ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಮುಟ್ಟದ ‘ನಮ್ಮ ಮೆಟ್ರೊ’: 2020ರವರೆಗೆ ಶೇ 27ರಷ್ಟು ಗುರಿ ಸಾಧನೆ ಮಾತ್ರ

ಪ್ರಯಾಣಿಕರ ಸಂಖ್ಯೆ: 2020ರವರೆಗೆ ಶೇ 27ರಷ್ಟು ಗುರಿ ಸಾಧನೆ ಮಾತ್ರ
Last Updated 29 ನವೆಂಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ‘ನಮ್ಮ ಮೆಟ್ರೊ’ ರೈಲುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರನ್ನು ಸೆಳೆಯುವಲ್ಲಿ ಸಫಲವಾಗಿಲ್ಲ. 2019–20ರ ಆರ್ಥಿಕ ವರ್ಷದವರೆಗೆ ಉದ್ದೇಶಿತ ಗುರಿಯಲ್ಲಿ ಶೇ 27ರಷ್ಟು ಮಾತ್ರ ಸಾಧನೆ ಮಾಡುವಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಯಶಸ್ವಿಯಾಗಿದೆ.

ಸಾರ್ವಜನಿಕ ಸಾರಿಗೆಯ ಅಂತರರಾಷ್ಟ್ರೀಯ ಸಂಸ್ಥೆ ‘ಯುಐಟಿ‍ಪಿ’ಯು ಭಾರತದ ಮೆಟ್ರೊ ಯೋಜನೆಗಳನ್ನು ಅಧ್ಯಯನ ಮಾಡಿದ್ದು, ಇದರ ಮುಖ್ಯಾಂಶಗಳನ್ನು ಜಗತ್ತಿನ ಇತರ ರಾಷ್ಟ್ರಗಳ ಮೆಟ್ರೊ ಯೊಜನೆಗಳ ಜೊತೆ ಹೋಲಿಸಿ ವಿಶ್ಲೇಷಣೆ ನಡೆಸಿದೆ. ಇದರ ಫಲಿತಾಂಶವನ್ನು ಆಧರಿಸಿದ ವರದಿಯನ್ನು 2021ರ ನವೆಂಬರ್‌ನಲ್ಲಿ ಪ್ರಕಟಿಸಿದೆ.

ಜಗತ್ತಿನ ಇತರ ರಾಷ್ಟ್ರಗಳ ಮೆಟ್ರೊ ಯೋಜನೆಗಳಿಗೆ ಹೋಲಿಸಿದರೆ ಭಾರತದ ಪ್ರಮುಖ ನಗರಗಳಲ್ಲಿ ಪ್ರತಿ ಕಿ.ಮೀ ಮೆಟ್ರೊ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆಯು ಕಳಪೆಯಾಗೇನೂ ಇಲ್ಲ. ಆದರೆ, ಭಾರತದ ಮೆಟ್ರೊ ಯೋಜನೆಗಳು ಆರಂಭವಾದಾಗ ಇಟ್ಟುಕೊಂಡಿದ್ದಷ್ಟು ನಿರೀಕ್ಷೆಯ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿಲ್ಲ. ಗುರಿ ಹಾಗೂ ವಾಸ್ತವಗಳನ್ನು ಹೋಲಿಸಿ ನೋಡಿದಾಗ ಪ್ರಯಾಣಿಕರ ಸಂಖ್ಯೆಯು ನಿಗದಿತ ಗುರಿಗಿಂತ ತೀರಾ ಕಡಿಮೆ ಇದೆ ಎಂಬ ಅಂಶವನ್ನೂ ಈ ಅಧ್ಯಯನವು ತೋರಿಸಿದೆ. ದೆಹಲಿ ಮೆಟ್ರೊ ಯೋಜನೆಯು 2018ರವರೆಗೆ ಉದ್ದೇಶಿತ ಪ್ರಮಾಣಿಕರ ಸಂಖ್ಯೆಯಲ್ಲಿ ಶೇ 38ರಷ್ಟನ್ನು ಸಾಧಿಸುವಲ್ಲಿ ಸಫಲವಾಗಿತ್ತು. ಆದರೆ, 2020ಕ್ಕೆ ಈ ಪ್ರಮಾಣವು ಶೇ 79ಕ್ಕೆ ಹೆಚ್ಚಳವಾಗಿದೆ. ಪ್ರಯಾಣಿಕರನ್ನು ಎಣಿಸುವ ಕ್ರಮವನ್ನೂ ಬದಲಾವಣೆ ಮಾಡಿರುವುದೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಮುಂಬೈ ಮೆಟ್ರೊ 2020ರಲ್ಲೇ ಶೇ 74ರಷ್ಟು ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, 2019ರಲ್ಲಿ ಪ್ರಯಾಣಿಕರ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತ್ತು. ಚೆನ್ನೈ ಮೆಟ್ರೊ ಶೇ 13ರಷ್ಟು ಗುರಿ ಸಾಧನೆ ಮಾಡುವಲ್ಲಿ ಮಾತ್ರ ಶಕ್ತವಾಗಿದೆ.

ದೇಶದ ಇತರ ಮೆಟ್ರೊ ಯೋಜನೆಗಳ ಪೈಕಿ 22.9 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿರುವ ಲಖನೌ ಶೇ 8.6ರಷ್ಟು, 25 ಕಿ.ಮೀ ಉದ್ದದ ಮೆಟ್ರೊ ಮಾರ್ಗವನ್ನು ಹೊಂದಿರುವ ಕೊಚ್ಚಿ ಶೇ 14.5ರಷ್ಟು, 67 ಕಿ.ಮೀ ಮೆಟ್ರೊ ಮಾರ್ಗವನ್ನು ಹೊಂದಿರುವ ಹೈದರಾಬಾದ್‌

ಶೇ 15.2ರಷ್ಟು, 12 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿರುವ ಜೈಪುರ ಮೆಟ್ರೊ ಶೇ 7.6ರಷ್ಟು ಮಾತ್ರ ಗುರಿ ಸಾಧನೆ ಮಾಡಿವೆ.

ಮೂರು ವರ್ಷಗಳಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚಳವನ್ನು ವಿಶ್ಲೇಷಣೆ ನಡೆಸುವಾಗ ಕೋವಿಡ್‌ ಸಾಂಕ್ರಾಮಿಕಕ್ಕೆ ಮುನ್ನ ಇದ್ದ ಆರ್ಥಿಕ ಚಟುವಟಿಕೆ, ಸೇವಾ ವಲಯ ಹಾಗೂ ಸಾರಿಗೆ ಬೇಡಿಕೆಗಳು ಪೂರ್ಣ ಪ್ರಮಾಣದಲ್ಲಿದ್ದಂತೆ ಪರಿಗಣಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

2011ರಲ್ಲಿ ಮೂರು ಪ್ರಮುಖ ನಗರಗಳಲ್ಲಿ 222 ಕಿ.ಮೀ.ಗಳಷ್ಟು ಮೆಟ್ರೊ ಮಾರ್ಗಗಳಿದ್ದವು. 2021ರ ನವೆಂಬರ್‌ ವೇಳೆಗೆ ಮೆಟ್ರೊ ಜಾಲ 13 ನಗರಗಳಿಗೆ ವಿಸ್ತರಣೆಯಾಗಿದ್ದು, ಮಾರ್ಗದ ಒಟ್ಟು ಉದ್ದ 697 ಕಿ.ಮಿ.ಗೆ ಹೆಚ್ಚಳವಾಗಿದೆ. ಇನ್ನೂ 1,032 ಕಿ.ಮೀ ಉದ್ದದ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಇವುಗಳು ನಿರ್ಮಾಣ ಹಂತದಲ್ಲಿವೆ. ಇನ್ನೂ ಐದು ವರ್ಷಗಳಲ್ಲಿ ಮೆಟ್ರೊ ರೈಲು ಯೊಜನೆಗಳಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಇತರ ಹಣಕಾಸು ಸಂಸ್ಥೆಗಳ ಬಂಡವಾಳ ಸೇರಿ ಒಟ್ಟು ₹ 3 ಲಕ್ಷ ಕೋಟಿಗಳಷ್ಟು ಹೂಡಿಕೆ ಮಾಡಲು ಮಂಜೂರಾತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT