ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಎಸ್ಕಲೇಟರ್‌ನಿಂದ ಬಿದ್ದ ಮಗು ಸಾವು

Last Updated 28 ಜನವರಿ 2019, 18:27 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀರಾಂಪುರ ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಹಾಸಿನಿ ಎಂಬ ಮಗು, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಸುಕಿನಲ್ಲಿ ಮೃತಪಟ್ಟಿದೆ.

ಭಾನುವಾರ ರಾತ್ರಿ 8.30 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಮಗುವಿನ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಹೋಗಿತ್ತು. ಆರಂಭದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

‘ಘಟನೆ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಗೆ ದೂರು ನೀಡಿರುವ ಮೃತ ಮಗುವಿನ ಅಜ್ಜ ಬಾಲಕೃಷ್ಣ, ‘ಬೆಂಗ
ಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ನಿರ್ಲಕ್ಷ್ಯದಿಂದ ಮೊಮ್ಮಗಳು ಮೃತಪಟ್ಟಿದ್ದಾಳೆ’ ಎಂದು ಆರೋಪಿಸಿದ್ದಾರೆ. ಅದರನ್ವಯ ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಆರೋಪದಡಿ ಬಿಎಂಆರ್‌ಸಿಎಲ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ’ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರೀರಾಂಪುರ ಮೆಟ್ರೊ ನಿಲ್ದಾಣದಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು, ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ಮಗುವಿನ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ’ ಎಂದರು.

ಮಗು ಕರೆದೊಯ್ದಿದ್ದ ಅಜ್ಜ– ಅಜ್ಜಿ: ಮೃತ ಹಾಸಿನಿ, ಶ್ರೀರಾಂಪುರ ನಿವಾಸಿಗಳಾದ ಜಯಚಂದ್ರ ಹಾಗೂ ವಾಣಿ ದಂಪ
ತಿಯ ಮಗು. ಅವರಿಗೆ ಇನ್ನೊಬ್ಬ ಮೂರು ವರ್ಷದ ಮಗಳಿದ್ದಾಳೆ. ಶಾಲೆಯೊಂದರಲ್ಲಿ ಸಹಾಯಕರಾಗಿ ಜಯಚಂದ್ರ ಕೆಲಸ ಮಾಡುತ್ತಿದ್ದಾರೆ. ವಾಣಿ, ಗೃಹಿಣಿ.

‘ಭಾನುವಾರ ರಾತ್ರಿ ತಾಯಿ ಮನೆಯಲ್ಲಿದ್ದರು. ಸಂಬಂಧಿಕರ ಮನೆಗೆ ಹೋಗಿಬರುವುದಾಗಿ ಹೇಳಿದ್ದ ಅಜ್ಜ ಬಾಲಕೃಷ್ಣ ಹಾಗೂ ಅಜ್ಜಿ ಕುಮಾರಿ, ಮಗುವನ್ನು ಎತ್ತಿಕೊಂಡು ಶ್ರೀರಾಂಪುರ ಮೆಟ್ರೊ ನಿಲ್ದಾಣಕ್ಕೆ ಹೋಗಿದ್ದರು. ಅವರ ಜೊತೆ ಸಂಬಂಧಿಕ ಮಹಿಳೆ ಸಹ ಇದ್ದರು’ ಎಂದು ಮಗುವಿನ ಸಂಬಂಧಿಕರೊಬ್ಬರು ಹೇಳಿದರು.

‘ಮಗು ಬಿದ್ದ ವಿಷಯ ತಿಳಿದು ನಿಲ್ದಾಣಕ್ಕೆ ಹೋದೆವು. ಅಷ್ಟರಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋಮವಾರ ಮಧ್ಯಾಹ್ನ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ಶವ ಕೊಟ್ಟಿದ್ದಾರೆ’ ಎಂದರು.

ಅಜ್ಜನ ಕೈಯಿಂದ ಜಾರಿದ್ದ ಮಗು: ಎಸ್ಕಲೇಟರ್‌ನಿಂದ ಮಗು ರಸ್ತೆಗೆ ಬಿದ್ದ ದೃಶ್ಯ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾ
ದಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

‘ಅಜ್ಜ–ಅಜ್ಜಿ ಹಾಗೂ ಸಂಬಂಧಿಕ ಮಹಿಳೆ, ಮಗು ಜೊತೆಯಲ್ಲಿ ನಿಲ್ದಾಣಕ್ಕೆ ಬಂದಿದ್ದರು. ಅಜ್ಜ ಬಾಲಕೃಷ್ಣ ಅವರು ಮಗುವನ್ನು ಎತ್ತಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಎಸ್ಕಲೇಟರ್‌ ಹತ್ತುವ ವೇಳೆ ಅಜ್ಜನ ಕೈಯಿಂದ ಜಾರಿದ ಮಗು, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ನಡುವಿನ ಕಿಂಡಿಯ ಮೂಲಕ ನಿಲ್ದಾಣದಿಂದ 30 ಅಡಿ ಕೆಳಗಿದ್ದ ರಸ್ತೆಯ ಪಾದಚಾರಿ ಮಾರ್ಗಕ್ಕೆ ಬಿದ್ದಿತ್ತು. ಅದನ್ನು ಗಮನಿಸಿದ್ದ ದಾರಿಹೋಕರು, ಮಗು ಎತ್ತಿಕೊಂಡಿದ್ದರು. ತಲೆಯಿಂದ ರಕ್ತ ಬರುತ್ತಿದ್ದದ್ದನ್ನು ಕಂಡು, ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಈ ಸ್ಥಿತಿ ಬೇರೆ ಯಾರಿಗೂ ಬಾರದಿರಲಿ’

‘ಮನೆಯಿಂದ ಹೋಗುವಾಗ ನನ್ನ ಮಗು ನಗುತ್ತಾ ಹೋಗಿತ್ತು. ಈಗ ಜೀವವನ್ನೇ ಕಳೆದುಕೊಂಡಿದೆ ಎಂದರೆ ನಂಬಲಾಗುತ್ತಿಲ್ಲ. ಇಂಥ ಸ್ಥಿತಿ ಬೇರೆ ಯಾವ ಮಗುವಿಗೂ ಬರುವುದು ಬೇಡ’ ಎಂದು ಹಾಸಿನಿ ತಾಯಿ ವಾಣಿ ಮಗುವನ್ನು ನೆನೆದು ಕಣ್ಣೀರಿಟ್ಟರು.

ಆಸ್ಪತ್ರೆ ಎದುರು ಸುದ್ದಿಗಾರರ ಜೊತೆ ಮಾತನಾಡಿದ ವಾಣಿ, ‘ಶ್ರೀರಾಂಪುರ ಮೆಟ್ರೊ ನಿಲ್ದಾಣದಲ್ಲಿ ಯಾವುದೇ ಸುರಕ್ಷತೆ ಇಲ್ಲ. ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ನಡುವಿನ ಜಾಗವನ್ನು ಖಾಲಿ ಬಿಟ್ಟಿದ್ದಾರೆ. ಮೇಲಿಂದ ನೋಡಿದರೆ ಕೆಳಗಿನ ರಸ್ತೆ ಕಾಣಿಸುತ್ತದೆ. ಮಕ್ಕಳಷ್ಟೇ ಅಲ್ಲದೆ, ದೊಡ್ಡವರು ಬಿದ್ದರೂ ಪ್ರಾಣ ಕಳೆದುಕೊಳ್ಳುತ್ತಾರೆ. ಬಿಎಂಆರ್‌ಸಿಎಲ್ ನಿರ್ಲಕ್ಷ್ಯದಿಂದಲೇ ನನ್ನ ಮಗು ಮೃತಪಟ್ಟಿದೆ’ ಎಂದು ದೂರಿದರು.

ಕಿಂಡಿ ಮುಚ್ಚಲು ಕ್ರಮ

ಮಗು ಎಸ್ಕಲೇಟರ್‌ನಿಂದ 30 ಅಡಿ ಕೆಳಗಿನ ರಸ್ತೆಗೆ ಬೀಳುವುದಕ್ಕೆ ಎಸ್ಕಲೇಟರ್‌ ಹಾಗೂ ಮೆಟ್ಟಿಲುಗಳ ನಡುವೆ ಸುಮಾರು 2 ಅಡಿಗಳಷ್ಟು ಅಗಲದ ಕಿಂಡಿ ಬಿಟ್ಟಿರುವುದು ಕೂಡಾ ಕಾರಣ ಎಂಬ ಆರೋಪ ಕೇಳಿಬಂದ ಬಳಿಕ ಎಚ್ಚೆತ್ತ ಬಿಎಂಆರ್‌ಸಿಎಲ್‌, ಮೆಟ್ರೊ ನಿಲ್ದಾಣಗಳಲ್ಲಿ ಎಸ್ಕಲೇಟರ್‌ ಪಕ್ಕದಲ್ಲಿ ಕಿಂಡಿಗಳನ್ನು ಮುಚ್ಚಲು ನಿರ್ಧರಿಸಿದೆ.

‘ದುರ್ಘಟನೆ ನಡೆದು ಹೋಗಿದೆ. ಸರಿ ತಪ್ಪುಗಳ ಬಗ್ಗೆ ಚರ್ಚಿಸುತ್ತಾ ಕುಳಿತುಕೊಳ್ಳುವ ಸಮಯ ಇದಲ್ಲ. ಮುಂದೆ ಇಂತಹ ಅವಘಡಗಳು ನಡೆಯದಂತೆ ತಡೆಯುವುದಕ್ಕೆ ನಮ್ಮ ಆದ್ಯತೆ. ಮೆಟ್ರೊ ನಿಲ್ದಾಣಗಳಲ್ಲಿ ಎಲ್ಲೆಲ್ಲಿ ಎಸ್ಕಲೇಟರ್‌ಗಳ ಪಕ್ಕ ಕಿಂಡಿಗಳಿವೆಯೋ ಅವುಗಳಿಗೆ ಬಲೆಗಳನ್ನು ಹೊದಿಸಿ ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದ್ದೇವೆ. ಇಂತಹ ಸಮಸ್ಯೆ ಉದ್ಭವಿಸದಂತೆ ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

ಇದೊಂದು ಆಕಸ್ಮಿಕ ಘಟನೆ. ಇದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮದವರ ಲೋಪ ಕಾರಣವಲ್ಲ. ಮೆಟ್ರೊದಲ್ಲಿ ಸಂಚರಿಸುವಾಗ ಮಕ್ಕಳ ಬಗ್ಗೆ ಪೋಷಕರು ಕೂಡಾ ಕಾಳಜಿ ವಹಿಸಬೇಕು
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT