ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ನಮ್ಮ ಕ್ಲಿನಿಕ್‌ ಸೇವೆಗೆ ಸಿದ್ಧ: ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ಸೇವೆ

ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಸೇವೆ: ಶೀಘ್ರ ಚಾಲನೆ
Last Updated 5 ಫೆಬ್ರುವರಿ 2023, 21:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್‌ಗಳು ನಿರ್ಮಾಣ ಗೊಂಡಿದ್ದು, ಶೀಘ್ರದಲ್ಲಿಯೇ ಸೇವೆ ಪ್ರಾರಂಭಿಸಲಿವೆ.

ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿಪುರ ವಾರ್ಡ್‌ನಲ್ಲಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್‌ನಲ್ಲಿ ಉದ್ಘಾಟನಾ ಸಮಾರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಏಕಕಾಲದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ 108 ಕ್ಲಿನಿಕ್‌ಗಳೂ ಕಾರ್ಯಾರಂಭಿಸಲಿವೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭಕ್ಕೆ ಸಜ್ಜಾಗಿವೆ. 2022ರ ಡಿ.14ರಂದು ಧಾರವಾಡದ ಬೈರದೇವರ ಕೊಪ್ಪದಲ್ಲಿ ನಮ್ಮ ಕ್ಲಿನಿಕ್‌ ಉದ್ಘಾಟಿಸುವ ಮೂಲಕ, ರಾಜ್ಯದಲ್ಲಿ ಏಕ ಕಾಲಕ್ಕೆ 100 ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದ್ದರು. ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ಗಳು, ಆರೋಗ್ಯ ಆರೈಕೆಯಲ್ಲಿ ಹೊಸ ಆಯಾಮ ಸೃಷ್ಟಿಸುತ್ತಿವೆ’ ಎಂದು ಹೇಳಿದ್ದಾರೆ.

‘ನಮ್ಮ ಕ್ಲಿನಿಕ್‌ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ನಗರ ಪ್ರದೇಶದ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಇದು ಸಂಜೀವಿನಿಯಾಗಲಿದೆ’ ಎಂದು ತಿಳಿಸಿದ್ದಾರೆ.

243 ಕ್ಲಿನಿಕ್: ‘ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದರಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 15ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯದಾದ್ಯಂತ ನಗರ ಪ್ರದೇಶಗಳಲ್ಲಿ 15 ಸಾವಿರದಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಮತ್ತು ಉಳಿದ ಜಿಲ್ಲೆಗಳಲ್ಲಿ 195 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಮಾ‌ಹಿತಿ ನೀಡಿದ್ದಾರೆ.

‘ನಮ್ಮ ಕ್ಲಿನಿಕ್‌ಗಳಲ್ಲಿ ಉತ್ತಮ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಇವು ಸಂಪರ್ಕ ಕಲ್ಪಿಸುತ್ತಿವೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗಲುವ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸಲಾಗುತ್ತಿದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ವಾರದಲ್ಲಿ 6 ದಿನ ಸೇವೆ

‘ನಮ್ಮ ಕ್ಲಿನಿಕ್‌ಗಳು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸಲಿವೆ. ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ, ಔಷಧ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ ಸೇರಿ ವಿವಿಧ ಕೊಠಡಿಗಳಿವೆ. ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT