ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಭಾಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಪವಿತ್ರ ಮೃತ್ತಿಕೆ ಸಂಗ್ರಹಣಾ ಕಾರ್ಯವು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಮೇರೆ ಮೀರಿದ ಉತ್ಸಾಹದಿಂದ ನಡೆಯಿತು.
ಪವಿತ್ರ ಮೃತ್ತಿಕೆಯನ್ನು ಸಚಿವಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಕ್ಷೇತ್ರದ ನಾಗರಿಕರು ಹಸ್ತಾಂತರಿಸಿದರು. ಮೊದಲಿಗೆ ಮತ್ತಿಕೆರೆಯ ನೇತಾಜಿ ವೃತ್ತದಲ್ಲಿ ಸಚಿವ ಮುನಿರತ್ನ ಪೂಜೆ ಸಲ್ಲಿಸಿ, ಮೃತ್ತಿಕೆ ಸಂಗ್ರಹಣೆಗೆ ಚಾಲನೆ ನೀಡಿದರು. ನಂತರ ಅಶ್ವತ್ಥನಾರಾಯಣ ಜತೆಗೂಡಿದರು.
ಮೊದಲು ಮತ್ತಿಕೆರೆ 3ನೇ ಮುಖ್ಯರಸ್ತೆಯಲ್ಲಿ ಹೆಜ್ಜೆ ಇಟ್ಟ ಕೆಂಪೇಗೌಡರ ಅಭಿಮಾನಿಗಳು, ನಂತರ 1ನೇ ಮುಖ್ಯ ರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ಮಧ್ಯದಲ್ಲಿ ಅಶ್ವತ್ಥನಾರಾಯಣ ಅವರು, ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ನಮಿಸಿದರು.
ಮೆರವಣಿಗೆ ಕೆ.ಎನ್ ಬಡಾವಣೆ, ಸುಬೇದಾರ್ ಪಾಳ್ಯ, ತ್ರಿವೇಣಿ ರಸ್ತೆಗಳಲ್ಲಿ ಸಾಗಿಬಂದಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಇರುವ ದೇವಸ್ಥಾನಗಳ ಬಳಿ ನಾಡಪ್ರಭುವಿನ ರಥಗಳಿಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಮತ್ತಿಕೆರೆಯ ಮುಸ್ಲಿಮರು ಅಭಿಯಾನದ ಜತೆ ಸೇರಿಕೊಂಡು, ಸಾಮರಸ್ಯದ ಸಂದೇಶ ಸಾರಿದರು.
ನಂತರ ರಾಜಕುಮಾರ್ ರಸ್ತೆ, ಸುಬ್ರಹ್ಮಣ್ಯ ನಗರ, ನಾಗರಾಜ್ ರಸ್ತೆ ಮೂಲಕ ಇನ್ನೊಂದು ಸುತ್ತಿನ ಮೆರವಣಿಗೆ ನಡೆದು, ಮಹಾಕವಿ ಕುವೆಂಪು ರಸ್ತೆಯಲ್ಲಿ ಸಂಪನ್ನಗೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.