ಭಾನುವಾರ, ಜುಲೈ 3, 2022
26 °C
ಬಜೆಟ್‌ನಲ್ಲಿ ಅನುದಾನ ಮೀಸಲಿಗೆ ‘ನಮ್ಮೂರ ಭೂಮಿ ನಮಗಿರಲಿ’ ವೇದಿಕೆ ಒತ್ತಾಯ

ರೈತ ಯೋಜನೆ ಮರುಚಾಲನೆಗೆ ಸಲಹೆ

ಪ್ರಜಾವಾಣಿ ವರದಿ Updated:

ಅಕ್ಷರ ಗಾತ್ರ : | |

ನಮ್ಮೂರ ಭೂಮಿ ನಮಗಿರಲಿ’ ವೇದಿಕೆ

ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ಕೈಬಿಟ್ಟಿರುವ ಹಲವು ಉತ್ತಮ ಯೋಜನೆಗಳಿಗೆ ಮರುಚಾಲನೆ ನೀಡಬೇಕು. ಈ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ‘ನಮ್ಮೂರ ಭೂಮಿ ನಮಗಿರಲಿ’ ವೇದಿಕೆ ಸರ್ಕಾರಕ್ಕೆ ಒತ್ತಾಯಿಸಿದೆ.

‘ಕೃಷಿ ಭಾಗ್ಯ’ ಯೋಜನೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ 2014 ರಿಂದ 2018 ರವರೆಗೆ ₹600 ಕೋಟಿ ಮೀಸಲಿಡಲಾಗುತ್ತಿತ್ತು. ಈ ಯೋಜನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಜನಪ್ರಿಯವಾಗಿದ್ದ ಈ ಯೋಜನೆಯನ್ನು ಪುನರ್ ಪ್ರಾರಂಭಿಸಬೇಕು ಮತ್ತು ಎಲ್ಲ ಬಗೆಯ ರೈತರಿಗೂ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಬೇಕು ಎಂದು ವೇದಿಕೆ ಕೋರಿದೆ.

ಪಶು ಭಾಗ್ಯದಂತಹ ಉತ್ತಮ ಯೋಜನೆಗಳನ್ನು ಪುನರ್‌ ಆರಂಭಿಸಬೇಕು. ಜತೆಗೆ, ಎತ್ತು ಮತ್ತು ನಾಟಿ ಹಸುಗಳನ್ನು ಪಶುಭಾಗ್ಯ ಯೋಜನೆಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದೆ.

ಹಾಪ್‍ಕಾಮ್ಸ್‌ಗಳನ್ನು ಬಲಪಡಿಸುವ ಯೋಜನೆಯನ್ನು ಕೈಗೊಳ್ಳಬೇಕು ಮತ್ತು ಆವರ್ತ ನಿಧಿಯ ಮೊತ್ತವನ್ನು ಅವಶ್ಯಕತೆಗೆ ಅನುಗುಣವಾಗಿ ₹2,000 ಕೋಟಿಗಳಿಗೆ ಹೆಚ್ಚಿಸುವ ಯೋಜನೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ತಿಳಿಸಿದೆ.

ರಾಜ್ಯದಲ್ಲಿ ಶೇ 75 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರು ಬಹುತೇಕ ಮಳೆಯಾಶ್ರಿತರಾಗಿದ್ದಾರೆ. ಈ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಯಾಗಲು ಬಯಸಿದಲ್ಲಿ ಅಂತಹವರಿಗೆ ಪ್ರತಿ ಹೆಕ್ಟೇರ್‌ಗೆ ₹ 5 ಸಾವಿರದಂತೆ ಗರಿಷ್ಠ ₹10 ಸಾವಿರಗಳನ್ನು ಅವರ ಖಾತೆಗೆ ವರ್ಗಾಯಿಸುವ ಯೋಜನೆಗೆ ಮರುಚಾಲನೆ ನೀಡಬೇಕು ಮತ್ತು ಮೊತ್ತವನ್ನು ಹೆಚ್ಚಿಸಬೇಕು ಎಂದು ತಿಳಿಸಿದೆ.

ರೈತರ ಸಂತೆಗಳ ಬಗ್ಗೆ ಒಲವು ಹೆಚ್ಚಾಗುತ್ತಿದೆ. ರಾಜ್ಯ ಹೆದ್ದಾರಿಗಳನ್ನೂ ಒಳಗೊಂಡಂತೆ ರೈತರು ಅಲ್ಲಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ಇಂತಹ ನೂರು ರೈತರ ಸಂತೆಗಳಿಗೆ ಸ್ಥಳಗಳನ್ನು ಗುರುತಿಸಿ ಅಲ್ಲಿ ಕುಡಿಯುವ ನೀರು, ಶೌಚಾಲಯಗಳನ್ನು ಒಳಗೊಂಡಂತೆ  ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ವೇದಿಕೆಯ ಪರವಾಗಿ ಗಾಯತ್ರಿ, ಸುರೇಶ್ ಕಂಜರ್ಪಣೆ, ಶಾರದಾ ಗೋಪಾಲ್, ಜ್ಯೋತಿ ರಾಜ್, ಎಸ್. ನವೀನ್, ಪಿ.ಆರ್.ಎಸ್. ಮಣಿ, ರಮೇಶ್ ಸಂಕ್ರಾಂತಿ, ವತ್ಸಲಾ, ಶಶಿಕುಮಾರ್, ಪ್ರಶಾಂತ್ ಜಯರಾಂ, ಸಿದ್ಧಾರ್ಥ, ಹೇಮಲತಾ, ಶಿವಕುಮಾರ್, ಮಲ್ಲಿನಾಥ್ ಹೇಮಾಡಿ ಸೇರಿದಂತೆ 40 ಸಂಘಟನೆಗಳ ಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ‘ವೇದಿಕೆಯ ಪ್ರಸ್ತಾಪಿಸಿರುವ ಬಹುಪಾಲು ಯೋಜನೆಗಳು ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದವು. ಕೆಲವು ಹೊಸ ಯೋಜನೆಗಳಿವೆ. ಆದ್ದರಿಂದ, ರೈತರ ಪರವಾದ ಯೋಜನೆಗಳನ್ನು ಪರಿಶೀಲಿಸಿ ಈ ಬಜೆಟ್‌ನಲ್ಲಿ ಸೇರಿಸಿ ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕೃಷಿಕರ ಅಭಿವೃದ್ಧಿಗೆ ವೇದಿಕೆಯ ಸಲಹೆಗಳು

* ಕೆಎಂಎಫ್ ಮಾದರಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ(ಎಫ್‍ಪಿಒ) ಒಕ್ಕೂಟ ರಚಿಸಬೇಕು.

* ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರ ಪ್ರತಿ ಕುಟುಂಬಕ್ಕೆ ಕನಿಷ್ಠ ₹10 ಸಾವಿರ ರೂಪಾಯಿ ನೇರ ನಗದು ನೀಡುವ ಯೋಜನೆ ಘೋಷಿಸಬೇಕು.

* ಬೆಳೆ ಹಾನಿಗೆ ನೀಡಬೇಕಾದ ಪರಿಹಾರವನ್ನು ನಿರ್ಧರಿಸುವ ಹೊಣೆಯನ್ನು ಪಂಚಾಯಿತಿಗಳಿಗೆ ವಹಿಸಬೇಕು.

* ಪ್ರತಿ ರಾಗಿ ಖರೀದಿ ಕೇಂದ್ರದಲ್ಲೂ ಸ್ವಚ್ಛಗೊಳಿಸುವ ಯಂತ್ರಗಳನ್ನು ಸ್ಥಾಪಿಸಬೇಕು.

* ರಾಜ್ಯದಲ್ಲಿ ಶೇ 47ರಷ್ಟು ಭೂರಹಿತರು ಇರುವುದಾಗಿ 2011ರ ಎನ್‍ಎಸ್‍ಎಸ್ ಸಮೀಕ್ಷೆ ತಿಳಿಸಿದೆ. ಈಗಾಗಲೇ ಅರ್ಜಿಗಳನ್ನು ಹಾಕಿ 10ರಿಂದ 50 ವರ್ಷಗಳಿಂದಲೂ ಕಾಯುತ್ತಿರುವ 10 ಲಕ್ಷಕ್ಕೂ ಹೆಚ್ಚು ಜನರಿಗೆ ತುರ್ತಾಗಿ ಭೂಮಿ ಮಂಜೂರು ಮಾಡಬೇಕು.

* ಎಲ್ಲ ಪಡಿತ ಕಾರ್ಡುದಾರರಿಗೆ ವರ್ಷದ 12 ತಿಂಗಳು ಪೂರೈಸುವಷ್ಟು ರಾಗಿ-ಜೋಳವನ್ನು  ಕಡ್ಡಾಯವಾಗಿ ಖರೀದಿಸಬೇಕು. ತೊಗರಿಬೇಳೆ ಮತ್ತು ಅಡುಗೆ ಎಣ್ಣೆಗಳ ವಿತರಣೆಯನ್ನು ಮತ್ತೆ ಆರಂಭಿಸಬೇಕು.

* ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವುದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು