ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್ ಮೆಟ್ರೊ: ಸುರಕ್ಷತೆ ಪರಿಶೀಲನೆ ಪೂರ್ಣ

Last Updated 24 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು(ಸಿಎಂಆರ್‌ಎಸ್‌) ನಡೆಸಿದ ಪರಿಶೀಲನೆ ಪೂರ್ಣಗೊಂಡಿದೆ.

ಮೆಟ್ರೊ ರೈಲು ಸುರಕ್ಷತೆ ಆಯುಕ್ತ ಅಭಯ್‌ಕುಮಾರ್ ರೈ ನೇತೃತ್ವದ ತಂಡ, ಬುಧವಾರ ‍ಪರಿಶೀಲನೆ ಆರಂಭಿಸಿತ್ತು. ಮೂರು ದಿನ ನಿರಂತರವಾಗಿ ಪರಿಶೀಲನೆ ನಡೆಸಿ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳು, ಅಳವಡಿಕೆಯಾಗಿರುವ ಎಸ್ಕಲೇಟರ್‌ಗಳು, ಎಲಿವೇಟರ್‌ಗಳು, ಅಗ್ನಿಶಾಮಕ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿತು.

ಕಾರ್ಯಾಚರಣೆಯ ಸುರಕ್ಷತೆಗಾಗಿ ಟ್ರಾಕ್ಷನ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್ ವ್ಯವಸ್ಥೆ, ವಯಾಡಕ್ಟ್‌ಗಳು, ವಾಕ್‌ವೇಗಳು, ಟ್ರ್ಯಾಕ್‌ ಮತ್ತು ತಿರುವುಗಳ ನಿಯತಾಂಕಗಳು, ರೈಲಿನ ವೇಗದ ಪರೀಕ್ಷೆ ನಡೆಸಿದರು.

ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, ವಾರದಲ್ಲಿ ಪ್ರಮಾಣಪತ್ರ ದೊರೆಯುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರ ತನಕ 13.71 ಕಿಲೋ ಮೀಟರ್ ಉದ್ದದ ವಿಸ್ತರಣಾ ಮಾರ್ಗವು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ ಪಾಳ್ಯ, ಮಹಾದೇವಪುರ ಮತ್ತು ಕೆ.ಆರ್‌.ಪುರ ಸೇರಿ 12 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗವು ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ನಿಲ್ದಾಣಗಳಲ್ಲಿ ಸೀಮಿತ ದ್ವಿಚಕ್ರ ವಾಹನ ನಿಲುಗಡೆ, ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಎರಡೂ ನಿಲ್ದಾಣಗಳಿಂದ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆಗಳನ್ನೂ ನಿರ್ಮಿಸಲಾಗಿದೆ. ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಐಟಿಪಿಬಿಗೆ ನೇರವಾಗಿ ಮೇಲ್ಸೇತುವೆ ಸಂಪರ್ಕ ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆನ್ನಿಗಾನಹಳ್ಳಿ ಬಳಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ನಡುವೆ ರೈಲು ಕಾರ್ಯಾಚರಣೆಗೆ ಇನ್ನೂ ಮೂರು ತಿಂಗಳು ಬೇಕಾಗಬಹುದು. ಅಲ್ಲಿಯ ತನಕ ಈ ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್‌ಗಳನ್ನು ಫೀಡರ್ ಸೇವೆಯಾಗಿ ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಆಲೋಚನೆ ನಡೆಸಿದೆ.

ಸುರಂಗದಿಂದ ಹೊರಬಂದ ‘ವಿಂಧ್ಯಾ’

ಗೊಟ್ಟಿಗೆರೆ–ನಾಗವಾರ ಮೆಟ್ರೊ ರೈಲು ಮಾರ್ಗದ ಸುರಂಗ ಕೊರೆಯುವ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಮತ್ತೊಂದು ಟಿಬಿಎಂ(ಟನಲ್ ಬೋರಿಂಗ್ ಮಷಿನ್) ‘ವಿಂಧ್ಯಾ’ ಶಾದಿಮಹಲ್ ಬಳಿ ಹೊರಬಂದಿದೆ.

ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು 855 ಮೀಟರ್ ಸುರಂಗ ಕೊರೆದಿದ್ದ ವಿಂದ್ಯಾ ಟಿಬಿಎಂ, 2022ರ ಆಗಸ್ಟ್‌ 18ರಂದು ಹೊರಬಂದಿತ್ತು. ಮುಂದುವರಿದು 680 ಮೀಟರ್ ಸುರಂಗ ಕೊರೆದು ಶಾದಿ ಮಹಲ್‌ ಬಳಿ ಶುಕ್ರವಾರ ಹೊರ ಬಂದಿದೆ. ಈ ಯಂತ್ರವು ಒಟ್ಟಾರೆ 2394 ಮೀಟರ್ ಸುರಂಗವನ್ನು ಯಶಸ್ವಿಯಾಗಿ ಕೊರೆದಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT