ಮಂಗಳವಾರ, ಮಾರ್ಚ್ 21, 2023
23 °C
ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ 6,316 ಮರ ಕಡಿಯುವುದಕ್ಕೆ ವಿರೋಧ

ಕೆರೆಗಳನ್ನು ಕಾಂಕ್ರಿಟ್‌ ಕೊಳಗಳನ್ನಾಗಿಸದಿರಿ: ಪ್ರಾಧ್ಯಾಪಕ ಡಾ.ಟಿ.ವಿ.ರಾಮಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಭಿವೃದ್ಧಿ ಹಾಗೂ ಪುನಶ್ಚೇತನದ ನೆಪದಲ್ಲಿ ಕೆರೆಗಳನ್ನು ಕಾಂಕ್ರಿಟ್‌ ಕೊಳಗಳನ್ನಾಗಿ ಪರಿವರ್ತಿಸಬೇಡಿ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ಡಾ.ಟಿ.ವಿ.ರಾಮಚಂದ್ರ ಕೋರಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನವು ‘ಸಿಂಗನಾಯಕನಹಳ್ಳಿ ಕೆರೆಯ ಪುನಶ್ಚೇತನಕ್ಕಾಗಿ ಮರಗಳಿಗೆ ಕೊಡಲಿ ಏಟು ಬೇಡ’ ವಿಷಯದ ಕುರಿತು ಆನ್‌ಲೈನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಈ ಯೋಜನೆ ಬಗ್ಗೆ ಆಕ್ಷೇಪವಿಲ್ಲ. ಆದರೆ ಇದನ್ನು ಅನುಷ್ಠಾನಗೊಳಿಸುತ್ತಿರುವ ಕ್ರಮ ಸರಿ ಇಲ್ಲ. ಪೈಪ್‌ವಾಲಾಗಳ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿದೆ. ಕೆರೆಯ ಸಮಗ್ರತೆಗೆ ಧಕ್ಕೆ ಬಾರದ ಹಾಗೆ ಯೋಜನೆ ಕೈಗೊಳ್ಳಬೇಕು. ಪುನಶ್ಚೇತನದ ಉದ್ದೇಶದಿಂದ ಮರಗಳ ಹನನ ಸಲ್ಲದು. ಇದರಿಂದ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ’ ಎಂದರು. 

‘ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕೆರೆಗಳ ಒತ್ತುವರಿ ನಡೆಯುತ್ತಿದೆ. ಜಲಮೂಲಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರ ವಿರುದ್ಧ ಯುವ ಸಮುದಾಯ ಧ್ವನಿ ಎತ್ತಬೇಕು. ಪರಿಸರ ರಕ್ಷಣೆಗೆ ಸಾರ್ವಜನಿಕರ ಭಾಗವಹಿಸುವಿಕೆಯೂ ಬಹಳ ಅಗತ್ಯ. ಕೆರೆಯ ಮೀಸಲು ಪ್ರದೇಶಗಳಲ್ಲಿ ಗಿಡ ನೆಡುವಂತೆ ಸಲಹೆ ನೀಡಿದ್ದೇವೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಏಜೆನ್ಸಿಗಳು ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್‌ಗಳಿಗೆ ಪರಿಸರ ಹಾಗೂ ಜೀವವೈವಿಧ್ಯದ ಬಗ್ಗೆ ಕಾಳಜಿಯೇ ಇಲ್ಲ. ನಾವೆಲ್ಲಾ ಪರಿಸರ ಚಿಂತನೆ ಮೈಗೂಡಿಸಿಕೊಳ್ಳುವುದು ತುಂಬಾ ಅವಶ್ಯ’ ಎಂದು ತಿಳಿಸಿದರು.  

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಎನ್‌.ನಂದಿನಿ, ‘ನಗರೀಕರಣ, ಜನಸಂಖ್ಯೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆರೆಗಳು ನಶಿಸಿಹೋಗುತ್ತಿವೆ. ಸಿಂಗನಾಯಕನಹಳ್ಳಿ ಕೆರೆಯು 400 ಎಕರೆ ಕೃಷಿ ಭೂಮಿಯಿಂದ ಆವೃತ್ತವಾಗಿದೆ. ಮಳೆ ನೀರು ಇದಕ್ಕೆ ಆಧಾರ. ಕೆಲ ಷರತ್ತುಗಳ ಮೇಲೆ ಕೆರೆಯನ್ನು ಪುನಶ್ಚೇತನಗೊಳಿಸಬೇಕು. ಕೆರೆಯ ನಡುವೆ ದ್ವೀಪ ನಿರ್ಮಿಸಿ ಆ ಮೂಲಕ ಜೀವ ಸಂಕುಲದ ಉಳಿವಿಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಿಂಗನಾಯಕನಹಳ್ಳಿ ಕೆರೆ ಪುನಃಶ್ಚೇತನಕ್ಕೆ 6,316 ಮರಗಳನ್ನು ಕಡಿಯಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು