ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಸುರಂಗ ಕೊರೆದು ಹೊರಬಂದ 'ಊರ್ಜಾ ಯಂತ್ರ'

ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ * ಸುರಂಗದ ಮೊದಲ ಭಾಗ ಪೂರ್ಣ
Last Updated 22 ಸೆಪ್ಟೆಂಬರ್ 2021, 13:50 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ಸಮಯ ಬೆಳಿಗ್ಗೆ 10.15 ಆಗುತ್ತಿದ್ದಂತೆಯೇ ಶಿವಾಜಿನಗರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗುತ್ತಿರುವ ಪರಿಸರದಲ್ಲಿ ಕಾರ್ಮಿಕರ ಕೇಕೆ ಮುಗಿಲುಮುಟ್ಟಿತು. ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣೆ ಯೋಜನೆಯ ಸುರಂಗ ಮಾರ್ಗ ಮೊದಲ ಭಾಗವನ್ನು ಕೊರೆಯುವ ಕೆಲಸ ಪೂರ್ಣಗೊಂಡ ಸಡಗರವನ್ನು ತಡೆಯಲಾಗದೇ ಅವರು ಕುಣಿದು ಕುಪ್ಪಳಿಸಿದರು.

ಕಂಟೋನ್ಮೆಂಟ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿರುವ ಸ್ಥಳದಲ್ಲಿ ಸುರಂಗ ಕೊರೆಯುವ ಸಲುವಾಗಿ 2020ರ ಜುಲೈನಲ್ಲಿ ನೆಲದಡಿ ಸೇರಿದ್ದ ‘ಊರ್ಜಾ’ ಯಂತ್ರ ಸರಿ ಸುಮಾರು 14 ತಿಂಗಳ ಬಳಿಕ ಶಿವಾಜಿನಗರದಲ್ಲಿ ನೆಲದಿಂದ ಹೊರ ಬಂದಿದೆ. ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಸುರಂಗ ಕೊರೆಯುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಹಾಗೂ ಅಧಿಕಾರಿಗಳಿಗೆಲ್ಲ ದೊಡ್ಡ ಸವಾಲನ್ನು ಯಶಸ್ವಿಯಾಗಿ ಮುಗಿಸಿದ ಸಂತೃಪ್ತಿ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಕಾರ್ಮಿಕರ ಖುಷಿಯನ್ನು ಇಮ್ಮಡಿಗೊಳಿಸಿತು.

ಜೀವನಾಡಿಯಾಗಲಿದೆ ಮೆಟ್ರೊ: ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಂಆರ್‌ಸಿಎಲ್‌ ಸಿಬ್ಬಂದಿಗೆ ಹಾಗೂ ಕಾರ್ಮಿಕರಿಗೆ ಶುಭ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಎರಡನೇ ಹಂತದ ವಿಸ್ತರಣೆ ಪೂರ್ಣಗೊಂಡ ಬಳಿಕ ನಮ್ಮ ಮೆಟ್ರೊ ನಗರದ ಜನರ ಜೀವನಾಡಿಯಾಗಲಿದೆ. ಸುರಕ್ಷತೆಗೆ ಗಮನಕೊಟ್ಟು ಉತ್ತಮ ಕೆಲಸವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್‌ಸಿಎಲ್‌) ಮಾಡುತ್ತಿದ್ದಾರೆ. ನಗರದಲ್ಲಿ ಮೆಟ್ರೊ ಕಾಮಗಾರಿ ನಡೆಸುವುದು ಸುಲಭವಲ್ಲ. ಎತ್ತರಿಸಿದ ಮಾರ್ಗ, ನಿಲ್ದಾಣಗಳು ಹಾಗೂ ಸುರಂಗ ನಿರ್ಮಾಣ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಂಡು ಬಹಳ ಚೆನ್ನಾಗಿ ಕಾಮಗಾರಿ ನಡೆಸುತ್ತಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

‘ನಮ್ಮ ಮೆಟ್ರೊ ಮೊದಲ ಹಂತದ ಕಾಮಗಾರಿ ವೇಳೆ ಹಲವಾರು ತಾಂತ್ರಿಕ ಅಡಚಣೆಗಳು ಎದುರಾಗಿದ್ದವು. ಮೆಜೆಸ್ಟಿಕ್‌ ಬಳಿ ಸುರಂಗ ಕೊರೆಯುವ ಯಂತ್ರ ಸಿಲುಕಿಕೊಂಡಿತ್ತು. ಆದರೆ ಅದರಿಂದ ಪಾಠ ಕಲಿತಿದ್ದೇವೆ. ಇವತ್ತು ಅತ್ಯುತ್ತಮವಾದ ಊರ್ಜಾ ಸುರಂಗ ಕೊರೆಯುವ ಯಂತ್ರ ಯಶಸ್ವಿಯಾಗಿ 855 ಮೀ ಸುರಂಗವನ್ನು ಕೊರೆದಿದೆ. ಉತ್ಸಾಹದಿಂದ ಕೆಲಸ ಮಾಡುವುದಕ್ಕೆ ಊರ್ಜಾ ಎನ್ನುತ್ತಾರೆ. ಈ ಹೆಸರು ಅನ್ವರ್ಥವಾಗಿದೆ’ ಎಂದರು.

‘ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್‌ 2025ರ ಗಡುವು ಹಾಕಿಕೊಂಡಿತ್ತು. ಕಾಮಗಾರಿ ವೇಳೆ ಬಹಳಷ್ಟು ಜನರಿಗೆ ಅಡಚಣೆ ಆಗುತ್ತದೆ. ಮೆಟ್ರೊ ಕಾಮಗಾರಿ ಬೇಗ ಪೂರ್ಣಗೊಂಡರೆ ಬಹಳಷ್ಟು ಸಂಖ್ಯೆಯಲ್ಲಿ ಜನ ಅದನ್ನು ಬಳಸುತ್ತಾರೆ. ಹಾಗಾಗಿ ನಾನು ಗಡುವನ್ನು 2024ಕ್ಕೆ ಮರು ನಿಗದಿ ಮಾಡಿದ್ದೇನೆ. ಕಾಮಗಾರಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಿದ್ದೇನೆ’ ಎಂದರು.

‘ಯಾವುದೇ ಪರಿಸ್ಥಿತಿಯಲ್ಲೂ 2024ರ ಅಂತ್ಯದೊಳಗೆ ಎರಡನೇ ಹಂತದ ಎಲ್ಲ ಕಾಮಗಾರಿಗಲೂ ಪೂರ್ತಿ ಆಗಬೇಕು. ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲು ನಿಗಮವು ಯೋಜನೆ ಹಾಕಿಕೊಂಡಿದೆ. ಬೆಂಗಳೂರಿನ ಜನರ ಸಹಕಾರ ಇಲ್ಲದೇ ಮೆಟ್ರೊ ಸಾಕಾರ ಆಗುತ್ತಿರಲಿಲ್ಲ. ನಿತ್ಯ ಸಂಚಾರಕ್ಕೆ ಅಡಚಣೆ ಆದರೂ ಕಾಮಗಾರಿಗೆ ಜನ ಸಹಕಾರ ಕೊಟ್ಟಿದ್ದಾರೆ. ಇದೇ ವೇಗದಲ್ಲಿ ಕಾಮಗಾರಿ ಮುಂದುವರಿಸಬೇಕು’ ಎಂದು ಕೃತಜ್ಞತೆ ಸಲ್ಲಿಸಿದರು.

‘ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ದಿಕ್ಕುಗಳಲ್ಲೆಲ್ಲ ಬೆಳೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ಧವಾಗಿದೆ. ಈಗಾಗಲೇ ಕೇಂದ್ರ ಸರ್ಕಾರವೂ ಅದಕ್ಕೆ ಒಪ್ಪಿಗೆ ಕೊಟ್ಟಿದೆ. ಹಣಕಾಸಿನ ನೆರವನ್ನೂ ನೀಡಲಿದೆ. ಬರುವ ದಿನಗಳಲ್ಲಿ ಈ ಕಾಮಗಾರಿಗೂ ಚಾಲನೆ ನೀಡಲಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಇದು ಮೈಲುಗಲ್ಲು ಆಗಲಿದೆ’ ಎಂದರು.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಮಾತನಾಡಿ, ‘ಸಂಸ್ಥೆಗೆ ಇದು ಖುಷಿಯ ದಿನ. ಎರಡನೇ ಹಂತದಲ್ಲಿ ಈಗಾಗಲೇ ಎರಡು ವಿಸ್ತರಿತ ಮಾರ್ಗಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಅತ್ಯಂತ ಕಠಿಣ ಸವಾಲುಗಳು ಇದ್ದುದು ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ ರೀಚ್‌–5 ಮಾರ್ಗ ಮತ್ತು ಗೊಟ್ಟಿಗೆರೆಯಿಂದ ನಾಗವಾರದವರೆಗಿನ 21 ಕಿ.ಮೀ ಉದ್ದದ ರೀಚ್‌ –6 ಮಾರ್ಗ. ಈ ಮಾರ್ಗದಲ್ಲಿ 13.76 ಕಿ.ಮೀ ಉದ್ದದ ಸುರಂಗ ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಉದ್ದದ ಮೆಟ್ರೊ ಸುರಂಗ ಮಾರ್ಗ. ಒಟ್ಟು 9 ಯಂತ್ರಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿವೆ.ಪ್ರತಿ ದಿನ ಸರಾಸರಿ 3.5 ಮೀಗಳನ್ನು ಸುರಂಗ ಕೊರೆಯಲಾಗುತ್ತಿದೆ. ಭಗವಂತನ ಕೃಪೆಯಿಂದ ಎಲ್ಲೂ ಸಮಸ್ಯೆ ಎದುರಾಗಿಲ್ಲ’ ಎಂದರು.

‘ಊರ್ಜಾ ಯಂತ್ರವು 855 ಮೀ ಸುರಂಗ ಕೊರೆದಿದೆ. ಕೆಲವು ಕಡೆ ಕಠಿಣ ಶಿಲೆಗಳನ್ನು ಕೊರೆಯಬೇಕಾಗಿ ಬಂತು. ಸಾಕಷ್ಟು ಅಡಚಣೆ ಎದುರಾಗಿದೆ. ಜನರೂ ಸಹಕರಿಸಿದ್ದಾರೆ. ನಮ್ಮಿಂದ ಆಗಿರುವ ತೊಂದರೆಗೆ ಜನರಲ್ಲಿ ಕ್ಷಮೆ ಕೇಳುತ್ತೇವೆ. ಮೂರು– ನಾಲ್ಕು ಕಡೆ ಕೆಸರು ಕಾಣಿಸಿಕೊಂಡು ಕುಸಿತ ಉಂಟಾಗಿತ್ತು’ ಎಂದರು.

ವಿಮಾನ ನಿಲ್ದಾಣಕ್ಕೆ 2024ರಲ್ಲೇ ಮೆಟ್ರೊ

‘ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ಎ ಮತ್ತು ಮತ್ತು 2ಬಿ ಹಂತಗಳ ಕೆಲಸವೂ ಆರಂಭವಾಗಿವೆ. 2ಬಿ ಟೆಂಡರ್‌ ಪ್ರಕ್ರಿಯೆ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿಗಳನ್ನು 2025ಕ್ಕೆ ಪೂರ್ಣಗೊಳ್ಳಲು ಉದ್ದೇಶಿಸಿದ್ದವು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಎಲ್ಲ ಕಾಮಗಾರಿಗಳನ್ನೂ 2024 ಡಿಸೆಂಬರ್‌ ಒಳಗೆ ಪೂರ್ಣಗೊಳಿಸುತ್ತೇವೆ. ಕಾಮಗಾರಿಯ ವೇಗವನ್ನೂ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ’ ಎಂದರು.

‘ಮರಗಳ ತೆರವು ಸಂಬಂಧದ ವಿಚಾರಣೆ ಹೈಕೋರ್ಟ್‌ನಲ್ಲಿತ್ತು. ಈ ಸಮಸ್ಯೆ ನೀಗಿದೆ. ಯಾವುದೇ ಅಡಚಣೆ ಇಲ್ಲ’ ಎಂದರು.

ಸಚಿವರಾದ ಉಮೇಶ್‌ ಕತ್ತಿ, ಎಸ್‌.ಟಿ.ಸೊಮಶೇಖರ, ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಸಭಾ ಸದಸ್ಯ ರಮೇಶ್ ಗೌಡ, ಬಿಎಂಆರ್‌ಸಿಎಲ್ ಅಧಿಕಾರಿಗಳು ಇದ್ದರು.

ಕಾರ್ಯಕ್ರಮ ಕನ್ನಡ ಮಯ: ಊರ್ಜಾ ಯಂತ್ರ ಸುರಂ ಕೊರೆದು ಹೊರಬರುವುದನ್ನು ಸ್ವಾಗತಿಸಲು ಬಿಎಂಆರ್‌ಸಿಎಲ್ ಏರ್ಪಡಿಸಿದ್ದ ಸಮಾರಂಭ ಸಂಪೂರ್ಣ ಕನ್ನಡಮಯವಾಗಿತ್ತು. ಸಮಾರಂಭದ ಬ್ಯಾನರ್‌ಗಳಲ್ಲೂ ಕನ್ನಡ ರಾರಾಜಿಸುತ್ತಿತ್ತು. ಊರ್ಜಾ ಯಂತ್ರದಲ್ಲೂ ರಾಷ್ಟ್ರ ಧ್ವಜದ ಜೊತೆಗೆ ಕನ್ನಡ ಧ್ವಜವನ್ನೂ ಅಳವಡಿಸಲಾಗಿತ್ತು.

ಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮಾರ್ಗದ ಲೋಕಾರ್ಫಣೆ ಸಮಾರಂಭದಲ್ಲಿ ಕನ್ನಡ ಕಡೆಗಣಿಸಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಅಂತಹ ತಪ್ಪು ಮರುಕಳಿಸಲು ಬಿಎಂಆರ್‌ಸಿಎಲ್‌ ಅವಕಾಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT