ಬುಧವಾರ, ಸೆಪ್ಟೆಂಬರ್ 22, 2021
21 °C
ಮೈಸೂರು ರಸ್ತೆ–ಕೆಂಗೇರಿವರೆಗಿನ ಮಾರ್ಗದ ತಪಾಸಣೆ ನಡೆಸಿದ ಮೆಟ್ರೊ ರೈಲು ಸುರಕ್ಷತಾ ಆಯುಕ್ತ

ನಮ್ಮ ಮೆಟ್ರೊ: ರೀಚ್‌ 2 ವಿಸ್ತರಿತ ಮಾರ್ಗದ ಸುರಕ್ಷತೆ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ನಮ್ಮ ಮೆಟ್ರೊ' ಎರಡನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೊ ನಿಲ್ದಾಣದವರೆಗೆ ನಿರ್ಮಾಣಗೊಂಡಿರುವ ಎತ್ತರಿಸಿದ ಮಾರ್ಗ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಈ ಮಾರ್ಗದ ಹಳಿಗಳ ಹಾಗೂ ನಿಲ್ದಾಣಗಳ ಸುರಕ್ಷತಾ ಅಂಶಗಳನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತ ಅಭಯ್‌ ಕುಮಾರ್‌ ರೈ ಬುಧವಾರ ತಪಾಸಣೆ ನಡೆಸಿದರು. 

ಈ ಮಾರ್ಗದ ನಾಯಂಡಹಳ್ಳಿ, ಆರ್‌.ಆರ್‌.ನಗರ, ಜ್ಞಾನಭಾರತಿ, ಪಟ್ಟಣಗೆರೆ ಮೆಟ್ರೊ ನಿಲ್ದಾಣಗಳಿಗೆ ಭೇಟಿ ನೀಡಿದ ಅಭಯ್‌ ಕುಮಾರ್‌ ರೈ ಅಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳು, ಹಳಿಗಳ ಸಾಮರ್ಥ್ಯ, ಪ್ಲ್ಯಾಟ್‌ಫಾರ್ಮ್‌ನಲ್ಲಿ ಕಲ್ಪಿಸಿರುವ ವ್ಯವಸ್ಥೆ, ಬೆಂಕಿ ಅನಾಹುತ ತಡೆಯಲು ಇರುವ ಸೌಕರ್ಯಗಳು, ಮೆಟ್ಟಿಲುಗಳ ಅಗಲ, ಟಿಕೆಟಿಂಗ್‌ ವ್ಯವಸ್ಥೆ, ಪ್ಲ್ಯಾಟ್‌ಫಾರ್ಮ್‌ ತಲುಪಲು ಒದಗಿಸಿರುವ ಸೌಕರ್ಯಗಳನ್ನು ತಪಾಸಣೆ ನಡೆಸಿದರು. ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಯ ಕಾರ್ಯತಂತ್ರಗಳ ಕುರಿತು ಅಧಿಕಾರಿಗಳಿಂದ ವಿವರ ಪಡೆದರು. ಬಿಎಂಆರ್‌ಸಿಎಲ್‌ ನಿರ್ದೇಶಕ (ರೋಲಿಂಗ್ ಸ್ಟಾಕ್‌, ಸಿಗ್ನಲಿಂಗ್‌, ಎಲೆಕ್ಟ್ರಿಕಲ್) ಎನ್‌.ಎಂ.ಧೋಕೆ, ನಿರ್ದೇಶಕ (ಪ್ರಾಜೆಕ್ಟ್ ಮತ್ತು ಯೋಜನೆ) ಡಿ.ರಾಧಾಕೃಷ್ಣ ರೆಡ್ಡಿ ಹಾಗೂ ಇತರ ಅಧಿಕಾರಿಗಳು ಇಲ್ಲಿನ ಸೌಕರ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಕೆಂಗೇರಿ ನಿಲ್ದಾಣ ಹಾಗೂ ಕೆಂಗೇರಿ ಬಸ್‌ ಟರ್ಮಿನಲ್‌ ನಿಲ್ದಾಣಗಳ ಪರೀಕ್ಷೆಯನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಗುರುವಾರ ಕೈಗೊಳ್ಳಲಿದ್ದಾರೆ. ಮೆಟ್ರೊ ರೈಲಿನ ವೇಗ ಪರೀಕ್ಷೆ, ಸಿಗ್ನಲಿಂಗ್‌ ವ್ಯವಸ್ಥೆಗಳ ಪರೀಕ್ಷೆಗಳೂ ಗುರುವಾರ ನಡೆಯಲಿವೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮೂಲಗಳು ತಿಳಿಸಿವೆ.

‘ಹೊಸ ಮಾರ್ಗದ ಸುರಕ್ಷತಾ ತಪಾಸಣೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಗುರುವಾರವೂ ಆಯುಕ್ತರು ತಪಾಸಣಾ ಕಾರ್ಯ ಮುಂದುವರಿಸಲಿದ್ದಾರೆ. ಈ ಮಾರ್ಗದ ಸುರಕ್ಷತಾ ಪ್ರಮಾಣಪತ್ರ ಕೈಸೇರಿದ ಬಳಿಕ ಶೀಘ್ರವೇ ಈ ಮಾರ್ಗದಲ್ಲೂ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಕ್ರಮ ಕೈಗೊಳ್ಳಲಿದ್ದೇವೆ. ಪ್ರಮುಖರ ಜೊತೆ ಚರ್ಚಿಸಿ ಈ ಮಾರ್ಗದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಿದ್ದೇವೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರೀಚ್‌–2 ಮಾರ್ಗದ ವಿಸ್ತರಣಾ ಕಾರ್ಯವನ್ನು ಬಿಎಂಆರ್‌ಸಿಎಲ್‌ ಎರಡು ಹಂತಗಳಲ್ಲಿ ಕೈಗೊಂಡಿದೆ. ಮೈಸೂರು ರಸ್ತೆಯಿಂದ ಪಟ್ಟಣಗೆರೆವರೆಗೆ ಕಾಮಗಾರಿಯನ್ನು ರೀಚ್‌– 2ಎ ಹಾಗೂ ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೊವರೆಗಿನ ಕಾಮಗಾರಿಯನ್ನು ರೀಚ್‌ 2ಬಿ ಎಂದು ಗುರುತಿಸಲಾಗಿದೆ. ಚಲ್ಲಘಟ್ಟ ಡಿಪೊ ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯಕ್ಕೆ ಈ ಮಾರ್ಗದಲ್ಲಿ ಕೆಂಗೇರಿವರೆಗಿನ ನಿಲ್ದಾಣಗಳು ಕಾರ್ಯಾಚರಣೆಗೆ ಸನ್ನದ್ಧವಾಗಿವೆ.

ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ವಿಸ್ತರಣೆಯಲ್ಲಿ ರೀಚ್ 2 ಮಾರ್ಗದ ವಿಸ್ತರಣೆ ಅತ್ಯಂತ ಮಹತ್ವದ್ದಾಗಿದೆ. ಈ ಮಾರ್ಗವು ಪಶ್ಚಿಮದ ಕೆಂಗೇರಿಯಿಂದ ಪೂರ್ವದ ಬೈಯಪ್ಪನಹಳ್ಳಿವರೆಗೂ ನಿರಂತರವಾಗಿ ಮೆಟ್ರೊ ಸಂಪರ್ಕ ಕಲ್ಪಿಸಲಿದೆ. ನಗರದ ಮೈಸೂರು ರಸ್ತೆ, ಮೆಜೆಸ್ಟಿಕ್‌, ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ರೀಚ್‌–1 ಮಾರ್ಗವು ವೈಟ್‌ಫೀಲ್ಡ್‌ವರೆಗೂ ವಿಸ್ತರಣೆಯಾದರೆ ಕೆಂಗೇರಿಯಿಂದ ಅಲ್ಲಿವರೆಗೂ ನಿರಂತರ ಮೆಟ್ರೊ ಸಂಪರ್ಕ ಸಿಗಲಿದೆ. ನಗರದ ಅನೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವಲ್ಲಿ ಈ ಮೆಟ್ರೊ ಮಾರ್ಗ ಮಹತ್ತರ ಪಾತ್ರವಹಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಆಗಸ್ಟ್‌ ಅಂತ್ಯದೊಳಗೆ ಕೆಂಗೇರಿವರೆಗೆ ಪ್ರಯಾಣಿಕ ರೈಲು ಸಂಚಾರ ಸಾಧ್ಯವಾಗಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು