ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಕಟ್ಟಡಗಳಿಗೆ ‘ನಂಬಿಕೆ ನಕ್ಷೆ’ ಸೆ. 2ರಿಂದ ಜಾರಿ

ಬಿಬಿಎಂಪಿ ಕಚೇರಿಗೆ ಹೋಗದೆಯೇ ನಕ್ಷೆ ಲಭ್ಯ; ಎರಡು ವಲಯಗಳಲ್ಲಿ ಯಶಸ್ವಿ
Published : 29 ಆಗಸ್ಟ್ 2024, 23:30 IST
Last Updated : 29 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿ ಕಚೇರಿಗೆ ಹೋಗದೆ ಕಟ್ಟಡ ನಕ್ಷೆ ಪಡೆಯುವ ‘ನಂಬಿಕೆ ನಕ್ಷೆ– ನಿಮ್ಮ ಮನೆ ನಕ್ಷೆ ನಿಮ್ಮ ಮನೆ ಬಾಗಿಲಿಗೆ’ ಯೋಜನೆಯ ಪ್ರಾಯೋಗಿಕ ಅನುಷ್ಠಾನ ಎರಡು ವಲಯಗಳಲ್ಲಿ ಯಶಸ್ವಿಯಾಗಿದ್ದು, ಸೆಪ್ಟೆಂಬರ್‌ 2ರಿಂದ ಎಲ್ಲ ವಲಯಗಳಲ್ಲೂ ಜಾರಿಯಾಗಲಿದೆ.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ಜಾರಿಗೆ ತಂದಿರುವ ಈ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಾರ್ಚ್‌ 11ರಂದು ಚಾಲನೆ ನೀಡಿದ್ದರು. ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ಪ್ರಾಯೋಗಿಕ ಅವಧಿಯಲ್ಲಿ ಒಟ್ಟಾರೆ 302 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 148 ನಕ್ಷೆಗಳಿಗೆ ಅನುಮೋದನೆ ದೊರೆತಿದೆ. ರಾಜರಾಜೇಶ್ವರಿನಗರ ವಲಯದಲ್ಲಿ 273 ಅರ್ಜಿ ಸಲ್ಲಿಕೆಯಾಗಿದ್ದು, 133 ಅನುಮೋದನೆಯಾಗಿದ್ದರೆ, ದಾಸರಹಳ್ಳಿಯಲ್ಲಿ 29 ಅರ್ಜಿಗಳಲ್ಲಿ 15 ನಕ್ಷೆಗೆ ಸಮ್ಮತಿ ದೊರೆತಿದೆ.

‘ಆನ್‌ಲೈನ್‌ನಲ್ಲೇ ಎಲ್ಲ ಪ್ರಕ್ರಿಯೆಗಳು ಮುಗಿದು, 15 ದಿನದಲ್ಲಿ ಕಟ್ಟಡ ನಕ್ಷೆ ವಿತರಿಸುವ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ನಮ್ಮ ತಂತ್ರಾಂಶ ಆರಂಭದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಿತು. ನಂತರ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದರು.

‘ಎರಡು ವಲಯಗಳಲ್ಲಿ ‘ನಂಬಿಕೆ ನಕ್ಷೆ’ ಯಶಸ್ಸು ಕಂಡಿರುವುದರಿಂದ ಎಲ್ಲ ವಲಯದಲ್ಲೂ ಅನುಷ್ಠಾನಗೊಳಿಸಲು ಉಪ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಸೆ. 2ರಿಂದ ನಾಗರಿಕರು ಮನೆ ನಕ್ಷೆಗಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕಾಗುತ್ತದೆ’ ಎಂದರು.

‘ನಂಬಿಕೆ ನಕ್ಷೆ’ ಯೋಜನೆಯಡಿ 50 x 80 ಅಡಿ ಅಳತೆಯವರೆಗಿನ ಕಟ್ಟಡಗಳಿಗೆ ಸ್ವಯಂಚಾಲಿತವಾಗಿ 15 ದಿನಗಳಲ್ಲಿ ನಕ್ಷೆಗೆ ಮಂಜೂರಾತಿ ಸಿಗಲಿದೆ. ಅಧಿಕಾರಿಗಳು ಸಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸದೆ ಅಥವಾ ಅರ್ಜಿಯನ್ನು ಪರಿಶೀಲಿಸದಿದ್ದರೂ 15 ದಿನಗಳಲ್ಲಿ ಸ್ವಯಂಚಾಲಿತವಾಗಿ ನಕ್ಷೆ ಮಂಜೂರಾಗುತ್ತದೆ.

ಪ್ರಕ್ರಿಯೆ ಹೇಗೆ?:

ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಆರ್ಕಿಟೆಕ್ಟ್‌ಗಳು ಅಥವಾ ಎಂಜಿನಿಯರ್‌ಗಳು ಮಾಲೀಕರು ಒದಗಿಸುವ ದಾಖಲೆ ಮತ್ತು ಕಟ್ಟಡ ನಕ್ಷೆಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bpas.bbmpgov.in/BPAMSClient4/Default.aspx? TAV-1) ಅಪ್‌ಲೋಡ್‌ ಮಾಡುತ್ತಾರೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಆನ್‌ಲೈನ್‌ನಲ್ಲೇ ಪರಿಶೀಲಿಸಿ ಕೆರೆ ಸರ್ಕಾರಿ ಪ್ರದೇಶಗಳ ಯಾವುದೇ ಬಫರ್‌ ಝೋನ್‌ನಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತದೆ. ಆಟೊ ಡಿಸಿಆರ್‌ ಮೂಲಕ ವರದಿ ಸಿದ್ಧಗೊಂಡು ತಾತ್ಕಾಲಿಕ ನಕ್ಷೆ ಹಾಗೂ ಅನುಮತಿ ಪತ್ರವನ್ನು ಒಂದೆರಡು ದಿನದಲ್ಲಿ ನೀಡಲಾಗುತ್ತದೆ. ನಂತರ ಕಂದಾಯ ಅಧಿಕಾರಿಗಳು ನಗರ ಯೋಜನೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಮಂಜೂರು ಮಾಡುತ್ತಾರೆ. ದಾಖಲೆಗಳಲ್ಲಿ ಯಾವುದಾದರೂ ಸಮಸ್ಯೆ ಅಥವಾ ತಪ್ಪಿದ್ದರೆ ಬಿಬಿಎಂಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ‘ತಾತ್ಕಾಲಿಕ ನಕ್ಷೆ’ಯನ್ನು ರದ್ದುಗೊಳಿಸಿ ಕಟ್ಟಡ ನಿರ್ಮಿಸದಂತೆ ನಿರ್ಬಂಧಿಸಲಾಗುತ್ತದೆ. 15 ದಿನದಲ್ಲಿ ಎಲ್ಲ ಪ್ರಕ್ರಿಯೆಗಳೂ ಮುಗಿಯಲಿವೆ.

ಎಂಜಿನಿಯರ್‌ಗಳ ನೋಂದಣಿ
‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ನಕ್ಷೆ ಅನುಮೋದನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಎಂಜಿನಿಯರ್‌ಗಳು/ ಆರ್ಕಿಟೆಕ್ಟ್‌ಗಳ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅವರ ಮೂಲಕ ನಾಗರಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಕ್ಷೆ ಮಂಜೂರಾದ ಮೇಲೆ ಶುಲ್ಕವನ್ನೂ ಆನ್‌ಲೈನ್‌ನಲ್ಲೇ ಪಾವತಿಸಬೇಕಾಗುತ್ತದೆ. ನಂತರ ನಕ್ಷೆ ಲಭ್ಯವಾಗುತ್ತದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT