ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಚರಣೆ ಆರಂಭಿಸಿದ ದೇಸಿ ಟಿಬಿಎಂ: ಚೆನ್ನೈನಲ್ಲಿ ನಿರ್ಮಾಣವಾಗಿರುವ ಯಂತ್ರ

Last Updated 13 ಮಾರ್ಚ್ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಎರಡನೇ ಹಂತದ ಸುರಂಗ ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದ್ದು, ಇದೇ ಮೊದಲ ಬಾರಿಗೆ ದೇಸಿ ಟಿಬಿಎಂ ಒಂದು ಕಾರ್ಯಾಚರಣೆ ಆರಂಭಿಸಿದೆ. ವೆಲ್ಲಾರ–ಲ್ಯಾಂಗ್‌ಫೋರ್ಡ್‌ ನಡುವೆ ಈ ಯಂತ್ರ ಕೆಲಸ ಮಾಡುತ್ತಿದೆ.

ತಮಿಳುನಾಡಿನ ಚೆನ್ನೈನ ಕಾರ್ಖಾನೆಯಲ್ಲಿ ಈ ಟಿಬಿಎಂ ನಿರ್ಮಾಣವಾಗಿದೆ. ಜರ್ಮನ್ ಮೂಲದ ಹೆರೆನ್‌ಕ್ನೆಚ್ ಕಂಪನಿಯು ಚೆನ್ನೈನಲ್ಲಿ ಈ ಯಂತ್ರವನ್ನು ನಿರ್ಮಾಣ ಮಾಡಿದೆ. ಯಂತ್ರದ ಬಹುತೇಕ ಬಿಡಿಭಾಗಗಳನ್ನು ಸ್ಥಳೀಯವಾಗಿಯೇ ನಿರ್ಮಿಸಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿಯೇ ಈ ಯಂತ್ರದ ಬಿಡಿಭಾಗಗಳನ್ನು ನಗರಕ್ಕೆ ತರಲಾಗಿತ್ತು. ಈ ಟಿಬಿಎಂಗೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ.

650 ಮೀ. ಉದ್ದ: ವೆಲ್ಲಾರ–ಲ್ಯಾಂಗ್‌ಫೋರ್ಡ್‌ ನಡುವೆ 650 ಮೀಟರ್‌ ಉದ್ದದ ಸುರಂಗವನ್ನು ಈ ಯಂತ್ರ ಕೊರೆಯಲಿದೆ. ನಿತ್ಯ ಸರಾಸರಿ 6 ಮೀಟರ್‌ ಸುರಂಗ ಕೊರೆಯುವ ಗುರಿಯನ್ನು ಹೊಂದಲಾಗಿದೆ. ಈ ಮಾರ್ಗದ ನಿರ್ಮಾಣ ಗುತ್ತಿಗೆಯನ್ನು ಆಫ್ಕನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿ ಪಡೆದಿದೆ.

ಡೇರಿ ವೃತ್ತದಿಂದ ನಾಗವಾರದವರೆಗೆ 13.85 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ಒಟ್ಟು 9 ಟಿಬಿಎಂಗಳು ಕೆಲಸ ಮಾಡಲಿವೆ. ಈ ಪೈಕಿ ಈಗಾಗಲೇ ನಾಲ್ಕು ಯಂತ್ರಗಳು ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ಹಂತಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ.

ಟ್ಯಾನರಿ ರಸ್ತೆ-ನಾಗವಾರ ನಡುವೆ ಸುರಂಗ ಕೊರೆಯಲು ನಿಯೋಜಿಸಲಾಗುವ ಟಿಬಿಎಂ ತುಂಗಾ ಮತ್ತು ಭದ್ರಾ ಕೂಡ ಚೆನ್ನೈನಲ್ಲೇ ತಯಾರಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT