ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್ ಮೆಟ್ರೊ: ಸುರಕ್ಷತೆ ಪರಿಶೀಲನೆ ಆರಂಭ

Last Updated 22 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಕಾರ್ಯಾಚರಣೆಗೆ ಕಾಲ ಹತ್ತಿರವಾಗುತ್ತಿದ್ದು, ರೈಲ್ವೆ ಸುರಕ್ಷತಾ ಆಯುಕ್ತರಿಂದ(ಸಿಆರ್‌ಎಸ್‌) ಪರಿಶೀಲನೆ ಆರಂಭವಾಗಿದೆ.

ವೈಟ್‌ಫೀಲ್ಡ್‌ನಿಂದ ಕೆ.ಆರ್‌.ಪುರ ನಡುವೆ ಅಕ್ಟೋಬರ್‌ನಲ್ಲೇ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿತ್ತು. ಅದು ಯಶಸ್ವಿಯಾದ ಬಳಿಕ ಪರಿಶೀಲನೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಬಿಎಂಆರ್‌ಸಿಎಲ್ ಆಹ್ವಾನ ನೀಡಿತ್ತು.

ಬುಧವಾರ ಆರಂಭವಾಗಿರುವ ಸಿಆರ್‌ಎಸ್‌ ತಪಾಸಣೆ ಯಶಸ್ವಿಯಾಗಿದ್ದು, ‌ಇನ್ನೂ ಎರಡು ದಿನ ಪರಿಶೀಲನೆ ನಡೆಯಲಿದೆ. ಯಾವುದೇ ಅಡೆ–ತಡೆ ಎದುರಾಗದಿದ್ದರೆ ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ಮೆಟ್ರೊ ರೈಲು ವಾಣಿಜ್ಯ ಸಂಚಾರ ಆರಂಭವಾಗಲಿದೆ.

‘ಸಿಆರ್‌ಎಸ್ ತಂಡ ಗುರುತಿಸುವ ದೋಷಗಳನ್ನು ಸರಿಪಡಿಸಿ ಪ್ರಮಾಣಪತ್ರ ಪಡೆಯಲು ಒಂದು ವಾರ ಕಾಲಾವಕಾಶ ಬೇಕಾಗಬಹುದು. ಮಾರ್ಚ್ 15ರ ಹೊತ್ತಿಗೆ ಮೆಟ್ರೊ ರೈಲು ಸಂಚಾರ ಆರಂಭಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020ರಲ್ಲೇ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ದೊರಕಬೇಕಿತ್ತು. ಕೋವಿಡ್‌ ಕಾರಣದಿಂದ ಕಾಮಗಾರಿ ವಿಳಂಬವಾಗಿದ್ದರಿಂದ ಪೂರ್ಣಗೊಳಿಸುವ ದಿನಾಂಕವನ್ನು 2021ರ ಆಗಸ್ಟ್‌ಗೆ ವಿಸ್ತರಿಸಲಾಗಿತ್ತು. ಬಳಿಕ 2022ರ ಜೂನ್‌ಗೆ ವಿಸ್ತರಿಸಲಾಯಿತು. ಅದೂ ಸಾಧ್ಯವಾಗದೆ, 2022ರ ಡಿಸೆಂಬರ್‌ಗೆ ಗಡುವು ನೀಡಲಾಗಿತ್ತು. ಆ ಗಡುವುಗಳೆಲ್ಲವೂ ಮುಗಿದು ಈಗ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಕಾರ್ಯಾಚರಣೆ ಮಾಡುವ ಸಮಯ ಸನ್ನಿಹಿತವಾಗಿದೆ.

ಈಗ ವೈಟ್‌ಫೀಲ್ಡ್ ಮೆಟ್ರೊ ರೈಲು ಕನಸು ನನಸಾಗುತ್ತಿದ್ದರೂ, ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿಗೆ ಸಂಪರ್ಕ ದೊರಕುತ್ತಿಲ್ಲ. ಬೆನ್ನಿಗಾನಹಳ್ಳಿ ಬಳಿ ಸವಾಲಾಗಿದ್ದ ವೆಬ್‌ ಗರ್ಡರ್ ಅಳವಡಿಕೆ ಮಾಡಿ ರೈಲು ಹಳಿ ಜೋಡಿಸಲಾಗುತ್ತಿದೆ. ಜೂನ್ ವೇಳೆಗೆ ಈ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT