ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪತ್ತು ಗಮನಿಸಿ ಪತ್ನಿ ಕೂಗಿದರು, ಅಷ್ಟರಲ್ಲಿ..’: ಅವಘಡ ನೆನೆದು ಕಣ್ಣೀರಿಟ್ಟ ಪತಿ

ಇಲ್ಲಿ ಬಂದು ಸಾಯ್ಲಿ, ಕೋಟಿ ಕೊಡ್ತೇವೆ: ಸಂಬಂಧಿಕರ ಆಕ್ರೋಶ
Last Updated 10 ಜನವರಿ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಷಣಮಾತ್ರದಲ್ಲಿ ಘಟನೆ ಆಗಿ ಹೋಯಿತು. ಎಷ್ಟು ಹಣ ಕೊಟ್ಟರೂ ಏನೇ ಮಾಡಿದರೂ ಪತ್ನಿ–ಮಗ ವಾಪಸು ಬರುವುದಿಲ್ಲ. ಇಂಥ ಘಟನೆ ಮರುಕಳಿಸಬಾರದು’ ಎಂದು ಲೋಹಿತ್‌ಕುಮಾರ್ ಸುಲಾಖೆ ಹೇಳಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಂದಿನಂತೆ ಮಕ್ಕಳು ಹಾಗೂ ಪತ್ನಿ ಜೊತೆ ಹೊರಟಿದ್ದೆ. ಅವಘಡ ಸಂಭವಿಸಿದ್ದ ಜಾಗದ ಸಮೀಪಕ್ಕೆ ಬಂದಾಗ, ಎದುರುಗಡೆ ಬಸ್ ಹೊರಟಿತ್ತು. ಅದರ ಹಿಂದೆಯೇ ಬೈಕ್‌ವೊಂದು ತೆರಳುತ್ತಿತ್ತು. ನಿಧಾನವಾಗಿ ಬೆಂಡಾಗುತ್ತಿದ್ದ ಕಬ್ಬಿಣದ ಚೌಕಟ್ಟು ನೋಡಿದ್ದ ಆ ಸವಾರ, ಬೈಕ್ ಬಲಕ್ಕೆ ಬಾಗಿಸಿ ಚಲಾಯಿಸಿ ಮುಂದಕ್ಕೆ ಹೋದರು’ ಎಂದರು.

‘ಅದೇ ಬೈಕ್ ಹಿಂದೆಯೇ ನಾನು ಹೊರಟಿದ್ದೆ. ಕಬ್ಬಿಣದ ಚೌಕಟ್ಟು ಗಮನಿಸಿದ್ದ ಪತ್ನಿ, ಜೋರಾಗಿ ಕೂಗಾಡಲಾರಂಭಿಸಿದ್ದರು. ತಲೆ ಎತ್ತಿ ನೋಡುವಷ್ಟರಲ್ಲೇ ಕಬ್ಬಿಣದ ಚೌಕಟ್ಟು ಬೈಕ್ ಮೇಲೆ ಬಿತ್ತು. ಪತ್ನಿ–ಮಗು ಕಳೆದುಕೊಂಡೆ’ ಎಂದು ಲೋಹಿತ್‌ಕುಮಾರ್ ಕಣ್ಣೀರಿಟ್ಟು ಮೌನವಾದರು.

‘ಜನರ ಜೀವಕ್ಕೆ ಬೆಲೆಯೇ ಇಲ್ಲವೇ?’
‘ಬೆಂಗಳೂರಿನಲ್ಲಿ ಸುತ್ತಾಡುವುದೇ ಕಷ್ಟ ಆಗಿದೆ. ಎರಡು ತಿಂಗಳಿನಿಂದ ಪಿಲ್ಲರ್ ನಿರ್ಮಾಣ ಕೆಲಸ ನಡೆದಿದೆ. ಇಷ್ಟು ಎತ್ತರದ ಪಿಲ್ಲರ್ ನಿಲ್ಲಿಸಲು ಅನುಮತಿ ಕೊಟ್ಟವರು ಯಾರು? ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದರು? ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲವೇ? ಟೆಂಡರ್ ಪಡೆದಿದ್ದ ಗುತ್ತಿಗೆದಾರ, ಇಲ್ಲಿಗೆ (ಆಸ್ಪತ್ರೆ) ಬಂದು ಸಾಯ್ಲಿ. ನಾವೇ ₹ 2 ಕೋಟಿ ಕೊಡ್ತೇವೆ’ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದರು.

ಅಂಬೇಡ್ಕರ್ ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಬಂಧಿಕರು, ‘ಕೆಲಸವನ್ನೂ ಕೂಡಲೇ ಬಂದ್ ಮಾಡಬೇಕು. ಕೆಲಸದ ಮೇಲಿದ್ದ ಎಲ್ಲರನ್ನೂ ಜೈಲಿಗೆ ಹಾಕಬೇಕು’ ಎಂದು ಅವರು ಆಗ್ರಹಿಸಿದರು.

ಮಗು ನೆನೆದು ಕಣ್ಣೀರಾದ ನೆರೆಹೊರೆಯವರು
ಗದಗ:
ಬೆಂಗಳೂರಿನಲ್ಲಿ ನಾಗವಾರ ಬಳಿ ಮಂಗಳವಾರ ಮೆಟ್ರೊ ಪಿಲ್ಲರ್‌ ಕುಸಿದು ಮೃತಪಟ್ಟ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ಮಗು ವಿಹಾನ್‌ ನೆನೆದು ಸ್ಥಳೀಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಲೋಹಿತ್‌ ಕುಮಾರ್‌ ಮೂಲತಃ ಗದುಗಿನವರು. ಅವರ ಮನೆ ಇಲ್ಲಿನ ಸಿದ್ಧರಾಮೇಶ್ವರ ನಗರದಲ್ಲಿದೆ. ಉದ್ಯೋಗ ನಿಮಿತ್ತ ಲೋಹಿತ್‌ ಹಾಗೂ ತೇಜಸ್ವಿನಿ ಆರೇಳು ವರ್ಷಗಳ ಹಿಂದೆ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದರು. ಇವರಿಬ್ಬರಿಗೆ ಅವಳಿ– ಜವಳಿ ಮಕ್ಕಳಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಲೋಹಿತ್‌ ಮತ್ತು ಅವರ ಕುಟುಂಬ ಗದುಗಿಗೆ ಬಂದು ಹೋಗಿತ್ತು.

‘ಲೋಹಿತ್‌ ತಂದೆ ತಾಯಿ ಗದುಗಿನಲ್ಲೇ ಸರ್ಕಾರಿ ಉದ್ಯೋಗದಲ್ಲಿದ್ದರು. ನಿವೃತ್ತಿ ನಂತರ ಮಗನ ಜತೆಗೆ ಇರುತ್ತಿದ್ದರು. ಆಗಾಗ ಗದಗಕ್ಕೆ ಬಂದು ಹೋಗುತ್ತಿದ್ದರು. ಮನೆಯವರೆಲ್ಲರೂ ತುಂಬ ಒಳ್ಳೆಯವರು. ನೆರೆಹೊರೆಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. 15 ದಿನಗಳ ಹಿಂದೆ ಗದುಗಿಗೆ ಬಂದಿದ್ದಾಗ ಲೋಹಿತ್‌ ನಮ್ಮ ಜತೆಗೆ ಮಾತನಾಡಿದ್ದ. ಮಗುವನ್ನು ನೆನೆದುಕೊಂಡರೇ
ತುಂಬಾ ನೋವಾಗುತ್ತದೆ’ ಎಂದು ನೆರೆಮನೆಯವರಾದ ಮೆಹರುನ್ನೀಸಾ, ನಿಂಗಮ್ಮ, ರೇಣುಕಾ ಕಣ್ಣೀರಾದರು.

‘ಮೆಟ್ರೊ ಪಿಲ್ಲರ್‌ ಕುಸಿದು ತೇಜಸ್ವಿನಿ ಮತ್ತು ಅವರ ಮಗು ಮೃತಪಟ್ಟಿರುವುದು ತುಂಬ ನೋವಿನ ಸಂಗತಿ. ಈ ದುರ್ಘಟನೆ ಆಘಾತ ತರಿಸಿದೆ. ಗಾಯಗೊಂಡಿರುವ ಲೋಹಿತ್‌ ಬೇಗ ಗುಣಮುಖರಾಗಲಿ. ಮೃತ ಕುಟುಂಬಕ್ಕೆ ಮೆಟ್ರೊ ಸೂಕ್ತ ಪರಿಹಾರ ನೀಡಲಿದೆ. ಜತೆಗೆ ರಾಜ್ಯ ಸರ್ಕಾರದಿಂದಲೂ ನೆರವು ಒದಗಿಸುವುದರ ಬಗ್ಗೆ ಸಿಎಂ ಜತೆಗೆ ಚರ್ಚಿಸಲಾಗುವುದು’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT