ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಹಣ ಅನ್ಯ ಕಾರ್ಯಗಳಿಗೆ ಬಳಸಿದ್ದರೆ ತನಿಖೆ: ಶ್ರೀನಿವಾಸ ಪೂಜಾರಿ

Last Updated 27 ಆಗಸ್ಟ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ದೇವಸ್ಥಾನಗಳ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸ ಲಾಗಿದೆಯೆ ಎಂಬ ಬಗ್ಗೆ ಅಗತ್ಯವಿದ್ದರೆ ತನಿಖೆ ನಡೆಸುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಇಲಾಖಾ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ಇಂತಹ ಆರೋಪಗಳು ಕೇಳಿ ಬಂದಿವೆ. ಆದರೆ, ಅನ್ಯ ಕಾರ್ಯಗಳಿಗೆ ಮತ್ತು ಅನ್ಯ ಧರ್ಮಗಳ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇಲ್ಲ ಎಂದರು.

ಆದರೂ ಅಂತಹ ಸಂಶಯಗಳಿಗೆ ಉತ್ತರ ಪಡೆಯಲು ಅಗತ್ಯವಿದ್ದರೆ ತನಿಖೆ ನಡೆಸಲಾಗುವುದು. ದೇವಸ್ಥಾನದ ಹುಂಡಿ ಹಣ ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿಲ್ಲ ಎಂದು ಸಚಿವರು ತಿಳಿಸಿದರು.

ದೇವಸ್ಥಾನ ಕಟ್ಟಡಗಳ ನವೀಕರಣ ಕಾರ್ಯಕ್ಕಾಗಿ ಮುಜರಾಯಿ ಇಲಾಖೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಹೊಂದಲು ಉದ್ದೇಶಿಸಿದೆ. ಸದ್ಯಕ್ಕೆ ಲೋಕೋಪಯೋಗಿ ಅಥವಾ ನಿರ್ಮಿತಿ ಸಂಸ್ಥೆಗಳಿಂದ ದೇವಸ್ಥಾಗಳ ಕಟ್ಟಡಗಳ ನವೀಕರಣ ನಡೆಸಲಾಗುತ್ತಿದೆ. ದೇವಸ್ಥಾನದ ವಾಸ್ತು ಶಿಲ್ಪದ ಅರಿವು ಇರುವ ಎಂಜಿನಿಯರಿಂಗ್‌ ತಂಡ ಇದ್ದರೆ, ದೇವಸ್ಥಾನಗಳ ಮೂಲ ವಾಸ್ತು ಶಿಲ್ಪಕ್ಕೆ ಭಂಗ ಆಗದಂತೆ ನವೀಕರಣ, ದುರಸ್ಥಿ ಕಾರ್ಯ ನಡೆಬಹುದು ಎಂದು ಅವರು ಹೇಳಿದರು.

ಒಂದು ತಿಂಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಎಲ್ಲ ಜಿಲ್ಲೆಗಳ ಧಾರ್ಮಿಕ ಪರಿಷತ್ತನ್ನು ಪುನರ್ ರಚಿಸಲಾಗುವುದು. ದೇವಸ್ಥಾನಗಳಲ್ಲಿ ಶುಚಿತ್ವ ಕಾಪಾಡಬೇಕು, ಎಲ್ಲ ಹಂತಗಳಲ್ಲೂ ಪಾರದರ್ಶಕತೆ ಇರಬೇಕು. ಧಾರ್ಮಿಕ ನಂಬಿಕೆಗಳಿಗೆ ಒತ್ತುಕೊಟ್ಟು ಪರಿಣಾಮಕಾರಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.

ಮುಜರಾಯಿ ದೇವಸ್ಥಾನಗಳ ತಸ್ತೀಕ್‌ ಹಣ ₹27 ಸಾವಿರದಿಂದ ₹48 ಸಾವಿರಕ್ಕೆ ಏರಿಸಲಾಗಿದೆ. ಇನ್ನು ಮುಂದೆ ಈ ಹಣವನ್ನು ಇ ಆಡಳಿತ ಮೂಲಕ ನೇರವಾಗಿ ದೇವಸ್ಥಾನದ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೋಟ್‌ ಹೌಸ್‌ ಪ್ರವಾಸೋದ್ಯಮ

ಕೇರಳದ ಮಾದರಿಯಲ್ಲಿ ರಾಜ್ಯದ ಕರಾವಳಿ ಪ್ರದೇಶದಲ್ಲೂ ಬೋಟ್‌ ಹೌಸ್‌ ಪ್ರವಾಸೋದ್ಯಮ ಆರಂಭಿಸುವ ಚಿಂತನೆ ಇದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಮುದ್ರ ತೀರದಲ್ಲಿ ಹಿನ್ನೀರು ಪ್ರದೇಶವೂ ಇದೆ. ಪ್ರವಾಸೋದ್ಯಮ ಬೆಳೆಸಲು ಇದರ ಸದುಪಯೋಗ ಪಡೆಯಬೇಕು. ಇದರಿಂದ ಉದ್ಯೋಗ ಸೃಷ್ಟಿಯ ಜತೆ ಸರ್ಕಾರಕ್ಕೆ ಆದಾಯವೂ ಬರುತ್ತದೆ ಎಂದು ಅವರು ಹೇಳಿದರು.

ಮೀನುಗಾರ ಮಹಿಳೆಯರು ₹50 ಸಾವಿರ ಮಿತಿಗೆ ಒಳಪಟ್ಟು ಪಡೆದಿರುವ ಸಾಲವನ್ನು ಮನ್ನಾ ಮಾಡಲು ಸರ್ಕಾರ ಆದೇಶ ಮಾಡಿದೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಬ್ಯಾಂಕ್‌ಗಳಿಗೆ ಸಾಲ ಮನ್ನಾ ಹಣ ಪಾವತಿ ಮಾಡಲಿದ್ದು, ಅಧಿಕಾರಿಗಳು ಒತ್ತಡ ಹೇರಬಾರದು ಎಂದು ಲೀಡ್‌ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT