸಕೆರೆಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT