ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ಯಾಲಮಡುವುಗೆ ಮತ್ತೆ ಜೀವಕಳೆ, ಜಲಪಾತ ಪ್ರದೇಶದ ಕಾಯಕಲ್ಪಕ್ಕೆ ನಿರ್ಲಕ್ಷ್ಯ

Last Updated 4 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಆನೇಕಲ್:ಸುರಿಯುತ್ತಿರುವ ಭಾರಿ ಮಳೆಯಿಂದ ತಾಲ್ಲೂಕಿನ ಪ್ರವಾಸಿ ತಾಣವಾದ ಮುತ್ಯಾಲಮಡುವಿನಲ್ಲಿ ಜಲಧಾರೆ ಭೋರ್ಗರೆಯುತ್ತಿದ್ದು,ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆ ಮೂಲಕ ಜಲಪಾತದ ಗತವೈಭವ ಮರುಕಳಿಸಿದೆ.

ಕಳೆದ 15 ದಿನಗಳಿಂದಲೂ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮುತ್ಯಾಲಮಡುವಿ
ನಲ್ಲಿ ನೀರು ಮುತ್ತಿನೋಪಾದಿಯಲ್ಲಿ ಧುಮ್ಮಿಕ್ಕುತ್ತಿರುವ ಹಸಿರಿನ ಕಣಿವೆಯಲ್ಲಿ ಜೀವಕಳೆ ತುಂಬಿದೆ. ಇಲ್ಲಿನ ಹಸಿರಿನ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಆನಂದ. ಜುಳು ಜುಳು ಹರಿಯುವ ನೀರಿನ ನಿನಾದಕ್ಕೆ ಕಿವಿಗೊಡುತ್ತಾ ಹಸಿರಿನ ನಡುವೆ 400ಕ್ಕೂ ಹೆಚ್ಚು ಮೆಟ್ಟಿಲು ಇಳಿದು ಕಣಿವೆ ತಲುಪಿದರೆ ಆಯಾಸ ಮರೆಯಾಗಿ ಮನಸ್ಸಿಗೆ ಮುದ ನೀಡುತ್ತದೆ. 300 ಅಡಿಗಳಿಗೂ ಎತ್ತರದಿಂದ ಕಣಿವೆಯತ್ತ ಧುಮ್ಮಿಕ್ಕುತ್ತಿರುವ ನೀರಿನ ಝರಿ ಕೈಬೀಸಿ ಕರೆಯುತ್ತದೆ.

ಮುಖ್ಯ ಜಲಪಾತದಲ್ಲಿ ನೀರಿನ ಸೆಲೆ ಹೆಚ್ಚಾಗಿದ್ದು ಸುತ್ತಲಿನ ಪ್ರದೇಶದಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗಿವೆ. ಬಂಡೆಗಳ ನಡುವೆ ಹರಿಯುವ ನೀರಿನಲ್ಲಿ ವಿಹರಿಸುವುದು ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ಮುತ್ಯಾಲಮಡುವಿನಲ್ಲಿ ನೀರು ಮುತ್ತಿನಂತೆ ಧುಮ್ಮಿಕ್ಕುವುದಕ್ಕೆ ಈ ಜಲಪಾತಕ್ಕೆ ಮುತ್ಯಾಲಮಡುವು ಎಂದು ಹೆಸರು ಬಂದಿದೆ. ಹಲವು ವರ್ಷಗಳಿಂದ ಮಳೆ ಇಲ್ಲದೆ ಕಣ್ಮರೆಯಾಗಿದ್ದ ಜಲಪಾತ ತನ್ನ ವೈಭವವನ್ನು ಮರಳಿ ಪಡೆದಿದ್ದು ಪ್ರವಾಸಿಗರಿಗೆ ಇಲ್ಲಿನ ತಂಪನೆಯ ವಾತಾವರಣ ಮುದ ನೀಡುತ್ತದೆ.

ತಲುಪುವುದು ಹೇಗೆ?

ಇದು ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿ ಆನೇಕಲ್‌ ಸೆರಗಿನಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಸುಸಜ್ಜಿತವಾದ ರಸ್ತೆ ಸೌಕರ್ಯವಿದೆ. ಆದರೆ, ಬಸ್ ಸೌಕರ್ಯ ಇಲ್ಲ. ಸ್ವಂತ ವಾಹನಗಳಲ್ಲಿ ಬರಬಹುದು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಹಾಗೂ ವಸತಿ ಗೃಹಗಳು ಇಲ್ಲಿವೆ. ಒಂದು ದಿನದ ಹೊರ ಸಂಚಾರವನ್ನು ಸಂತಸದಿಂದ ಕಳೆಯಲು ಪ್ರಶಸ್ತವಾದ ಸ್ಥಳವಾಗಿದೆ. ಮಳೆ ಹಾಗೂ ಮೋಡದ ಈ ವಾತಾವರಣ ಮುತ್ಯಾಲಮಡುವು ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT