ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಳ್ಳಲು ಬೇಕು ಇನ್ನೈದು ವರ್ಷ!

ನಮ್ಮ ಮೆಟ್ರೊ 2ನೇ ಹಂತ: ಕಾಮಗಾರಿ ಗಡುವು ಮತ್ತೆ ವಿಸ್ತರಿಸಿದ ಬಿಎಂಆರ್‌ಸಿಎಲ್
Last Updated 28 ಸೆಪ್ಟೆಂಬರ್ 2019, 20:31 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ಎರಡನೇ ಹಂತದ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸುವ ಗಡುವು ಮತ್ತೆ ವಿಸ್ತರಣೆಯಾಗಿದೆ. ಈ ಮಾರ್ಗಗಳೆಲ್ಲ ಪೂರ್ಣಗೊಂಡು ಮೆಟ್ರೊ ರೈಲುಗಳಲ್ಲಿ ನೀವು ಸಂಚರಿಸಬೇಕೆಂದರೆ ಇನ್ನೂ ಐದು ವರ್ಷ ಕಾಯಬೇಕು!

ಎರಡನೇ ಹಂತದ ವಿಸ್ತರಣೆಯ ಎಲ್ಲ ಕಾಮಗಾರಿಗಳು 2020ಕ್ಕೆ ಪೂರ್ಣಗೊಳ್ಳಲಿವೆ ಎಂದೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಆರಂಭದಲ್ಲಿ ಹೇಳಿತ್ತು. ಬಳಿಕ ಅನೇಕ ಬಾರಿ ಗಡುವನ್ನು ವಿಸ್ತರಿಸಿತ್ತು. ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಕೆಲವು ಮಾರ್ಗಗಳ ಗಡುವನ್ನು ಒಂದೂವರೆ ವರ್ಷದಿಂದ ಎರಡು ವರ್ಷಗಳವರೆಗೆ
ವಿಸ್ತರಿಸಲಾಗಿದೆ.

ವಿಮಾನ– ನಿಲ್ದಾಣ ಹಾಗೂ ಕೆ.ಆರ್‌.ಪುರ-ಸಿಲ್ಕ್‌ ಬೋರ್ಡ್‌ ಮಾರ್ಗ ( ಒಟ್ಟು 118 ಕಿ.ಮೀ.) 2024ಕ್ಕೆ ಪೂರ್ಣಗೊಳ್ಳಲಿದೆ ಎಂದು ನಿಗಮ ಹೇಳಿದೆ. ಇದಕ್ಕೆ ಮೊದಲು 2023ರ ವೇಳೆಗೆ ಈ ಮಾರ್ಗಗಳು ಪೂರ್ಣಗೊಳ್ಳಲಿವೆ ಎಂದು ನಿಗಮ ಹೇಳಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಗುತ್ತಿಗೆದಾರರ ಬದಲಾವಣೆ, ಚುನಾವಣಾ ನೀತಿ ಸಂಹಿತೆಯಂತಹ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ ಎಂದು ನಿಗಮದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

ವಿನ್ಯಾಸದಲ್ಲಿ ಬದಲಾವಣೆ:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗವಾರದಿಂದ ಆರ್‌.ಕೆ.ಹೆಗಡೆ ನಗರ ಮಾರ್ಗವಾಗಿ ಮೆಟ್ರೊ ಸಾಗುವಂತೆ ವಿನ್ಯಾಸ ರೂಪಿಸಲಾಗಿತ್ತು. ಈ ಭಾಗದಲ್ಲಿ ಗೇಲ್‌ ಸಂಸ್ಥೆಯ ಅನಿಲ ಕೊಳವೆಮಾರ್ಗ ಇರುವುದರಿಂದ ನಾಗವಾರದಿಂದ ಹೆಬ್ಬಾಳ ಮೂಲಕ ಸಾಗುವಂತೆ ಮಾರ್ಗದ ವಿನ್ಯಾಸ ಬದಲಿಸಲಾಯಿತು.

ಗೊಟ್ಟಿಗೆರೆ-ನಾಗವಾರ ಮಾರ್ಗದ ಸುರಂಗ ಕಾಮಗಾರಿಗೆ ಟೆಂಡರ್‌ ಕರೆದಿದ್ದರೂ ಅಂದಾಜು ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಉಲ್ಲೇಖಿಸಿದ್ದರಿಂದ ಮರು ಟೆಂಡರ್‌ ಕರೆಯಬೇಕಾಯಿತು. ಕೆ.ಆರ್‌.ಪುರ-ಸಿಲ್ಕ್‌ ಬೋರ್ಡ್‌ ಮಾರ್ಗದ ನಿರ್ಮಾಣದಲ್ಲೂ ಟೆಂಡರ್‌ ಪ್ರಕ್ರಿಯೆಯಲ್ಲಾದ ಸಮಸ್ಯೆಯಿಂದಾಗಿ ಮೊದಲ ಟೆಂಡರ್‌ ರದ್ದಾಗಿದೆ. ಇದೇ ಯೋಜನೆಯಲ್ಲಿ ಕೆ.ಆರ್‌.ಪುರದಲ್ಲಿ ಸಿಗ್ನಲ್‌ ರಹಿತ ಕಾರಿಡಾರ್‌ ನಿರ್ಮಿಸುವ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ವಿನ್ಯಾಸ ಬದಲಿಸಲು ಮತ್ತಷ್ಟು ಸಮಯ ಬೇಕಿದೆ. ಹಲವು ಮಾರ್ಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೂಡಾ ತಡವಾಗಿದೆ. ಇವೆಲ್ಲ ಕಾರಣಗಳಿಂದ ಗಡುವು ವಿಸ್ತರಣೆ ಮಾಡಲಾಗಿದೆ.

ನಾಯಂಡಹಳ್ಳಿ-ಕೆಂಗೇರಿ ಹಾಗೂ ಯಲಚೇನಹಳ್ಳಿ-ಅಂಜನಾಪುರ ಮಾರ್ಗದ ಕಾಮಗಾರಿ 2020 ರ ಕೊನೆಯಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಯೋಜನೆಯಲ್ಲಿ ಈ ಎರಡು ಮಾರ್ಗಗಳಲ್ಲೇ ಮೊದಲು ರೈಲು ಸಂಚಾರ ಆರಂಭವಾಗಲಿದೆ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT