ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದ ಹಳಿಗೆ ಮರಳದ ‘ನಮ್ಮ ಮೆಟ್ರೊ: ತಿಂಗಳಿಗೆ ₹ 15 ಕೋಟಿಯಷ್ಟೂ ಇಲ್ಲ

ವಾಣಿಜ್ಯ ಕಾರ್ಯಾಚರಣೆ ವರಮಾನ * ಕಡಿಮೆಯಾಗಿಲ್ಲ ನಿರ್ವಹಣಾ ವೆಚ್ಚ
Last Updated 21 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಂತರ ‘ನಮ್ಮ ಮೆಟ್ರೊ’ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದರೂ, ದೈನಂದಿನ ನಿರ್ವಹಣಾ ವೆಚ್ಚವನ್ನು ಭರಿಸುವಷ್ಟೂ ವರಮಾನವೂ ಇದರಿಂದ ಹುಟ್ಟುತ್ತಿಲ್ಲ. ಮೆಟ್ರೊ ಸೇವೆ ಸದ್ಯಕ್ಕಿನ್ನೂ ‘ಲಾಭದ ಹಳಿ’ಗೆ ಮರಳಿಲ್ಲ.

ಕೋವಿಡ್‌ ಕಾಣಿಸಿಕೊಳ್ಳುವುದಕ್ಕೆ ಮುನ್ನ ‘ನಮ್ಮ ಮೆಟ್ರೊ’ದಲ್ಲಿ ನಿತ್ಯ ಸರಾಸರಿ 4.15 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ವಾಣಿಜ್ಯ ಕಾರ್ಯಾಚರಣೆಯನ್ನಷ್ಟೇ ಪರಿಗಣಿಸಿದರೆ ಮೆಟ್ರೊ ಲಾಭದ ಹಳಿಗೆ ಮರಳಿತ್ತು. ‘ವರಮಾನದ ಲೆಕ್ಕಾಚಾರಗಳನ್ನೆಲ್ಲ ಕೋವಿಡ್‌ ಬುಡಮೇಲು ಮಾಡಿದೆ. ಈಗ ನಿರ್ವಹಣಾ ವೆಚ್ಚದಷ್ಟೂ ವರಮಾನ ಹುಟ್ಟುತ್ತಿಲ್ಲ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ವಾಣಿಜ್ಯ ಕಾರ್ಯಾಚರಣೆಯಿಂದ ಬರುವ ತಿಂಗಳ ವರಮಾನ ₹ 35 ಕೋಟಿಗಳವರೆಗೆ ತಲುಪಿತ್ತು. ನಮ್ಮ ಮೆಟ್ರೊ ವಾಣಿಜ್ಯ ಸೇವೆಯ ನಿರ್ವಹಣೆಗೆ ತಿಂಗಳಿಗೆ ₹ 25 ಕೋಟಿಗಳಿಂದ ₹ 28 ಕೋಟಿಗಳ ವರೆಗೆ ವೆಚ್ಚವಾಗುತ್ತಿದೆ. ಖರ್ಚು ಕಳೆದು ₹ 10 ಕೋಟಿಗಳಷ್ಟು ಉಳಿತಾಯವಾಗುತ್ತಿತ್ತು. ಆದರೆ, ಈಗ ತಿಂಗಳ ವರಮಾನ ₹ 15 ಕೋಟಿ ಮೀರುತ್ತಿಲ್ಲ. ನಿರ್ವಹಣೆ ವೆಚ್ಚ ಮೊದಲಿನಷ್ಟೇ ಇದೆ’ ಎನ್ನುತ್ತಾರೆ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಎ.ಎಸ್‌.ಶಂಕರ್‌.

ನಮ್ಮ ಮೆಟ್ರೊ ಸಂಸ್ಥೆಯ ಟಿಕೇಟೇತರ ವರಮಾನವೂ ಕುಸಿದಿದೆ. ಮೆಟ್ರೊ ನಿಲ್ದಾಣಗಳಲ್ಲಿ ಈ ಹಿಂದೆ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್‌ ಬಳಿಕ ಇವುಗಳೂ ಬಾಗಿಲು ಮುಚ್ಚಿವೆ. ಈ ಹಿಂದೆ, ‘ನಮ್ಮ ಮೆಟ್ರೊ’ ಎತ್ತರಿಸಿದ ಮಾರ್ಗದ ಕಾಂಕ್ರೀಟ್‌ ಕಂಬಗಳಲ್ಲಿ ಹೊರಾಂಗಣ ಜಾಹೀರಾತು ಅಳವಡಿಕೆಯಿಂದಲೂ ಒಂದಷ್ಟು ವರಮಾನ ಬರುತ್ತಿತ್ತು. ಬಿಬಿಎಂಪಿಯ ಹೊರಾಂಗಣ ಜಾಹೀರಾತು ನೀತಿಗೆ ಸಂಬಂಧಿಸಿದ ಗೊಂದಲ ಇನ್ನೂ ಬಗೆಹರಿಯದ ಕಾರಣ ಆ ವರಮಾನಕ್ಕೂ ಕತ್ತರಿ ಬಿದ್ದಿದೆ.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಮೆಟ್ರೊ ನಿಲ್ದಾಣಗಳಲ್ಲಿ ಮಳಿಗೆಗಳೆಲ್ಲೂ ಬಾಗಿಲು ಮುಚ್ಚಿದವು. ಅವರಲ್ಲಿ ಬಹುತೇಕ ಮಳಿಗೆಗಳ ಮಾಲೀಕರು ವ್ಯಾಪಾರ ಪುನರಾರಂಭ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಹೊರಾಂಗಣ ಜಾಹೀರಾತುಗಳ ವರಮಾನವಂತೂ ಸಂಪೂರ್ಣ ಸ್ಥಗಿತವಾಗಿದೆ. ಬಿಬಿಎಂಪಿಯ ಹೊರಾಂಗಣ ಜಾಹೀರಾತು ನೀತಿ ಕುರಿತ ಗೊಂದಲ ಬಗೆಹರಿದರೆ ಅದರಿಂದಲೂ ಸ್ವಲ್ಪ ವರಮಾನ ಬರಬಹುದು’ ಎಂದು ಅಂಜುಮ್‌ ಪರ್ವೇಜ್‌ ಆಶಾವಾದ ವ್ಯಕ್ತಪಡಿಸಿದರು.

‘ಮೆಟ್ರೊ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿದೆ. ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದ ಅನೇಕ ಕಂಪನಿಗಳು ನವೆಂಬರ್‌ನಿಂದ ಕಚೇರಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸುತ್ತಿವೆ. 1ನೇ ತರಗತಿಯಿಂದಲೇ ಶಾಲೆಗಳೂ ಆರಂಭವಾಗುತ್ತಿವೆ. ಜನಜೀವನ ಸಹಜ ಸ್ಥಿತಿಗೆ ಮರಳಿದಂತೆ ಮೆಟ್ರೊ ವಾಣಿಜ್ಯ ಸೇವೆಯಿಂದ ಬರುವ ವರಮಾನವೂ ಹೆಚ್ಚಳವಾಗಲಿದೆ’ ಎಂದು ಅವರು ತಿಳಿಸಿದರು.

–0–

‘ಮೆಟ್ರೊ ಬಳಸುವವರ ಸಂಖ್ಯೆ 2.2 ಲಕ್ಷಕ್ಕೆ ಇಳಿಕೆ’

‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣೆಗೆ ಡಿಪಿಆರ್‌ ಪ್ರಕಾರ, 2021ರಲ್ಲಿ ಉತ್ತರ ದಕ್ಷಿಣ ಕಾರಿಡಾರ್‌ ಅಂಜನಾಪುರ ಟೌನ್‌ಶಿಪ್‌ನಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ (ಬಿಐಇಸಿ) ಹಾಗೂ ಪೂರ್ವ ಪಶ್ಚಿಮ ಕಾರಿಡಾರ್‌ ವೈಟ್‌ಫೀಲ್ಡ್‌ವರೆಗೆ ವಿಸ್ತರಣೆ ಆಗಬೇಕಿತ್ತು. ‘ನಮ್ಮ ಮೆಟ್ರೊ’ ಪ್ರಯಾಣಿಕರ ದೈನಂದಿನ ಸರಾಸರಿ ಸಂಖ್ಯೆ 6.5 ಲಕ್ಷಕ್ಕೆ ಹೆಚ್ಚಳವಾಗಬೇಕಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಸರಾಸರಿ 2.2 ಲಕ್ಷ ಪ್ರಯಾಣಿಕರಷ್ಟೇ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ.

ಮೆಟ್ರೊ ಇದುವರೆಗಿನ ದಿನವೊಂದರಲ್ಲಿ 4.58 ಲಕ್ಷ ಮಂದಿ ಪ್ರಯಾಣಿಸಿದ್ದು ಇದುವರೆಗಿನ ದಾಖಲೆ. 2019ರ ಆ.30ರಂದು 4,58,238 ಮಂದಿ ಪ್ರಯಾಣಿಸಿದ್ದರು.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮೆಟ್ರೊ ಸೇವೆ ಸ್ಥಗಿತಗೊಳಿಸಲಾಗಿತ್ತು. ಲಾಕ್‌ಡೌನ್‌ ತೆರವಿನ ಬಳಿಕವೂ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಲು ಅನುಮತಿ ಇರಲಿಲ್ಲ. ಅನೇಕ ನಿರ್ಬಂಧಗಳೊಂದಿಗೆ ಮೆಟ್ರೊ ಸೇವೆ ಪುನರಾರಂಭಗೊಂಡಿದೆ. ಸೇವೆಯ ಅವಧಿಯೂ ಕಡಿತಗೊಂಡಿದೆ. ಇದರಿಂದಾಗಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ.

–0–

ಕೋವಿಡ್‌ ತಹಬಂದಿಗೆ ಬಂದಿರುವುದರಿಂದ ಜನಜೀವನವೂ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗಾಗಿ ‘ನಮ್ಮ ಮೆಟ್ರೊ’ ಕೂಡಾ ಮತ್ತೆ ಲಾಭದ ಹಳಿಗೆ ಮರಳುವ ನಿರೀಕ್ಷೆ ಇದೆ
ಅಂಜುಂ ಪರ್ವೇಜ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT