ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ರೈಲು | ನಿತ್ಯ ನೂಕುನುಗ್ಗಲು: ಹೊಸ ಕೋಚ್‌ಗಳು ಬರಲು 10 ತಿಂಗಳು ಕಾಯಬೇಕು

Published : 16 ಆಗಸ್ಟ್ 2024, 0:15 IST
Last Updated : 16 ಆಗಸ್ಟ್ 2024, 0:15 IST
ಫಾಲೋ ಮಾಡಿ
Comments

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ  ದಿನೇ ದಿನೇ ಏರುತ್ತಿದೆ. ಆದರೆ, ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ ಆಗದಿರುವುದರಿಂದ ನಿತ್ಯ ನೂಕುನುಗ್ಗಲು ಏರ್ಪಟ್ಟಿದೆ. ಹೆಚ್ಚುವರಿ ರೈಲುಗಳ ಸೇರ್ಪಡೆಗೆ ಇನ್ನೂ 10 ತಿಂಗಳು ಕಾಯಬೇಕಿದೆ.

‘ನಮ್ಮ ಮೆಟ್ರೊ’ದಲ್ಲಿ ಆರಂಭದಲ್ಲಿ ತಿಂಗಳಿಗೆ 5 ಲಕ್ಷ ಜನ ಪ್ರಯಾಣಿಸುತ್ತಿದ್ದರು. 2020ರ ಹೊತ್ತಿಗೆ ನಿತ್ಯ ಪ್ರಯಾಣಿಕರ ಸಂಖ್ಯೆ ಸರಾಸರಿ 1.28 ಲಕ್ಷಕ್ಕೆ ಏರಿತ್ತು. 2022ರಲ್ಲಿ ಸರಾಸರಿ 4.32 ಲಕ್ಷ, 2023ರಲ್ಲಿ ಸರಾಸರಿ 6.04 ಲಕ್ಷಕ್ಕೆ ಏರಿತ್ತು. ವಾಹನದಟ್ಟಣೆ ಹೆಚ್ಚಿದಂತೆ ಪ್ರಯಾಣಕ್ಕೆ ಮೆಟ್ರೊ ರೈಲು  ಸೇವೆ ಅವಲಂಬಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಮೆಟ್ರೊ ರೈಲುಗಳ ಸಂಖ್ಯೆ ಜಾಸ್ತಿಯಾಗಿಲ್ಲ.

‘ಜನದಟ್ಟಣೆ ಆಧರಿಸಿ ಬೆಳಿಗ್ಗೆ, ಸಂಜೆ ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ ಕಡೆಗೆ ಮೆಟ್ರೊ ರೈಲುಗಳ ಸಂಖ್ಯೆ ಹೆಚ್ಚಿಸಿದ್ದಾರೆ. ಮೈಸೂರು ರಸ್ತೆಯಿಂದ ಪ್ರಯಾಣಿಸುವವರಿಗೆ ಇದರ ಪ್ರಯೋಜನವಾಗಿಲ್ಲ. ಒಂದು ಮೆಟ್ರೊ ತಪ್ಪಿದರೆ ಇನ್ನೊಂದಕ್ಕೆ 10 ನಿಮಿಷ ಕಾಯಬೇಕು. ಪ್ರಯಾಣಿಕರ ದಟ್ಟಣೆ ಆಧರಿಸಿ ಚಲ್ಲಘಟ್ಟ ಕಡೆಗೂ 4– 5 ನಿಮಿಷಕ್ಕೊಂದು ಮೆಟ್ರೊ ರೈಲು ಸೇವೆ ಕಲ್ಪಿಸಬೇಕು’ ಎಂದು ಪ್ರಯಾಣಿಕರಾದ ವಾಣಿ ಅವಿನಾಶ್‌ ಆಗ್ರಹಿಸುತ್ತಾರೆ.

‘ನೇರಳೆ ಮಾರ್ಗವು ವೈಟ್‌ಫೀಲ್ಡ್‌ವರೆಗೆ ವಿಸ್ತರಣೆಯಾದ ಮೇಲೆ ಪ್ರಯಾಣಿಕರ ಸಂಖ್ಯೆ ಏರಿದೆ. ಬುಧವಾರದಂದುಹತ್ತಲೂ ಜಾಗವಿಲ್ಲದೇ ಎರಡು ರೈಲು ಸಾಗುವವರೆಗೆ ಕಾಯಬೇಕಾಯಿತು. ಮೂರನೇ ಮೆಟ್ರೊಗೆ ಹೇಗೋ ಹತ್ತಿಕೊಂಡೆ’ ಎಂದು ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದರು.

‘ಕಡಿಮೆ ರೈಲಿನಲ್ಲಿ ಹೆಚ್ಚು ಜನರನ್ನು ಒಯ್ಯುವ ಮೂಲಕ ಅಧಿಕ ಲಾಭ ಮಾಡುವ ಉದ್ದೇಶ ಬಿಎಂಆರ್‌ಸಿಎಲ್‌ಗೆ ಇದೆಯೋ ಏನೋ ಗೊತ್ತಿಲ್ಲ. ಅಂಥ ಉದ್ದೇಶವಿದ್ದರೆ ಅದನ್ನು ಕೈಬಿಟ್ಟು ಪ್ರಯಾಣಿಕರ ಹಿತಕ್ಕಾಗಿ ಮೆಟ್ರೊ ರೈಲುಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಕೋಚ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾ ರೈಲ್ವೆ ರೋಲಿಂಗ್ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ಪಡೆದಿದ್ದು, ಕೋಚ್‌ಗಳನ್ನು ಪೂರೈಸುತ್ತಿತ್ತು. ಆ ನಂತರ ಭಾರತದಲ್ಲಿಯೇ ಕೋಚ್‌ ತಯಾರಿಸಲು ಹೈದರಾಬಾದ್‌ನಲ್ಲಿ ಜಮೀನು ನೀಡಲು ಸಂಸ್ಥೆ ಕೋರಿತ್ತು. ಜಮೀನು ಒದಗಿಸಲು ಭಾರತ ಸರ್ಕಾರ ಹಿಂದೇಟು ಹಾಕಿತ್ತು. ಆನಂತರ ಕೋಚ್‌ ತಯಾರಿಸಲು ಕೋಲ್ಕತದ ಟಿಟಾಗರ್‌ ರೈಲ್ವೆ ಸಿಸ್ಟಂ ಲಿಮಿಟೆಡ್‌ಗೆ (ಟಿಆರ್‌ಎಸ್‌ಎಲ್‌) ಸಿಆರ್‌ಆರ್‌ಸಿ ಉಪ ಗುತ್ತಿಗೆ ನೀಡಿತ್ತು. ಈಗ ಟಿಟಾಗರ್‌ನಲ್ಲಿ ಕೋಚ್‌ಗಳು ತಯಾರಾಗುತ್ತಿವೆ. ಈ ಎಲ್ಲ ಪ್ರಕ್ರಿಯೆಗಳಿಂದಾಗಿ ಕೋಚ್‌ಗಳು ಪೂರೈಕೆ ಆಗುವುದು ಎರಡು ವರ್ಷ ತಡವಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ಗೆ ಹೊಸ ಕೋಚ್‌ ಲಭ್ಯ: ಮಹೇಶ್ವರ ರಾವ್
‘ನಮ್ಮ ಮೆಟ್ರೊ’ ಕೋಚ್‌ಗಳ (ರೈಲು) ಪೂರೈಕೆಗೆ ಹಿಂದೆಯೇ ಆದೇಶ ನೀಡಲಾಗಿದೆ. 21 ಕೋಚ್‌ಗಳು ಪೂರೈಕೆಯಾಗಲಿವೆ. 2025ರ ಜೂನ್‌ ಒಳಗೆ 10 ಕೋಚ್‌ಗಳು ಬರಲಿವೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ತಿಳಿಸಿದರು. ಡಿಸೆಂಬರ್‌ನಲ್ಲಿ ಆರ್‌.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದ್ದು ಅದಕ್ಕಾಗಿ ಡಿಸೆಂಬರ್‌ ಒಳಗೆ ಎಂಟು ಕೋಚ್‌ಪೂರೈಕೆ ಆಗಲಿದೆ. ಬಳಿಕ ಆರು ಕೋಚ್‌ಗಳು ಪೂರೈಕೆಯಾಗಲಿವೆ ಎಂದು ಮಾಹಿತಿ ನೀಡಿದರು. ಕಾಳೇನ ಅಗ್ರಹಾರ–ನಾಗವಾರ ಮಧ್ಯೆ ಗುಲಾಬಿ ಮಾರ್ಗ 2025ರಲ್ಲಿ ಹಾಗೂ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌–ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ರೈಲು ಸಂಚಾರ 2026ರಲ್ಲಿ ಆರಂಭಗೊಳ್ಳಲಿದೆ. ಅದಕ್ಕೆ ಕೋಚ್‌ಗಳನ್ನು ಪೂರೈಸಲು ಬೆಮೆಲ್‌ ಗುತ್ತಿಗೆ ಪಡೆದಿದೆ. ಅಲ್ಲಿಂದ ಸಕಾಲದಲ್ಲಿ ಪೂರೈಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಕಿ ಅಂಶ
32 ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲುಗಳು 172 ನೇರಳೆ ಮಾರ್ಗದಲ್ಲಿ ಪ್ರತಿದಿನದ ಟ್ರಿಪ್‌ಗಳು 2 ತುರ್ತು ಸಂದರ್ಭದಲ್ಲಿ ಬಳಕೆಗೆ ಕಾಯ್ದಿರಿಸಿದ ರೈಲುಗಳು 12 ನೇರಳೆ ಮಾರ್ಗಕ್ಕೆ ಇನ್ನೂ ಬೇಕಿರುವ ರೈಲುಗಳು –––––––– 22 ಹಸಿರು ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲುಗಳು 160  ಹಸಿರು ಮಾರ್ಗದಲ್ಲಿ ಪ್ರತಿದಿನದ ಟ್ರಿಪ್‌ಗಳು 1 ತುರ್ತು ಸಂದರ್ಭದಲ್ಲಿ ಬಳಕೆಗೆ ಕಾಯ್ದಿರಿಸಿದ ರೈಲು 9 ಹಸಿರು ಮಾರ್ಗಕ್ಕೆ ಪೂರೈಕೆಯಾಗಬೇಕಿರುವ ರೈಲುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT