ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಚುನಾವಣೆ: ಡಾ. ರಾಜೇಶ್‌ ಗೌಡ ಬಿಜೆಪಿ ಸೇರ್ಪಡೆ

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ನಳಿನ್‌
Last Updated 4 ಅಕ್ಟೋಬರ್ 2020, 0:55 IST
ಅಕ್ಷರ ಗಾತ್ರ

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪೈಕಿ ಒಬ್ಬರಾಗಿರುವ ಡಾ. ರಾಜೇಶ್‌ ಗೌಡ ಶನಿವಾರ ಅಧಿಕೃತವಾಗಿ ಪಕ್ಷ ಸೇರಿದರು. ಅವರೊಂದಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಹಾಲಿ ಸದಸ್ಯರು ಸೇರಿದಂತೆ ಹಲವರು ಬಿಜೆಪಿ ಸದಸ್ಯತ್ವ ಪಡೆದರು.

ಪಕ್ಷದ ಬಾವುಟ ನೀಡಿ ರಾಜೇಶ್‌ ಗೌಡ ಅವರನ್ನು ಸ್ವಾಗತಿಸಿದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ‘ರಾಜೇಶ್‌ ಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಜನಪರ ರಾಜಕಾರಣವನ್ನು ಬೆಂಬಲಿಸಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರ ಸೇರ್ಪಡೆಯಿಂದ ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಬಂದಿದೆ’ ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಸದಸ್ಯರು ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಬೆಳವಣಿಗೆ ಆರಂಭವಾಗಿದೆ. ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನೂ ಗೆದ್ದುಕೊಳ್ಳಲಿದೆ ಎಂದು ಹೇಳಿದರು.

ಜನರ ಒತ್ತಡವೇ ಕಾರಣ: ರಾಜೇಶ್‌ ಗೌಡ ಮಾತನಾಡಿ, ‘ನಾನು ವೃತ್ತಿಯಲ್ಲಿ ವೈದ್ಯ. ಶಿರಾ ವಿಧಾನಸಭಾ ಕ್ಷೇತ್ರದ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಬಿಜೆಪಿ ಸೇರುವಂತೆ ಮತ್ತು ಸಕ್ರಿಯ ರಾಜಕಾರಣಕ್ಕೆ ಬರುವಂತೆ ಜನರೇ ನನ್ನ ಮೇಲೆ ಒತ್ತಡ ಹೇರಿದರು. ಅವರ ಆಶಯದಂತೆ ಬಿಜೆಪಿ ಸೇರಿದ್ದೇನೆ’ ಎಂದರು.

ಬಿಜೆಪಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಗೌಡ ಮಾತನಾಡಿ, ‘ರಾಜೇಶ್‌ ಗೌಡ ಅವರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದೆ. ಅವರು ಪಕ್ಷದ ವರ್ಚಸ್ಸು ನೋಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬಂದಿಲ್ಲ’ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ, ಸಂಸದ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ಶ್ರೀರಂಗ ಯಾದವ್, ತಾಲ್ಲೂಕು ಪಂಚಾಯಿತಿ ಸದಸ್ಯ ಉಳಿಗೆರೆ ತಿಮ್ಮಣ್ಣ, ಮುಖಂಡರಾದ ಮೂಡಲಗಿರಿಯಪ್ಪ, ಹನುಮಂತರಾಯಪ್ಪ ಕಳ್ಳಂಬೆಳ್ಳ ಸೇರಿದಂತೆ ಹಲವರು ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT