ಬೆಂಗಳೂರು: ಕೃಷ್ಣರಾಜಪುರದಿಂದ ಗರುಡಾಚಾರ್‌ಪಾಳ್ಯ ನಡುವೆ ಸೆ.21(ಗುರುವಾರ)ರಂದು ಇಡೀ ದಿನ ಮೆಟ್ರೊ ರೈಲು ಸೇವೆ ಸ್ಥಗಿತಗೊಳ್ಳಲಿದೆ.
ಅಂದೇ ಬೈಯಪ್ಪನಹಳ್ಳಿ ಮತ್ತು ಇಂದಿರಾನಗರದ ನಡುವೆ ಮಧ್ಯಾಹ್ನ 1.30ರಿಂದ ಸಂಜೆ 4.30ರ ತನಕ ಮೆಟ್ರೊ ರೈಲು ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ನಡುವೆ ಹೊಸದಾಗಿ ನಿರ್ಮಿಸಿರುವ ಮಾರ್ಗವನ್ನು ಗುರುವಾರ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಪರಿಶೀಲನೆ ನಡೆಸಲಿದ್ದು, ರೈಲ್ವೆ ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರ್ ಪಾಳ್ಯ ನಡುವೆ ಪೂರ್ಣದಿನ ಹಾಗೂ ಇಂದಿರಾ ನಗರದ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30ರಿಂದ 4.30ರ ತನಕ ಮೆಟ್ರೊ ರೈಲು ಸೇವೆ ಲಭ್ಯವಿರಲಿದೆ. ಮಧ್ಯಾಹ್ನ 1.30ರ ವರೆಗೆ ಹಾಗೂ ಸಂಜೆ 4.30ರ ನಂತರ ಬೈಯಪ್ಪನಹಳ್ಳಿ– ಕೆಂಗೇರಿ ಮೆಟ್ರೊ ನಿಲ್ದಾಣಗಳ ನಡುವೆ ರೈಲು ಸೇವೆ ಎಂದಿನಂತೆ ರಾತ್ರಿ 11ರವರೆಗೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.